Ravi Bhushan: ಬಂಡುಕೋರರ ಪಡೆಗಳು (Syrian Rebels) ಸಿರಿಯಾ ಸರ್ಕಾರದ ವಿರುದ್ಧ ದೊಡ್ಡ ಸಮರವೇ ಸಾರಿರುವುದು ಇದೀಗ ನಮಗೆಲ್ಲಾ ತಿಳಿದ ವಿಷಯ. ಮಾಜಿ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ 24 ವರ್ಷಗಳ ಆಡಳಿತಕ್ಕೆ ಯುಗಾಂತ್ಯವಾಡಿದ ಬಂಡುಕೋರರ ಪಡೆ, ಸಿರಿಯಾವನ್ನು ಅಸ್ಸಾದ್ರಿಂದ ಸಂಪೂರ್ಣವಾಗಿ ಮುಕ್ತಗೊಳಿಸಿದೆ. ಸಿರಿಯಾದ ರಾಜಧಾನಿ ಡಮಾಸ್ಕಸ್ ಅನ್ನು ತಮ್ಮ ಸ್ವಾಧಿನಕ್ಕೆ ಪಡೆದುಕೊಂಡ ಬಂಡುಕೋರರು, ಬಶರ್ ಅಧಿಕಾರದಲ್ಲಿ ಏನೇನಿತ್ತೋ ಅದನ್ನೆಲ್ಲಾ ಇದೀಗ ತಮ್ಮ ಆಡಳಿತಕ್ಕೆ ತರುವಲ್ಲಿ ಮುಂದಾಗಿದ್ದಾರೆ. ತನ್ನ ಆಟ ಇಲ್ಲಿಗೆ ಮುಕ್ತಾಯ ಎಂಬುದನ್ನು ಅರಿತ ಬೆನ್ನಲ್ಲೇ ದೇಶದಿಂದ ಪಲಾಯನ ಮಾಡಿದ ಅಸ್ಸಾದ್, ಸದ್ಯ ರಷ್ಯಾದಲ್ಲಿ ತಮ್ಮ ಕುಟುಂಬದ ಜತೆ ನೆಲೆ ಕಂಡುಕೊಂಡಿದ್ದಾರೆ.
ಇದನ್ನೂ ಓದಿ: Champions Trophy ಸ್ವರೂಪದಲ್ಲಿ ಪ್ರಮುಖ ಬದಲಾವಣೆ? ಭಾರತ-ಪಾಕ್ ವಿವಾದದ ನಡುವೆಯೇ ಕೇಳಿ ಬಂತು ಹೊಸ ವಿಚಾರ
ಸಿರಿಯಾದ ಮೇಲೆ ಬಂಡುಕೋರರು ದಾಳಿ ನಡೆಸಿದ ಬೆನ್ನಲ್ಲೇ ಭಾರತೀಯ ಪ್ರಜೆಗಳ ಸುರಕ್ಷಿತಗೆ ಗಮನ ಕೊಟ್ಟ ಅಲ್ಲಿನ ಸಿರಿಯಾ ಮತ್ತು ಭಾರತದ ರಾಯಭಾರ ಕಚೇರಿ, ಯುದ್ಧ ಭೀತಿಯ ನಡುವೆ ಭಾರತೀಯರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಿದೆ. ಇದೀಗ ಸಿರಿಯಾದಿಂದ ತಾಯ್ನಾಡಿಗೆ ಬಂದಿಳಿದ ಮೊದಲ ಭಾರತದ ಪ್ರಜೆ ರವಿ ಭೂಷಣ್, ಸಿರಿಯಾ ಪರಿಸ್ಥಿತಿ, ನಡೆದ ಘಟನೆಗಳು, ಡಮಾಸ್ಕಸ್ ಮೇಲೆ ಬಂಡುಕೋರರ ದಾಳಿ ಮತ್ತು ಅಲ್ಲಿನ ಕರಾಳತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಸಿರಿಯಾದಿಂದ ಭಾರತಕ್ಕೆ ಮರಳಿದ 75 ಭಾರತೀಯ ಪ್ರಜೆಗಳ ಪೈಕಿ ಮೊದಲಿಗರಾದ ಗಾಜಿಯಾಬಾದ್ ನಿವಾಸಿ ರವಿ ಭೂಷಣ್, "ರಕ್ಷಣಾ ಕಾರ್ಯಾಚರಣೆ ಕುರಿತು ಸಂದೇಶಗಳ ಮೂಲಕ ಸಿರಿಯಾ ರಾಯಭಾರ ಕಚೇರಿ ಪ್ರತಿ ಗಂಟೆಗೂ ಭಾರತೀಯ ಪ್ರಜೆಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿತ್ತು. ನಮ್ಮನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆದುಕೊಂಡ ಬಂದ ಭಾರತ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದ. ಭಾರತವು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ನಾವುಗಳು ಸಿರಿಯಾದಿಂದ ರಕ್ಷಿಸಿದ ಮೊದಲ ತಂಡ ಎಂದು ಹೇಳಲಾಗಿದೆ. ಸಂದೇಶ, ಕರೆಯ ಮೂಲಕ ನಮ್ಮ ಬಗ್ಗೆ ಅಧಿಕಾರಿಗಳು ಆಗಾಗ್ಗೆ ವಿಚಾರಿಸಿಕೊಳ್ಳುತ್ತಿದ್ದರು" ಎಂದು ರವಿ ಹೇಳಿದ್ದಾರೆ.
"ಯಾರಾದರೂ ಆಹಾರ ಅಥವಾ ಯಾವುದಾದರೂ ಸಮಸ್ಯೆಯನ್ನು ಎದುರಿಸಿದರೆ, ಅವರಿಗೆ ತಕ್ಷಣವೇ ಬೇಕಾದ ವ್ಯವಸ್ಥೆಯನ್ನು ರಾಯಭಾರ ಕಚೇರಿಯ ಅಧಿಕಾರಿಗಳು ಪೂರೈಸುತ್ತಿದ್ದರು. ಬೇರೆ ದೇಶಗಳ ಜನರು ಅಲ್ಲಿ ಹೇಗೆ ನರಳುತ್ತಿದ್ದಾರೆ ಎಂಬುದನ್ನು ನಾವು ನೇರವಾಗಿ ನೋಡಿದ್ದೇವೆ. ಸಣ್ಣ ಮಕ್ಕಳು ಮತ್ತು ಮಹಿಳೆಯರನ್ನು 4ರಿಂದ5 ಡಿಗ್ರಿ ತಾಪಮಾನದಲ್ಲಿ ಸುಮಾರು 10ರಿಂದ 12 ಗಂಟೆಗಳ ಕಾಲ ಹೊರಗೆ ಕೂರಿಸುತ್ತಿದ್ದರು. ಇದನ್ನು ನೋಡಲು ಬಹಳ ಕಷ್ಟಕರವಾಗುತ್ತಿತ್ತು. ಒಂದು ರೀತಿ ಭಯಾನಕವಾಗಿತ್ತು. ಆದರೆ, ಭಾರತ ಸರ್ಕಾರದ ಸಹಾಯದಿಂದ ನಾವು ಅಂತಹ ಯಾವುದೇ ಸಮಸ್ಯೆಯನ್ನು ಎದುರಿಸಲಿಲ್ಲ" ಎಂದು ಭೂಷಣ್ ಹೇಳಿದ್ದಾರೆ,(ಏಜೆನ್ಸೀಸ್).