ನವದೆಹಲಿ: ಭಾರತೀಯ ರೈಲ್ವೇ(Indian Railway) ರಿಸರ್ವೇಶನ್ ಟಿಕೆಟ್ ಬುಕ್ಕಿಂಗ್ ನಿಯಮಗಳ ಬದಲಾವಣೆ ಮಾಡಿದೆ. ಇನ್ನುಮುಂದೆ ಟಿಕೆಟ್‌ಗಳನ್ನು 120 ದಿನಗಳಿಗೆ ಬದಲಾಗಿ ಪ್ರಯಾಣದ ದಿನಾಂಕಕ್ಕಿಂತ 60 ದಿನಗಳ ಮೊದಲು ಮಾತ್ರ ಮುಂಗಡವಾಗಿ ಬುಕ್ ಮಾಡಬಹುದು.
ಭಾರತೀಯ ರೈಲ್ವೇ ತನ್ನ ಸೇವೆಗಳಲ್ಲಿ ಎಐ (ಕೃತಕ ಬುದ್ಧಿಮತ್ತೆ) ಬಳಸಲು ಅನುವು ಮಾಡಿಕೊಡಲು ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಈ ಬದಲಾವಣೆಯು ಪ್ರಯಾಣಿಕರಿಗೆ ಬಯಸಿದ ಸೀಟನ್ನು ಹಂಚಿಕೆ ಮಾಡುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಈ ನಿಯಮವು ಮುಂಗಡ ಕಾಯ್ದಿರಿಸಿದ ರೈಲ್ವೆ ಟಿಕೆಟ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಎಕ್ಸ್‌ಪ್ರೆಸ್, ಸೂಪರ್‌ಫಾಸ್ಟ್ ಮತ್ತು ಎಲ್ಲಾ ರಿಸರ್ವೇಷನ್ ವ್ಯವಸ್ಥೆ ರೈಲುಗಳಿಗೆ ಅನ್ವಯಿಸುತ್ತದೆ.
ಈ ಹಿಂದೆ 90 ದಿನ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವ ಅವಕಾಶವಿತ್ತು. ನಂತರ ಅದನ್ನು 120 ದಿನಗಳಿಗೆ ಹೆಚ್ಚಿಸಲಾಯಿತು. ಪ್ರಸ್ತುತ, ತಂತ್ರಜ್ಞಾನದ ಸೇರ್ಪಡೆಯೊಂದಿಗೆ, ಪ್ರಯಾಣಿಕರಿಗೆ ಉತ್ತಮ ಸೇವೆಗಳನ್ನು ಒದಗಿಸಲು ರಿಸರ್ವೇಷನ್ ಟಿಕೆಟ್ ಬುಕಿಂಗ್ ಗಡುವನ್ನು 60 ದಿನಗಳವರೆಗೆ ಕಡಿಮೆ ಮಾಡಲಾಗಿದೆ.
ಕಾಯ್ದಿರಿಸುವ ರೈಲು ಟಿಕೆಟ್‌ಗಳ ಬುಕ್ಕಿಂಗ್‌ಗೆ ಸಂಬಂಧಿಸಿದಂತೆ ಭಾರತೀಯ ರೈಲ್ವೆ ತಂದಿರುವ ಹೊಸ ನಿಯಮವು ನವೆಂಬರ್ 1 ರಿಂದ ಜಾರಿಗೆ ಬರಲಿದೆ. ಈಗಾಗಲೇ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಯಾವುದೇ ತೊಂದರೆ ಇಲ್ಲ. ಹೊಸ ನಿಯಮವು ನ.1 ರಿಂದ ಟಿಕೆಟ್ ಕಾಯ್ದಿರಿಸುವವರಿಗೆ ಮಾತ್ರ ಅನ್ವಯಿಸುತ್ತದೆ. ನ. 1 ರಿಂದ ಪ್ರಯಾಣದ ದಿನಾಂಕಕ್ಕಿಂತ 60 ದಿನಗಳ ಮೊದಲು ಮಾತ್ರ ಕಾಯ್ದಿರಿಸುವ ಟಿಕೆಟ್ ಅನ್ನು ಬುಕ್ ಮಾಡಬಹುದು ಎಂದು ಭಾರತೀಯ ರೈಲ್ವೇ ಪ್ರಕಟಣೆಯಲ್ಲಿ ತಿಳಿಸಿದೆ.