ನ್ಯೂಸ್

ಗೋಲ್ಡ್​ ಬಿಕಿನಿಯಲ್ಲಿ ಹಿಂದೂ ದೇವತೆಯಂತೆ ವೇಷ ಧರಿಸಿದ ಭಾರತೀಯ ಮೂಲದ ರ‍್ಯಾಪರ್: ಭಾರೀ ಆಕ್ರೋಶ! Hindu goddess

Hindu goddess : ಮ್ಯೂಸಿಕ್​ ಆಲ್ಬಮ್‌ ಒಂದರಲ್ಲಿ ಹಿಂದು ದೇವತೆ ಕಾಳಿಯನ್ನು ಅಶ್ಲೀಲವಾಗಿ ಚಿತ್ರಿಸಿದ ಭಾರತೀಯ ಮೂಲದ ಕೆನಡಾ ರ‍್ಯಾಪರ್‌ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.

ತಮಿಳು-ಸ್ವೀಡಿಷ್ ಮೂಲದ ಗಾಯಕಿ ಜೆನೆಸಿಸ್ ಯಾಸ್ಮಿನ್ ಮೋಹನ್ ರಾಜ್ ಅಲಿಯಾಸ್​ ಟಾಮಿ ಜೆನೆಸಿಸ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಟಾಮಿ ಅವರ 'ಟ್ರೂ ಬ್ಲೂ' ಹಾಡಿನ ವಿಡಿಯೋ ಇತ್ತೀಚೆಗೆ ಬಿಡುಗಡೆಯಾಗಿದ್ದು, ಇದು ಚರ್ಚೆಯ ವಿಷಯವಾಗಿದೆ. ಟ್ರೂ ಬ್ಲೂ ಎಂಬುದು ಜೆನೆಸಿಸ್​ ಅವರ ಮುಂಬರುವ ಆಲ್ಬಮ್​ ಜೆನೆಸಿಸ್​ನ ಹಾಡಾಗಿದೆ. ಇದರಲ್ಲಿ ಗಾಯಕಿ ಕಾಳಿ ದೇವತೆಯಾಗಿ ಕಾಣಿಸಿಕೊಂಡಿದ್ದಾರೆ.

ಆಲ್ಬಮ್‌ನಲ್ಲಿ ನೀಲಿ ಬಣ್ಣದ ಬಾಡಿ ಪೇಂಟ್, ಚಿನ್ನದ ಆಭರಣ ಮತ್ತು ಚಿನ್ನದ ಬಣ್ಣದ ಬಿಕಿನಿಯನ್ನು ಧರಿಸಿದ್ದಾರೆ. ಆಕೆಯ ಹಣೆಯಲ್ಲಿ ಹಿಂದುಗಳ ಸಂಕೇತವಾದ ಕೆಂಪು ಚುಕ್ಕೆ ಕೂಡ ಇದೆ. ಆಲ್ಬಮ್‌ನಲ್ಲಿ ಕಾಳಿ ದೇವಿಯನ್ನು ಅಶ್ಲೀಲವಾಗಿ ಚಿತ್ರಿಸಲಾಗಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ.

ಅಲ್ಲದೆ, ಗಾಯಕಿ ಟಾಮಿ ತಮ್ಮ ಕೈಯಲ್ಲಿ ಶಿಲುಬೆಯನ್ನು ಸಹ ಹಿಡಿದಿದ್ದಾರೆ. ಇದು ಕೂಡ ಟೀಕೆಗೆ ಕಾರಣವಾಗಿದೆ. ಹಾಡಿನ ಸಮಯದಲ್ಲಿ, ಟಾಮಿ ಶಿಲುಬೆಯನ್ನು ನೆಕ್ಕುತ್ತಾ ಕೈಗಳನ್ನು ಮಡಚಿಕೊಳ್ಳುತ್ತಿರುವುದು ಕಂಡುಬರುತ್ತದೆ. ಈ ಹಾಡಿಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಈ ಹಾಡು ಹಿಂದುಗಳು ಮತ್ತು ಕ್ರಿಶ್ಚಿಯನ್ನರನ್ನು ಅವಮಾನಿಸುತ್ತದೆ ಎಂದು ಕೆಲವರು ಆರೋಪಿಸಿದ್ದಾರೆ.

ಇದು ದೇವದೂಷಣೆ, ಹಿಂದೂ ಭಾವನೆಗಳಿಗೆ ನೋವುಂಟು ಮಾಡುವುದು ಫ್ಯಾಷನ್ ಆಗಿಬಿಟ್ಟಿದೆ. ಯಾರೂ ಆಕ್ಷೇಪಿಸುವುದಿಲ್ಲ ಎಂದು ಅವರಿಗೆ ತಿಳಿದಿದೆ. ಹೀಗಾಗಿಯೇ ಈ ರೀತಿ ಹುಚ್ಚು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಇತರರು ಕಾಮೆಂಟ್ ಮಾಡಿದ್ದಾರೆ. ಪ್ರಖ್ಯಾತಿ ಗಳಿಸಲು ಎಂಥಾ ಕೀಳು ಮಟ್ಟಕ್ಕಾದರೂ ಇಳಿಯುತ್ತಾರೆಂದು ಇನ್ನು ಕೆಲವರು ಕಾಮೆಂಟ್​ಗಳ ಮೂಲಕ ಟಾಮಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್​)