ನವದೆಹಲಿ: ತರಬೇತಿ ಹಾರಾಟದಲ್ಲಿದ್ದ ಭಾರತೀಯ ನೌಕಾಪಡೆಯ ಚೇತಕ್ ಹೆಲಿಕಾಪ್ಟರ್ ಲಿಫ್ಟ್ ಆಫ್ ಆದ ಕೂಡಲೇ ಪತನಗೊಂಡಿದೆ. ಕೊಚ್ಚಿಯ ಸೌತ್ ನೇವಲ್ ಕಮಾಂಡ್ ಪ್ರಧಾನ ಕಚೇರಿಯಲ್ಲಿರುವ ಐಎನ್ಎಸ್ ಗರುಡ ರನ್ ವೇಯಲ್ಲಿ ಈ ಘಟನೆ ನಡೆದಿದೆ.
ಅಪಘಾತದಲ್ಲಿ ನೌಕಾಪಡೆಯ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ. ಹೆಲಿಕಾಪ್ಟರ್‌ನ ಪೈಲಟ್ ಸೇರಿದಂತೆ ಇಬ್ಬರಿಗೆ ಗಾಯಗಳಾಗಿವೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ. ಗಾಯಾಳುಗಳನ್ನು ನೌಕಾಪಡೆಯ ಪ್ರಧಾನ ಕಚೇರಿಯ ಸಂಜೀವನಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ ಮಧ್ಯಾಹ್ನ 2.30ರ ಸುಮಾರಿಗೆ ನಿತ್ಯದ ತರಬೇತಿ ವೇಳೆ ಹೆಲಿಕಾಪ್ಟರ್ ಪತನವಾಗಿದ್ದು, ಇದೇ ವೇಳೆ ರನ್‌ವೇಯಲ್ಲಿದ್ದ ನೌಕಾಪಡೆಯ ಅಧಿಕಾರಿ ಹೆಲಿಕಾಪ್ಟರ್‌ನ ರೋಟರ್ ಬ್ಲೇಡ್‌ಗಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಅಪಘಾತಕ್ಕೆ ಸಂಬಂಧಿಸಿ ಭಾರತೀಯ ನೌಕಾಪಡೆಯಿಂದ ದೃಢೀಕೃತ ಮಾಹಿತಿಗಾಗಿ ಕಾಯಲಾಗುತ್ತಿದೆ. ಅಪಘಾತದ ನಂತರ ಕೊಚ್ಚಿ ಹಾರ್ಬರ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.