ನ್ಯೂಸ್

ಬಾಂಗ್ಲಾ ನೆಂಟರ ಮನೆಗೆ ತೆರಳಿದ್ದ ಭಾರತೀಯ 37ವರ್ಷದ ಬಳಿಕ ತಾಯ್ನಾಡಿಗೆ ಬಂದ! ಷಹಜಹಾನ್​ನ ಕಣ್ಣೀರ ಕಥೆಯಿದು..

ಅಗರ್ತಲಾ: ಬಾಂಗ್ಲಾ ದೇಶದಲ್ಲಿ ನೆಂಟರ ಮನೆಗೆ ಹೋಗಿ ಜೈಲು ಸೇರಿದ್ದ ಭಾರತೀಯ ವ್ಯಕ್ತಿ 37 ವರ್ಷದ ನಂತರ ಜೈಲಿನಿಂದ ಬಿಡುಗಡೆಗೊಂಡರು. ಮಂಗಳವಾರ ಆತ ತನ್ನ ಹುಟ್ಟೂರಿಗೆ ಬಂದಿದ್ದು, ಮನೆಯಲ್ಲಿದ್ದ ಪತ್ನಿ ಹಾಗೂ ಮಗನನ್ನು ಕಂಡು ಸಂತಸದಲ್ಲಿ ಮಿಂದೆದ್ದಿದ್ದಾರೆ. ನನಗಿದು ಪುನರ್ಜನ್ಮ ಎಂದಿದ್ದಾರೆ ತ್ರಿಪುರಾ ವಾಸಿ ಷಹಜಹಾನ್.

ತ್ರಿಪುರಾದ ಸೆಪಹಿಜಾಲಾ ಜಿಲ್ಲೆಯ ರವೀಂದ್ರನಗರ ಭಾರತ-ಬಾಂಗ್ಲಾದೇಶ ಗಡಿಯಲ್ಲಿದೆ. ಈ ಗ್ರಾಮದ ಷಹಜಹಾನ್​ 1988 ರಲ್ಲಿ ಅವರು ನೆರೆಯ ಬಾಂಗ್ಲಾದೇಶದ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು. ಇದೇ ವೇಳೆ ಪೊಲೀಸರು ಮನೆಯಲ್ಲಿ ತಪಾಸಣೆ ನಡೆಸಿದರು. ಅನುಮತಿಯಿಲ್ಲದೆ ಬಾಂಗ್ಲಾದೇಶಕ್ಕೆ ಬಂದಿದ್ದರಿಂದ ಪೊಲೀಸರು ಬಂಧಿಸಿದ್ದರು. ಬಾಂಗ್ಲಾದೇಶದ ಕೊಮಿಲ್ಲಾ ನ್ಯಾಯಾಲಯ ಆತನಿಗೆ 11 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಶಿಕ್ಷೆ ಮುಗಿದ ಅಲ್ಲಿನ ಅಧಿಕಾರಿಗಳು ಬಿಡಲಿಲ್ಲ. ಮತ್ತೆ 26 ವರ್ಷ ಕಾಲ ಅವರ ವಶದಲ್ಲಿದ್ದರು.

ಮಾಧ್ಯಮಗಳಲ್ಲಿ ಈ ವಿಷಯದ ಬಗ್ಗೆ ಸಾಕಷ್ಟು ಬಾರಿ ಪ್ರಕಟವಾಗಿದೆ. ಕಡೆಗೆ ಇದಕ್ಕೆ ಜರಾ ಫೌಂಡೇಶನ್ ಪ್ರತಿಕ್ರಿಯಿಸಿ, ಷಹಜಹಾನ್‌ನನ್ನು ಜೈಲಿನಿಂದ ಬಿಡುಗಡೆ ಮಾಡಲು ಮಧ್ಯಪ್ರವೇಶಿಸುವಂತೆ ಅದು ಉಭಯ ದೇಶಗಳ ಉನ್ನತ ಅಧಿಕಾರಿಗಳಿಗೆ ಪದೇ ಪದೇ ಮನವಿ ಮಾಡಿತ್ತು. ಇದರ ಫಲವಾಗಿ ಆಗಸ್ಟ್ 20 ರಂದು ಬಾಂಗ್ಲಾ ಜೈಲಿನಿಂದ ಷಹಜಹಾನ್ ಬಿಡುಗಡೆಯಾದರು.

ಆತ 25 ನೇ ವಯಸ್ಸಿನಲ್ಲಿ ಜೈಲಿಗೆ ಹೋಗಿದ್ದು, ಆ ಸಮಯದಲ್ಲಿ ಹೆಂಡತಿ ಗರ್ಭಿಣಿಯಾಗಿದ್ದಳು. ಪ್ರಸ್ತುತ ಷಹಜಹಾನ್ ಗೆ 62 ವರ್ಷವಾಗಿದೆ.