ನ್ಯೂಸ್

ಆಸ್ಟ್ರೇಲಿಯಾ ಕಠಿಣ ಕಾನೂನಿಗೆ ಬೇಸತ್ತು ಸಾವಿಗೆ ಶರಣು: ಕೊರಿಯರ್ ಮೂಲಕ ಮನೆಗೆ ಬಂದ ಡೆತ್​ನೋಟ್​ನಲ್ಲಿತ್ತು ನೋವಿನ ನುಡಿ

ಧಾರವಾಡ: ಪುತ್ರನ ಅನಾರೋಗ್ಯ ಹಾಗೂ ಆಸ್ಟ್ರೇಲಿಯಾದ ಕಠಿಣ ಕಾನೂನಿನ ವಿರುದ್ಧ ಹೋರಾಡಲಾಗದೆ ಧಾರವಾಡ ಮೂಲದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

ನಗರದ ಸಪ್ತಾಪುರ ನಿವಾಸಿ ಎಸ್.ಎಸ್. ದೇಸಾಯಿ ಪುತ್ರಿ ಪ್ರಿಯದರ್ಶಿನಿ ಪಾಟೀಲ (40) ಮೃತದೇಹ ಆ.20ರಂದು ಸವದತ್ತಿ ತಾಲೂಕಿನ ವಟ್ನಾಳ ಗ್ರಾಮದ ಬಳಿಯ ನವಿಲುತೀರ್ಥ ಜಲಾಶಯದ ಹಿನ್ನೀರಿನಲ್ಲಿ ಪತ್ತೆಯಾಗಿತ್ತು. ಇವರ ಪತಿ ಲಿಂಗರಾಜ ಪಾಟೀಲ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದು, ಪುತ್ರ ಅಮರ್ತ್ಯ, ಪುತ್ರಿ ಅಪರಾಜಿತ ಜತೆ ಅಲ್ಲಿಯೇ ವಾಸವಾಗಿದ್ದರು.

ಕೆಲ ವರ್ಷಗಳಿಂದ ಪುತ್ರ ಅಮರ್ತ್ಯ ಆರೋಗ್ಯದಿಂದ ಬಳಲುತ್ತಿದ್ದ. ಇದರಿಂದ ನೊಂದಿದ್ದ ಪ್ರಿಯದರ್ಶಿನಿ, ಆಸ್ಪತ್ರೆಯ ವೈದ್ಯರ ವೈಫಲ್ಯ ಎಂದು ದೂರು ದಾಖಲಿಸಿದ್ದರು. ಆದರೆ, ಆಸ್ಟ್ರೇಲಿಯಾ ಕಾನೂನಿನಂತೆ ಮಕ್ಕಳನ್ನು ನೋಡಿಕೊಂಡಿಲ್ಲ ಎಂಬ ಆರೋಪ ಇವರ ವಿರುದ್ಧವೇ ಕೇಳಿಬಂದಿತ್ತು. ಹೀಗಾಗಿ ಅಲ್ಲಿನ ಸರ್ಕಾರ ಇಬ್ಬರೂ ಮಕ್ಕಳನ್ನು ವಶಕ್ಕೆ ತೆಗೆದುಕೊಂಡು ಪೋಷಣೆ ಮಾಡುತ್ತಿತ್ತು. ಮಕ್ಕಳನ್ನು ಸ್ವದೇಶಕ್ಕೆ ಕರೆತರಲು ಪ್ರಯತ್ನಿಸಿದ್ದ ಪ್ರಿಯದರ್ಶಿನಿ, ಆಸ್ಟ್ರೇಲಿಯಾದ ಕಠಿಣ ಕಾನೂನುಗಳ ಎದುರು ಸೋತಿದ್ದರು. ಆಸ್ಟ್ರೇಲಿಯಾದ ಪೌರತ್ವ ಪಡೆದಿದ್ದ ಮಕ್ಕಳು ಅತಂತ್ರರಾದರು ಎಂಬ ಕೊರಗಿನಲ್ಲಿ ತವರುಮನೆಗೆ ಹೋಗುವುದಾಗಿ ಹೇಳಿ ಆ.18ರಂದು ಸಿಡ್ನಿಯಿಂದ ಹೊರಟಿದ್ದರು. ಬೆಂಗಳೂರಿಗೆ ಬಂದು ಅಲ್ಲಿಂದ ತವರು ಮನೆಗೆ ಹೋಗದೆ ಸವದತ್ತಿಗೆ ಹೋಗಿ ನವಿಲುತೀರ್ಥ ಜಲಾಶಯದ ಹಿನ್ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದಕ್ಕೂ ಮೊದಲು ಪ್ರಿಯದರ್ಶಿನಿ ತನ್ನಲ್ಲಿದ್ದ ಹಣ ಹಾಗೂ ಚಿನ್ನಾಭರಣಗಳನ್ನು ಬ್ಯಾಗ್​ನಲ್ಲಿಟ್ಟು ತವರು ಮನೆಯ ವಿಳಾಸಕ್ಕೆ ಕೊರಿಯರ್ ಮಾಡಿದ್ದರು. ಅದರಲ್ಲಿ ಪತ್ರವೊಂದು ಪತ್ತೆಯಾಗಿದ್ದು, ಆಸ್ಟ್ರೇಲಿಯಾದ ಕಾನೂನು ವ್ಯವಸ್ಥೆಯ ಬಗ್ಗೆಯೂ ವಿವರಿಸಿದ್ದಾರೆ. ಘಟನೆ ಕುರಿತು ಮೃತಳ ತಂದೆ ಎಸ್.ಎಸ್. ದೇಸಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನ್ನ ಪುತ್ರನ ಪಾಲನೆಯ ವಿಚಾರವಾಗಿ ಚಿಂತೆಗೀಡಾಗಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವಿವರಿಸಿದ್ದಾರೆ. ತಮಗೆ ಆಗಿರುವ ಅನ್ಯಾಯದ ವಿರುದ್ಧ ಭಾರತ ಸರ್ಕಾರದ ಮೂಲಕ ಕಾನೂನು ಹೋರಾಟ ಮಾಡುವುದಾಗಿಯೂ ಅವರು ತಿಳಿಸಿದ್ದಾರೆ.

ಪತ್ನಿಯ ಆತ್ಮಹತ್ಯೆ ವಿಷಯ ತಿಳಿದು ಆಸ್ಟ್ರೇಲಿಯಾದಿಂದ ಹೊರಟಿದ್ದ ಪತಿ ಲಿಂಗರಾಜ ಪಾಟೀಲ, ಗುರುವಾರ ಧಾರವಾಡ ತಲುಪಿದರು. ಅವರ ಆಗಮನಕ್ಕಾಗಿ ಕಾದಿದ್ದ ಕುಟುಂಬ ಸದಸ್ಯರು, ಪ್ರಿಯದರ್ಶಿನಿಯ ಅಂತ್ಯಸಂಸ್ಕಾರ ನೆರವೇರಿಸಿದರು.

ಮೃತ ಪ್ರಿಯದರ್ಶಿನಿ ಮನೆಗೆ ತೆರಳಿದ್ದ ಕುಟುಂಬದ ಆಪ್ತ, ಮಾಜಿ ಮೇಯರ್ ಈರೇಶ ಅಂಚಟಗೇರಿ ಘಟನೆಯನ್ನು ಸಂಸದ ಪ್ರಲ್ಹಾದ ಜೋಶಿಯವರ ಗಮನಕ್ಕೆ ತರುತ್ತೇನೆ. ಅವರ ಮೂಲಕ ಆಸ್ಟ್ರೇಲಿಯಾದ ರಾಯಭಾರಿ ಕಚೇರಿಯನ್ನು ಸಂರ್ಪಸಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.