ಮುಂಬೈ: ಭಾರತೀಯ ಷೇರು ಮಾರುಕಟ್ಟೆಯು ಮೊದಲ ಬಾರಿಗೆ 4 ಟ್ರಿಲಿಯನ್ ಡಾಲರ್ (4 ಲಕ್ಷ ಕೋಟಿ ಡಾಲರ್. ರೂಪಾಯಿಗಳಲ್ಲಿ ಹೇಳುವುದಾದರೆ ಅಂದಾಜು 333 ಲಕ್ಷ ಕೋಟಿ.) ಕ್ಲಬ್‌ಗೆ ಪ್ರವೇಶಿಸಿದೆ. ಈ ಮೂಲಕ ಮಾರುಕಟ್ಟೆ ಬಂಡವಾಳದಲ್ಲಿ ಬಿಎಸ್ಇ ದಾಖಲೆ ಬರೆದಿದೆ.
ಬಿಎಸ್ಇ ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯಮಾಪನವು ಮೊದಲ ಬಾರಿಗೆ ಬುಧವಾರದಂದು 4 ಟ್ರಿಲಿಯನ್ ಡಾಲರ್ ಮೈಲಿಗಲ್ಲನ್ನು ತಲುಪಿದೆ. ಇನ್ನೂ ಸರಳವಾಗಿ ಹೇಳುವುದಾದರೆ, ಬಿಎಸ್ಇ ಷೇರು ಮಾರುಕಟ್ಟೆಯಲ್ಲಿ ಷೇರು ವಹಿವಾಟು ನಡೆಸುವ ಎಲ್ಲ ಕಂಪನಿಗಳ ಒಟ್ಟು ಮೌಲ್ಯವು 4 ಟ್ರಿಲಿಯನ್ ಡಾಲರ್ಗೆ ತಲುಪಿದೆ.
ಬುಧವಾರ ವಹಿವಾಟು ಆರಂಭವಾದ ತಕ್ಷಣವೇ 30-ಷೇರುಗಳ ಬಿಎಸ್ಇ ಸೂಚ್ಯಂಕವು 305 ಅಂಕಗಳ ಏರಿಕೆ ಕಂಡು 66,479.64 ಕ್ಕೆ ತಲುಪಿತು. ಈ ಮೂಲಕ ಬಿಎಸ್‌ಇ ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಮಾರುಕಟ್ಟೆ ಬಂಡವಾಳವು 3,33,26,881.49 ಕೋಟಿ ರೂಪಾಯಿಗೆ (4 ಟ್ರಿಲಿಯನ್ ಡಾಲರ್) ತಲುಪಿತು, ಈ ಮೂಲಕ ಭಾರತೀಯ ಷೇರು ಮಾರುಕಟ್ಟೆಯು ಮೊದಲ ಬಾರಿಗೆ 4 ಟ್ರಿಲಿಯನ್ ಡಾಲರ್ ಕ್ಲಬ್ ಪ್ರವೇಶಿಸಿದೆ. ಈ ಕ್ಲಬ್ ಪ್ರವೇಶಿಸಿರುವ ಇತರ ರಾಷ್ಟ್ರಗಳೆಂದರೆ ಅಮೆರಿಕ, ಚೀನಾ, ಜಪಾನ್ ಮತ್ತು ಹಾಂಗ್ ಕಾಂಗ್.
ಬಿಎಸ್ಇಯಲ್ಲಿ ಪಟ್ಟಿ ಮಾಡಲಾದ ಎಲ್ಲ ಕಂಪನಿಗಳ ಮಾರುಕಟ್ಟೆ ಬಂಡವಾಳವು 3 ಟ್ರಿಲಿಯನ್ ಡಾಲರ್ ಗಡಿಯನ್ನು 2021ರ ಮೇ 24ರಂದು ಮುಟ್ಟಿತ್ತು. ಈ ವರ್ಷದ ಸೆಪ್ಟೆಂಬರ್ 15 ರಂದು 30-ಷೇರುಗಳ ಬಿಎಸ್ಇ ಸೂಚ್ಯಂಕವು ಸಾರ್ವಕಾಲಿಕ ಗರಿಷ್ಠ 67,927.23 ಅಂಕಗಳಿಗೆ ತಲುಪಿದ್ದನ್ನು ಇಲ್ಲಿ ಸ್ಮರಿಸಬಹುದು. ಬಿಎಸ್‌ಇ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಈ ವರ್ಷ ಇಲ್ಲಿಯವರೆಗೆ 5,540.52 ಅಂಕ ಅಥವಾ ಶೇಕಡಾ 9.10 ರಷ್ಟು ಏರಿಕೆ ಕಂಡಿದೆ, ಬಿಎಸ್ಇಯಲ್ಲಿ ಪಟ್ಟಿ ಮಾಡಲಾದ ಎಲ್ಲ ಕಂಪನಿ ಮತ್ತು ಸಂಸ್ಥೆಗಳ ಮಾರುಕಟ್ಟೆ ಬಂಡವಾಳವು 50.81 ಲಕ್ಷ ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ.