ನ್ಯೂಸ್

ಪ್ರತಿಷ್ಟಿತ ಕಾರು ಶೋರೂಮ್​ನಲ್ಲಿ ಅವಮಾನ; ಈಗ ಐಷಾರಾಮಿ ಕಾರುಗಳ ಒಡೆಯ ಭಾರತದ ಈ ಬಿಲಿಯನೇರ್​

ನವದೆಹಲಿ: ಭಾರತದ ಹೆಸರಾಂತ ಆಭರಣ ಮಳಿಗೆಗಳಲ್ಲಿ ಒಂದಾದ ಜೋಯಾಲುಕ್ಕಾಸ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಾಯ್ ಅಲುಕ್ಕಾಸ್ ಅವರು ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ದೇಶದ ಅಗ್ರ 50 ಶ್ರೀಮಂತರಲ್ಲಿ ಒಬ್ಬರಾದ ಅಲುಕ್ಕಾಸ್​ ಅವರು ತಮ್ಮ ಮೊದಲ ರೋಲ್ಸ್ ರಾಯ್ಸ್ ಖರೀದಿಸಿದ ಸಂದರ್ಭ ಹಾಗೂ ಐಷಾರಾಮಿ ಕಾರುಗಳನ್ನು ಕೊಳ್ಳಲು ಕಾರಣವಾದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.

ರೋಲ್ಸ್-ರಾಯ್ಸ್ ಡೀಲರ್‌ಶಿಪ್‌ನಲ್ಲಿನ ಸಿಬ್ಬಂದಿಯಿಂದ ಅವಮಾನಿಸಿಕೊಂಡ ಸನ್ನಿವೇಶವನ್ನು ಇತ್ತೀಚಿಗಿನ ಸಂದರ್ಶವೊಂದರಲ್ಲಿ ಬಹಿರಂಗಪಡಿಸಿದ್ದಾರೆ. 2000ನೇ ವರ್ಷದಲ್ಲಿ ದುಬೈನಲ್ಲಿ ರೋಲ್ಸ್ ರಾಯ್ಸ್ ಕಾರು ಶೋರೂಮ್​​​​​ಗೆ ಹೋಗಿದ್ದೆ. ಸಿಬ್ಬಂದಿ ಒಬ್ಬರು ಬಂದು ಏನು ಬೇಕು ಎಂದು ಕೇಳಿದರು. ನಾನು ರೋಲ್ಸ್​​ ರಾಯ್ಸ್​​ ಕಾರನ್ನು ನೋಡಲು ಬಂದಿದ್ದೇನೆ ಎಂದು ಹೇಳಿದೆ.

ನಾನು ಸಿಂಪಲ್​ ಆಗಿರುವುದನ್ನು ಕಂಡು ರೋಲ್ಸ್ ರಾಯ್ಸ್ ಕಾರುಗಳನ್ನು ಖರೀದಿಸುವಷ್ಟು ಶ್ರೀಮಂತನಲ್ಲ ಎಂದು ಭಾವಿಸಿ ಸಿಬ್ಬಂದಿ, ನೀವು ಕಾರು ಕೊಳ್ಳಲು ಬಯಸಿದರೆ ಹತ್ತಿರದ ಮಿತ್ಸುಬಿಷಿ ಶೋರೂಮ್​​​ಗೆ ಹೋಗಿ ಅಲ್ಲಿ ಐಷಾರಾಮಿ ಕಾರುಗಳು ಸಿಗುತ್ತವೆ ಎಂದು ವ್ಯಂಗ್ಯವಾಡಿದರು. ಆತನ ನಡುವಳಿಕೆಯಿಂದ ನನಗೆ ಮುಜುಗರವಾಯಿತು. ಬಳಿಕ ರೋಲ್ಸ್ ರಾಯ್ಸ್ ಕಾರನ್ನು ಖರೀದಿಸಿದೆ ಆದರೆ ನಾನು ಅದನ್ನು ಬಳಸಲಿಲ್ಲ. ಆ ರೋಲ್ಸ್​ ರಾಯ್ಸ್​​ ಕಾರನ್ನು ಜಾಯ್ ಅಲುಕ್ಕಾಸ್ ಗೋಲ್ಡ್ ಜ್ಯುವೆಲ್ಲರಿ ನಡೆಸಿದ ಬಂಪರ್ ಡ್ರಾದಲ್ಲಿ ಪ್ರಥಮ ಬಹುಮಾನ ಪಡೆದವರಿಗೆ ನೀಡಲಾಯಿತು ಎಂದು ತಿಳಿಸಿದರು.

ಈಗ ಜಾಯ್ ಅಲುಕ್ಕಾಸ್ ಅವರ ಬಳಿ ಸಾಕಷ್ಟು ಐಷಾರಾಮಿ ಕಾರುಗಳಿವೆ. ಆ ಬಗ್ಗೆ ಮಾತನಾಡಿದ ಅವರು, ಐಷಾರಾಮಿ ಕಾರುಗಳೆಂದರೆ ಇಷ್ಟವಾದರೂ ಆ ಅನುಭವದ ನಂತರ ಆ ಸಂದರ್ಭದಲ್ಲಿ ಮನಸ್ಸು ಬದಲಾಯಿಸಿಕೊಳ್ಳಲು ಪ್ರಯತ್ನಿಸಿದೆ ಎಂದು ಹೇಳಿದರು. ಪ್ರಸ್ತುತ ನಂತರ ದೇಶ-ವಿದೇಶಗಳಲ್ಲಿ ತಮ್ಮ ವ್ಯಾಪಾರ ವಿಸ್ತರಿಸುತ್ತಿದ್ದಂತೆ ಐಷಾರಾಮಿ ಕಾರುಗಳನ್ನು ಕೊಳ್ಳುವ ಆಸೆಯೂ ಈಡೇರಿದೆ. ಎಷ್ಟೇ ಹಣ ಸಂಪಾದಿಸಿದರೂ ಸರಳವಾಗಿರಬಹುದು ಎಂಬುದನ್ನು ಸಾಬೀತುಪಡಿಸಿದ ಅವರು ಸ್ವಾಭಿಮಾನ ದೊಡ್ಡದು ಎಂದ ತೋರಿಸಿಕೊಟ್ಟಿದ್ದಾರೆ.

ಮೊದಲೆಲ್ಲಾ ರೋಲ್ಸ್ ರಾಯ್ಸ್ ಕಾರುಗಳನ್ನು ಸಮಾಜದಲ್ಲಿ ಪ್ರತಿಷ್ಠಿತರಿಗೆ ಮಾತ್ರ ಮಾರಾಟ ಮಾಡಲಾಗುತಿತ್ತು ಎಂದು ಹೇಳಲಾಗುತ್ತದೆ. ಕಂಪನಿಯ ಪ್ರತಿನಿಧಿಗಳು ಕಾರನ್ನು ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಗಳು ಮಾತ್ರ ಬಳಸಬೇಕೆಂದು ಬಯಸುತ್ತಿದ್ದರು. ಈಗ ರೋಲ್ಸ್ ರಾಯ್ಸ್ ಕಾರುಗಳು ವ್ಯಾಪಕವಾಗಿ ಲಭ್ಯವಿವೆ. ಸಮಾಜದಲ್ಲಿ ಸ್ಥಿತಿವಂತರು ರೋಲ್ಸ್ ರಾಯ್ಸ್ ಕಾರುಗಳನ್ನು ಸುಲಭವಾಗಿ ಖರೀದಿಸುತ್ತಿದ್ದಾರೆ. (ಏಜೆನ್ಸೀಸ್​​)