ನ್ಯೂಸ್

ಭ್ರಷ್ಟಾಚಾರ, ಕೋಮುವಾದಕ್ಕೆ ದೇಶದಲ್ಲಿ ಜಾಗವಿಲ್ಲ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: 2047ರ ವೇಳೆಗೆ ಭಾರತ ಅಭಿವೃದ್ದಿ ಹೊಂದಿದ ದೇಶವಾಗಲಿದ್ದು ಭ್ರಷ್ಟಾಚಾರ ಮತ್ತು ಕೋಮುವಾದಕ್ಕೆ ಯಾವುದೇ ಜಾಗವಿರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ಧಾರೆ.

ರಾಷ್ಟ್ರೀಯ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪ್ರಧಾನಿ ಜಿ-20, ವಿಪಕ್ಷಗಳ ಒಕ್ಕೂಟ ಸೇರಿದಂತೆ ಹಲವು ವಿಚಾರಗಳ ಕುರಿತು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆ ಕುರಿತು ಮಾತನಾಡಿದ ಪ್ರಧಾನಿ ಇಡೀ ವಿಶ್ವವೇ ನಮ್ಮ ಮಾರ್ಗದರ್ಶನಕ್ಕಾಗಿ ಎದುರು ನೋಡುತ್ತಿದೆ. ನಮ್ಮ ಮಾತುಗಳು ಮತ್ತು ದೃಷ್ಟಿಯನ್ನು ಇಡೀ ಜಗತ್ತೇ ಭವಿಷ್ಯದ ಮಾರ್ಗಸೂಚಿ ಎಂದು ನೋಡುತ್ತಿದೆ. ಜಿಡಿಪಿ ಕೇಂದ್ರಿತ ದೃಷ್ಟಿಕೋನವು ಮಾನವ ಕೇಂದ್ರಿತವಾಗುತ್ತಿದ್ದು, ಇದರ ಪರಿವರ್ತನೆಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದೆ.

ಬೇರೆ ರಾಷ್ಟ್ರಗಳಿಗೆ ಭಾರತದ ಬಗ್ಗೆ ಇದ್ದ ದೃಷ್ಟಿಕೋನವು ಬದಲಾಗುತ್ತಿದ್ದು, ಮುಂದಿನ ಸಾವಿರ ವರ್ಷಗಳ ಕಾಲ ನೆನಪಿನಲ್ಲಿ ಉಳಿಯುವಂತಹ ಅಭಿವೃದ್ದಿ ಕೆಲಸಗಳು ಮಾಡಲು ಜನತೆಗೆ ಉತ್ತಮ ಅವಕಾಶವಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡಬೇಕಿದೆ ಎಂದಿದ್ದಾರೆ.

ವಿಪಕ್ಷಗಳ ಒಕ್ಕೂಟ I.N.D.I.A ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ ಬೇಜವಾಬ್ದಾರಿಯುತ ಹಣಕಾಸು ನೀತಿ ಮತ್ತು ಜನರತೆಯು ಅಲ್ಪಾವಧಿ ರಾಜಕೀಯ ಫಲಿತಾಂಶಗಳನ್ನು ನೀಡಬಹುದು. ಈ ಹಿಂದೆ ಇದ್ದ ಸರ್ಕಾರ ವಿಶ್ವಾಸದ ಕೊರತೆಯಿಂದಾಗಿ ಜಾಗತಿಕ ಮಟ್ಟದ ಸಭೆಯನ್ನು ದೆಹಲಿ ಹೊರತುಪಡಿಸಿ ಬೇರೆಲ್ಲೂ ಆಯೋಜನೆ ಮಾಡುತ್ತಿರಲಿಲ್ಲ ಎಂದು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.