ನ್ಯೂಸ್

Vijay Diwas | ಪ್ರಧಾನಿ ಮೋದಿ ಪೋಸ್ಟ್‌ಗೆ ಬಾಂಗ್ಲಾದೇಶ ಆಕ್ಷೇಪ; ಭಾರತದ ಬಗ್ಗೆ ಆಸಿಫ್ ನಜ್ರುಲ್ ಹೀಗೆಳೀದ್ದೇಕೆ.?

ಢಾಕಾ: ವಿಜಯ್ ದಿವಸ್‌ನಲ್ಲಿ(Vijay Diwas) ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್​​ ಅನ್ನು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಕಾನೂನು ಸಲಹೆಗಾರ ಆಸಿಫ್ ನಜ್ರುಲ್ ಟೀಕಿಸಿದ್ದಾರೆ. ಪಿಎಂ ಮೋದಿ ಅವರ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡ ನಜ್ರುಲ್ ಭಾರತವು ಕೇವಲ ಮಿತ್ರರಾಷ್ಟ್ರವಾಗಿದೆ ಅಷ್ಟೆ ಎಂದು ಆಕ್ಷೇಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ವಿಜಯ್ ದಿವಸ್​ದಂದು ಪೋಸ್ಟ್​​ನಲ್ಲಿ, 1971 ರಲ್ಲಿ ಭಾರತದ ಐತಿಹಾಸಿಕ ವಿಜಯಕ್ಕೆ ಕಾರಣರಾದ ವೀರ ಸೈನಿಕರ ಧೈರ್ಯ ಮತ್ತು ತ್ಯಾಗವನ್ನು ನಾವು ಗೌರವಿಸುತ್ತೇವೆ. ಅವರ ನಿಸ್ವಾರ್ಥ ಸಮರ್ಪಣೆ ಮತ್ತು ಅಚಲ ಸಂಕಲ್ಪ ನಮ್ಮ ರಾಷ್ಟ್ರವನ್ನು ಉಳಿಸಿ ನಮಗೆ ಕೀರ್ತಿ ತಂದಿದೆ. ಈ ದಿನ ಅವರ ಅಸಾಧಾರಣ ಶೌರ್ಯ ಮತ್ತು ಅವರ ದೃಢ ಧೈರ್ಯಕ್ಕೆ ಗೌರವವಾಗಿದೆ. ಅವರ ತ್ಯಾಗ ಯಾವಾಗಲೂ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಮತ್ತು ನಮ್ಮ ರಾಷ್ಟ್ರದ ಇತಿಹಾಸದಲ್ಲಿ ಆಳವಾಗಿ ಹುದುಗಿದೆ ಎಂದು ಬರೆದಿದ್ದರು.

ಬಾಂಗ್ಲಾದ ಮಧ್ಯಂತರ ಸರ್ಕಾರದ ಕಾನೂನು ಸಲಹೆಗಾರ ಆಸಿಫ್ ನಜ್ರುಲ್ ಅವರು ಮೋದಿ ಅವರ ಆ ಪೋಸ್ಟ್​ನ ಸ್ಕ್ರೀನ್​ಶಾಟ್​ ಹಂಚಿಕೊಂಡು ಇದು ಬಾಂಗ್ಲಾದೇಶದ ವಿಜಯವಾಗಿದೆ ಮತ್ತು ಭಾರತವು ಕೇವಲ ಮಿತ್ರರಾಷ್ಟ್ರವಾಗಿದೆ. ಅವರ ಹೇಳಿಕೆಯನ್ನು ನಾನು ಬಲವಾಗಿ ವಿರೋಧಿಸುತ್ತೇನೆ. 16 ಡಿಸೆಂಬರ್ 1971 ಬಾಂಗ್ಲಾದೇಶದ ವಿಜಯದ ದಿನವಾಗಿತ್ತು. ಈ ಗೆಲುವಿನಲ್ಲಿ ಭಾರತ ಮಿತ್ರರಾಷ್ಟ್ರವಾಗಿತ್ತು, ಮತ್ತೇನೂ ಇಲ್ಲ ಎಂದು ಬರೆದಿದ್ದಾರೆ.

ಅದೇನೆ ಇರಲಿ ಪ್ರಧಾನಿ ಮೋದಿ ಅವರು ತಮ್ಮ ಪೋಸ್ಟ್‌ನಲ್ಲಿ ಬಾಂಗ್ಲಾದೇಶದ ಬಗ್ಗೆ ಎಲ್ಲಿಯೂ ಉಲ್ಲೇಖಿಸಿಲ್ಲ. ಅವರು ಭಾರತದ ಐತಿಹಾಸಿಕ ವಿಜಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ದೇಶದ ವೀರ ಯೋಧರನ್ನು ಮಾತ್ರ ನೆನಪಿಸಿಕೊಂಡಿದ್ದಾರೆ. ಅದಕ್ಕೆ ಬಾಂಗ್ಲಾದ ಮಧ್ಯಂತರ ಸರ್ಕಾರವು ಭಾರತ ವಿರೋಧಿ ನಿಲುವನ್ನು ಎಷ್ಟರ ಮಟ್ಟಿಗೆ ಅನುಸರಿಸುತ್ತಿದೆ. ಇದರಿಂದ ಅದು ಮೂಲಭೂತವಾದಿಗಳ ಕೈಗೊಂಬೆಯಾಗಿ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಅಂದಾಜು ಮಾಡಬಹುದು.(ಏಜೆನ್ಸೀಸ್​​)