ನ್ಯೂಸ್

ಭಾರತ, ಅಮೆರಿಕ ಸುಂಕ ಸಮರ: ಅಮೆರಿಕ ಜತೆ ಮಾತುಕತೆ ನಡೆಸುತ್ತಿದೆ ಎಂದ ಪಿಯೂಷ್ ಗೋಯಲ್| Piyush Goyal

Piyush Goyal: ಭಾರತದ ಮೇಲೆ ಕಳೆದ ಆಗಸ್ಟ್​ 27 ರಂದು ಸುಂಕವನ್ನು ದ್ವೀಗುಣಗೊಳಿಸಿದ ನಂತರ ಭಾರತವು ಅಮೆರಿಕದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (ಬಿಟಿಎ) ಕುರಿತು ಮಾತುಕತೆ ನಡೆಸುತ್ತಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮಂಗಳವಾರ (ಸೆಪ್ಟೆಂಬರ್​,02) ಹೇಳಿದ್ದಾರೆ.

ಈ ಬಗ್ಗೆ ಕೈಗಾರಿಕಾ ಮಂಡಳಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಗೋಯಲ್​​​​​​​, ನಾವು ಬಿಟಿಎಗಾಗಿ ಅಮೆರಿಕ ಜತೆ ಮಾತುಕತೆ ನಡೆಸುತ್ತಿದ್ದೇವೆ. ಅಲ್ಲದೆ, ಭಾರತ ಮತ್ತು ಅಮೆರಿಕ ಮಾರ್ಚ್‌ನಿಂದ ಒಪ್ಪಂದದ ಕುರಿತು ಮಾತುಕತೆ ನಡೆಸುತ್ತಿವೆ. ಇಲ್ಲಿಯವರೆಗೆ 5 ಸುತ್ತಿನ ಮಾತುಕತೆಗಳು ಪೂರ್ಣಗೊಂಡಿವೆ ಎಂದು ತಿಳಿಸಿದ್ದಾರೆ.

ಆಗಸ್ಟ್ 27ರಿಂದ ಶೇ.50 ರಷ್ಟು ಸುಂಕ ವಿಧಿಸಿದ ನಂತರ, ಆಗಸ್ಟ್ 25 ಕ್ಕೆ ನಿಗದಿಯಾಗಿದ್ದ 6ನೇ ಸುತ್ತಿನ ಮಾತುಕತೆಗಾಗಿ ಅಮೆರಿಕ ತಂಡವು ಭಾರತದ ಭೇಟಿಯನ್ನು ಮುಂದೂಡಿದೆ. ಆರನೇ ಸುತ್ತಿನ ಮಾತುಕತೆಗಳಿಗೆ ಯಾವುದೇ ಹೊಸ ದಿನಾಂಕಗಳನ್ನು ಅಂತಿಮಗೊಳಿಸಲಾಗಿಲ್ಲ ಎಂದು ತಿಳಿದು ಬಂದಿದೆ.

ಟ್ರಂಪ್ ಸುಂಕ ನೀತಿಗೆ ತಿರುಗೇಟು ಕೊಟ್ಟ ಮೋದಿ

ಕಳೆದ ತಿಂಗಳಿನಲ್ಲಿ ಟ್ರಂಪ್ ನೀಡಿದ್ದ ಭಾರತದ ನಿಷ್ಕ್ರಿಯ ಆರ್ಥಿಕತೆ ಟೀಕೆಗೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಇದರ ಬೆನ್ನಲ್ಲೇ, ಗೋಯಲ್​ರಿಂದ ಈ ಹೇಳಿಕೆ ಬಂದಿದೆ.

ಭಾರತದ ಆರ್ಥಿಕತೆಯು ಮೊದಲ ತ್ರೈಮಾಸಿಕದಲ್ಲಿ ಶೇಕಡಾ 7.8 ರಷ್ಟು ಬೆಳವಣಿಗೆ ಕಂಡಿದೆ. ಜಾಗತಿಕವಾಗಿ ನಡೆಯುತ್ತಿರುವ ಆರ್ಥಿಕ ಸ್ವಾರ್ಥದ ಸವಾಲುಗಳ ಹೊರತಾಗಿಯೂ ಎಲ್ಲಾ ನಿರೀಕ್ಷೆಗಳನ್ನು ಮೀರಿದೆ ನಮ್ಮ GDP ಬೆಳೆದಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಸೆಮಿಕಾನ್ ಇಂಡಿಯಾ 2025 ಸಮ್ಮೇಳನದಲ್ಲಿ ಮಾತನಾಡಿದ ಮೋದಿ, ಏಪ್ರಿಲ್-ಜೂನ್‌ನಲ್ಲಿ ಜಿಡಿಪಿ ಬೆಳವಣಿಗೆ ಪ್ರತಿಯೊಂದು ನಿರೀಕ್ಷೆ, ಭರವಸೆ ಮತ್ತು ಅಂದಾಜಿಗಿಂತ ಉತ್ತಮವಾಗಿದೆ ಎಂದು ತಿಳಿಸಿದರು. (ಏಜೆನ್ಸೀಸ್)