ನ್ಯೂಸ್

ಗಾಜಾದಲ್ಲಿ ತಕ್ಷಣ ಕದನ ವಿರಾಮ ಘೋಷಿಸುವಂತೆ ವಿಶ್ವಸಂಸ್ಥೆಯಲ್ಲಿ ಭಾರತ ಒತ್ತಾಯ!Ceasefire in Gaza

Ceasefire in Gaza: ಗಾಜಾದಲ್ಲಿ ತಕ್ಷಣ ಕದನ ವಿರಾಮ ಘೋಷಣೆ ಮಾಡುವ ಮೂಲಕ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ವಿಶ್ವಸಂಸ್ಥೆಯಲ್ಲಿ ಭಾರತ ಒತ್ತಾಯಿಸಿದೆ.

ಯುಎನ್​ನ ಭದ್ರತಾ ಮಂಡಳಿಯ ಮಧ್ಯಪ್ರಾಚ್ಯದ ತ್ರೈಮಾಸಿಕ ಮುಕ್ತ ಚರ್ಚೆಯಲ್ಲಿ ಗುರುವಾರ ಮಾತನಾಡಿದ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್, "ಗಾಜಾದಲ್ಲಿ ಆಹಾರ ಮತ್ತು ಇಂಧನದ ತೀವ್ರ ಕೊರತೆ ಇದೆ. ಅಸಮರ್ಪಕ ವೈದ್ಯಕೀಯ ಸೇವೆಗಳು ಮತ್ತು ಶಿಕ್ಷಣದ ಕೊರತೆಯಿಂದ ದಿನನಿತ್ಯ ಅಲ್ಲಿನ ಜನರು ಬಳಲುತ್ತಿದ್ದಾರೆ. ಅಲ್ಲದೆ, ಗಾಜಾದಲ್ಲಿ ಎದುರಿಸುತ್ತಿರುವ ಮಾನವೀಯ ಸವಾಲುಗಳ ಪ್ರಮಾಣವನ್ನು ಪರಿಹರಿಸಲು ಯುದ್ಧದಲ್ಲಿ ಮಧ್ಯಂತರ ವಿರಾಮಗಳು ನಿಲ್ಲಿಸುವುದು ಮಾತ್ರವಲ್ಲ ಅದಕ್ಕೆ ಪೂರ್ಣ ಯುದ್ಧ ವಿರಾಮ ಮಾಡಬೇಕು" ಎಂದು ಆಗ್ರಹಿಸಿದರು.

ಗಾಜಾದಲ್ಲಿರುವ ಎಲ್ಲಾ ಆಸ್ಪತ್ರೆಗಳಲ್ಲಿ ಸುಮಾರು 95 ಪ್ರತಿಶತ ನಾಶವಾಗಿವೆ ಎಂದು WHO ಅಂದಾಜಿಸಿದೆ. ಮಾನವ ಹಕ್ಕುಗಳ ಹೈ ಕಮಿಷನರ್ ಕಚೇರಿಯ ವರದಿಯ ಪ್ರಕಾರ, 6,50,000 ಕ್ಕೂ ಅಧಿಕ ಮಕ್ಕಳು 20 ತಿಂಗಳಿಂದ ಶಿಕ್ಷಣ ಪಡೆದಿಲ್ಲ ಎಂದ ಪರ್ವತನೇನಿ, ಗಾಜಾದಲ್ಲಿ ಕುಸಿಯುತ್ತಿರುವ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತಪಡಿಸಿದರು.

''ಗಾಜಾದ ಜನರಿಗೆ ಸಂಕಷ್ಟ ಮುಂದುವರಿಯಲು ಬಿಡಬಾರದು. ಸುರಕ್ಷಿತ, ಸುಸ್ಥಿರವಾದ ಮಾನವೀಯ ನೆರವು ನೀಡಬೇಕಾಗಿದೆ. ಶಾಂತಿಗೆ ಪರ್ಯಾಯ ವ್ಯವಸ್ಥೆ ಇಲ್ಲ. ತಕ್ಷಣ ಕದನ ವಿರಾಮ ಸ್ಥಾಪಿಸಬೇಕು.ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು. ಈ ಉದ್ದೇಶಗಳನ್ನು ಸಾಧಿಸಲು ಸಂವಾದ ಮತ್ತು ರಾಜತಾಂತ್ರಿಕ ಮಾತುಕತೆಗಳಿಂದ ಮಾತ್ರ ಸಾಧ್ಯವಿದೆ'' ಎಂದು ತಿಳಿಸಿದರು.

ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ಟೈನ್‌ ಪರ ನಿಂತ ಭಾರತ!

ಭಾರತ ಪ್ಯಾಲೆಸ್ಟೀನಿಯನ್ ಸಹೋದರ ಮತ್ತು ಸಹೋದರಿಯರೊಂದಿಗೆ ಐತಿಹಾಸಿಕವಾಗಿಯೋ ಬಲವಾದ ಸಂಬಂಧವನ್ನು ಹೊಂದಿದೆ. ನಾವು ಯಾವಾಗಲೂ ಪ್ಯಾಲೆಸ್ಟೈನ್‌ ಪರವಾಗಿ ನಿಂತಿದ್ದೇವೆ ಮತ್ತು ಪ್ಯಾಲೆಸ್ಟೀನಿಯನ್ ಉದ್ದೇಶದ ಕಡೆಗೆ ನಮ್ಮ ಬದ್ಧತೆ ಅಚಲವಾಗಿದೆ. ಪ್ಯಾಲೆಸ್ಟೈನ್ ದೇಶವನ್ನು ಗುರುತಿಸಿದ ಮೊದಲ ಅರಬ್ ಅಲ್ಲದ ದೇಶ ಭಾರತ ಎಂದು ಹೇಳಿದ್ದಾರೆ.