ನ್ಯೂಸ್

ಶೇ.50ರಷ್ಟು ಸುಂಕ ಹೇರಿಕೆ; ಅಮೆರಿಕದ ವಿರುದ್ಧ ಭಾರತ ಪ್ರತಿಕಾರ ತೀರಿಸಿಕೊಳ್ಳಲಿ : ಸಂಸದ ತರೂರ್​ | Tariff

Tariff: ಅಮೆರಿಕದ ಜೊತೆಗಿನ ಮಾತುಕತೆಗಳು ಒಂದು ವೇಳೆ ಫಲಿತಾಂಶವನ್ನು ನೀಡದಿದ್ದರೆ ಡೊನಾಲ್ಡ್ ಟ್ರಂಪ್ ಅವರ ಸುಂಕ ದಾಳಿಗೆ ಭಾರತವು ಅಮೆರಿಕದ ಆಮದುಗಳ ಮೇಲೆ ಶೇ.50ರಷ್ಟು ಸುಂಕ ವಿಧಿಸುವ ಮೂಲಕ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.

ಟ್ರಂಪ್​​ ನಮ್ಮ ಮೇಲೆ ಇಷ್ಟೊಂದು ಕೋಪಗೊಂಡಿದ್ದಾರೆಯೇ ಎಂದು ನನಗೆ ತಿಳಿದಿಲ್ಲ. ಆದರೂ ಸುಂಕದ ಕುರಿತು ಒಮ್ಮೆ ಚರ್ಚಿಸಿ. ಚೀನಾಕ್ಕೆ 90 ದಿನಗಳ ಗಡುವು ನೀಡಿದ್ದಾರೆ. ನಮಗೆ ಮಾತ್ರ 21 ದಿನಗಳು ನೀಡಿದ್ದಾರೆ. ಇದೀಗ ಶೇ.50ರಷ್ಟು ಸುಂಕದ ದರ ಏರಿದೆ. ನಮ್ಮ ಪ್ರತಿಕ್ರಿಯೆ ಕೂಡ ಬಲವಾಗಿರಬೇಕು ಎಂದು ಗುರುವಾರ ಸಂಸತ್ತಿನ ಹೊರಗೆ ಹೇಳಿದ್ದಾರೆ.

ಭಾರತವು ಪ್ರಸ್ತುತ ಅಮೆರಿಕದ ಆಮದುಗಳ ಮೇಲೆ ಶೇ. 17 ರಷ್ಟು ಸುಂಕವನ್ನು ವಿಧಿಸುತ್ತಿದೆ. "ನಾವು ಅದನ್ನು ಶೇ. 50 ಕ್ಕೆ ಹೆಚ್ಚಿಸಬೇಕು. ನೀವು ಅಮೆರಿಕಕ್ಕೆ ಹೀಗೆ ಮಾಡಿದರೆ, ನಾವು ಕೂಡ ಅದನ್ನೇ ಮಾಡುತ್ತೇವೆ" ಎಂದು ಹೇಳಿದರು.

ಭಾರತದ ಜನಸಂಖ್ಯೆಯ ಒಂದು ದೊಡ್ಡ ಭಾಗವು ಕೃಷಿ ಕ್ಷೇತ್ರದೊಂದಿಗೆ ಸಂಬಂಧ ಹೊಂದಿದೆ. ಯಾರ ಸರ್ಕಾರವಾಗಿದ್ದರೂ, ಅದು ಮೋದಿ ಜಿ ಅವರದ್ದಾಗಿರಲಿ ಅಥವಾ ನಮ್ಮದಾಗಿರಲಿ, ನಾವು ರೈತರೊಂದಿಗೆ ನಿಲ್ಲಬೇಕು ಎಂದರು.

ಟ್ರಂಪ್​ ಹೇಳಿದ್ದೇನು?

ಈಗಾಗಲೇ ಆ.1ರಿಂದ ಶೇ.25ರಷ್ಟು ಸುಂಕ ವಿಧಿಸಿದ್ದ ಟ್ರಂಪ್​, ಇದೀಗ ಹೆಚ್ಚುವರಿ ಶೇ,25ರಷ್ಟು ಸುಂಕ ವಿಧಿಸುವ ಬಗ್ಗೆ ಧಮ್ಕಿ ಹಾಕಿದ್ದಾರೆ. ಒಂದು ವೇಳೆ ಆ.27ರಂದು ಇದು ಜಾರಿಯಾದರೆ ಒಟ್ಟು ದರ ಶೇ.50ಕ್ಕೆ ಸುಂಕ ಏರಿಕೆಯಾಗಲಿದೆ.

ಭಾರತ ರಷ್ಯಾದಿಂದ ತೈಲ ಖರೀದಿ ನಿರಂತರವಾಗಿ ಮುಂದುವರೆಸುತ್ತಿರುವುದರಿಂದ ಮುಂದಿನ 24 ಗಂಟೆಗಳಲ್ಲಿ ಭಾರತದ ಆಮದುಗಳ ಮೇಲೆ ಸುಂಕ ಗಣನೀಯವಾಗಿ ಹೆಚ್ಚಳ ಮಾಡುವುದಾಗಿ​ ಟ್ರಂಪ್​ ಮಂಗಳವಾರ ಹೇಳಿಕೆ ನೀಡಿದ್ದರು.(ಏಜೆನ್ಸೀಸ್​)