ನ್ಯೂಸ್

ಚೀನಾ ಅದೆಷ್ಟೇ ಬಡಿದುಕೊಂಡರೂ ಗಡಿಯಲ್ಲಿ ನಿಲ್ಲಲ್ಲ ಅಭಿವೃದ್ಧಿ ಕಾಮಗಾರಿ

ನವದೆಹಲಿ: ವಾಸ್ತವ ಗಡಿ ರೇಖೆಯುದ್ದಕ್ಕೂ ಅದರಲ್ಲೂ ವಿಶೇಷವಾಗಿ ಲೇಹ್​ನಿಂದ ಲಡಾಖ್​ವರೆಗಿನ ನಾಲ್ಕು ಕಡೆಗಳಲ್ಲಿ ಚೀನಿ ಯೋಧರು ಭಾರತೀಯ ಯೋಧರೊಂದಿಗೆ ತಿಕ್ಕಾಟ ನಡೆಸುತ್ತಿದ್ದಾರೆ. ಗಡಿರೇಖೆಗೆ ಸಮೀಪವಾಗಿ ಸಹಸ್ರಾರು ಟೆಂಟ್​ಗಳನ್ನು ನೆಟ್ಟು ಯೋಧರ ಜಮಾವಣೆ ಮಾಡುತ್ತಿದೆ. ಜತೆಗೆ ಬಂಕರ್​ಗಳನ್ನು ನಿರ್ಮಿಸುವ ಮೂಲಕ ಭಾರತದೊಂದಿಗೆ ದೀರ್ಘಕಾಲದವರೆಗೆ ತಿಕ್ಕಾಟ ಮುಂದುವರಿಸುವ ಇರಾದೆ ತೋರುತ್ತಿದೆ.

ಇದಕ್ಕೆ ಪ್ರತಿಯಾಗಿ ಭಾರತ ಕೂಡ ಗಡಿರೇಖೆಯ ಬಳಿಯ ಸೇನಾ ನಿಯೋಜನೆಯನ್ನು ಪ್ರಮಾಣವನ್ನು ಹೆಚ್ಚಿಸಿದೆ. ಬಂಕರ್​ಗಳ ನಿರ್ಮಾಣಕ್ಕೂ ಮುಂದಾಗಿದೆ. ತನ್ಮೂಲಕ ದೀರ್ಘಕಾಲದ ತಿಕ್ಕಾಟಕ್ಕೆ ತಾನೂ ಸಿದ್ಧ ಎಂದು ಪರೋಕ್ಷವಾಗಿ ಚೀನಾಕ್ಕೆ ಎಚ್ಚರಿಕೆಯನ್ನೂ ರವಾನಿಸಿದೆ.

ಆದರೆ ಈ ತಿಕ್ಕಾಟಕ್ಕೆ ಕಾರಣ ಏನೆಂದು ಹುಡುಕುತ್ತಾ ಹೊರಟರೆ, ವಾಸ್ತವ ಗಡಿರೇಖೆ ಸಮೀಪದಲ್ಲಿ ಭಾರತ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಎಂಬ ಉತ್ತರ ದೊರೆಯುತ್ತದೆ. ಈ ಕಾಮಗಾರಿಗಳಿಂದಾಗಿ ತ್ವರಿತವಾಗಿ ಯೋಧರನ್ನು ವಾಸ್ತವ ಗಡಿರೇಖೆ ಬಳಿಗೆ ತಲುಪಿಸಲು ಭಾರತಕ್ಕೆ ಅನುಕೂಲವಾಗುತ್ತದೆ. ಇದು ಚೀನಿಯರ ಆತಂಕಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಅವರು ಪದೇಪದೆ ಭಾರತದ ಗಡಿಯೊಳಗೆ ಅತಿಕ್ರಮಣ ಮಾಡುವ ಮೂಲಕ ಬೆದರಿಸುವ ತಂತ್ರಗಾರಿಕೆ ಅನುಸರಿಸುತ್ತಿದ್ದಾರೆ. ಆದರೆ, ಚೀನಿಯರು ಅದೆಷ್ಟೇ ಅಡ್ಡಿಪಡಿಸಿದರೂ, ಒರಲಿ, ಎದೆಎದೆ ಬಡಿದುಕೊಂಡರೂ ತಾನು ಮಾತ್ರ ಯಾವುದಕ್ಕೂ ಜಗ್ಗುವುದಿಲ್ಲ. ಅಭಿವೃದ್ಧಿ ಕಾಮಗಾರಿಗಳನ್ನು ಇನ್ನಷ್ಟು ಚುರುಕುಗೊಳಿಸುವುದಾಗಿ ಭಾರತ ಸ್ಪಷ್ಟಪಡಿಸಿದೆ.

ಅತಿಎತ್ತರದ ಏರ್​ಸ್ಟ್ರಿಪ್​ ತಂದಿರುವ ನಡುಕ: ವಾಸ್ತವ ಗಡಿರೇಖೆಗೆ ಸಮೀಪವಾಗಿ ಗಲ್ವಾನ್​ ಬಳಿ ಭಾರತ ಡಾರ್​ಚುಕ್​ನಿಂದ ದೌಲತಾ ಬೇಗ್​ ಓಲ್ಡಿಗೆ ಶಯಾಕ್​ ಮಾರ್ಗವಾಗಿ ರಸ್ತೆಯನ್ನು ನಿರ್ಮಿಸಿದೆ. ಈ ರಸ್ತೆಯನ್ನು ಏರ್​ಸ್ಟ್ರಿಪ್​ ಆಗಿಯೂ ಬಳಸುವ ರೀತಿಯಲ್ಲಿ ನಿರ್ಮಿಸಲಾಗಿದೆ. ಇದು ವಿಶ್ವದ ಅತಿಎತ್ತರದ ಏರ್​ಸ್ಟ್ರಿಪ್​ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದು, ಇಲ್ಲಿ ಸಿ-130 ಜೆ ಯುದ್ಧವಿಮಾನವನ್ನು ಸುಲಭವಾಗಿ ಇಳಿಸಬಹುದಾಗಿದೆ. 2019ರಲ್ಲಿ ನಿರ್ಮಾಣವಾಗಿರುವ ಈ ರಸ್ತೆ ಕರಾಕೊರಂ ಹೆದ್ದಾರಿಗೂ ಸುಲಭವಾಗಿ ಸಂಪರ್ಕ ಒದಗಿಸುತ್ತದೆ. ಇದು ಚೀನಿಯರ ಎದೆನಡುಕಕ್ಕೆ ಕಾರಣವಾಗಿದೆ.

ಗಡಿಭಾಗದಲ್ಲಿ ಚೀನಿಯರು ಆಗಾಗ ಉಪಟಳ ಕೊಡುತ್ತಿರುತ್ತಾರೆ. ಇದಕ್ಕೆ ಸೂಕ್ತ ಪ್ರತ್ಯುತ್ತರ ನೀಡಲು ತಕ್ಷಣವೇ ಹೆಚ್ಚಿನ ಯೋಧರನ್ನು ವಾಸ್ತವ ಗಡಿರೇಖೆ ಬಳಿಗೆ ಸಾಗಿಸುವುದು ಅಗತ್ಯವಾಗಿರುತ್ತದೆ. ಇದಕ್ಕೆ ಈ ಏರ್​ಸ್ಟ್ರಿಪ್​ ಸಹಕರಿಸುತ್ತದೆ ಎಂದು ಭಾರತೀಯ ಸೇನಾಪಡೆ ಮೂಲಗಳು ಹೇಳಿವೆ.

ಚೀನಿಯರು ಕಳೆದ ನಾಲ್ಕು ವರ್ಷಗಳಿಂದ ವಾಸ್ತವ ಗಡಿರೇಖೆ ಬಳಿಯ ತಮ್ಮ ಪ್ರದೇಶದಲ್ಲಿ ಇಂಥ ಹಲವು ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಇದೀಗ ಭಾರತ ಈ ಕಾಮಗಾರಿಗಳಿಗೆ ಹೊಂದಿಕೊಳ್ಳುವ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ತಮ್ಮ ಭಾಗದಲ್ಲಿ ಕೈಗೊಳ್ಳುತ್ತಿದೆ. ಇದಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಚೀನಿಯರು ಗಡಿಭಾಗದಲ್ಲಿ ಪದೇಪದೆ ಗಡಿ ಅತಿಕ್ರಮಣ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಭಾರತ ಮಾತ್ರ ಇದಾವುದಕ್ಕೂ ಜಗ್ಗದೆ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನವನ್ನು ಮುಂದುವರಿಸುತ್ತಿದೆ.