ನ್ಯೂಸ್

ಯಾವುದೇ ಪರಿಸ್ಥಿತಿ ಇರಲಿ ಭಾರತ ಸರ್ವಸನ್ನದ್ಧವಾಗಿದೆ: ಚೀನಾಗೆ ಖಡಕ್​ ಎಚ್ಚರಿಕೆ ನೀಡಿದ ರಾಜನಾಥ್​ ಸಿಂಗ್​

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಾಷ್ಟ್ರದ ಗೌರವ ವಿಚಾರದಲ್ಲಿ ಯಾವುದೇ ಸಂಧಾನ ಮಾಡಿಕೊಳ್ಳುವ ಮಾತೇ ಇಲ್ಲ ಎನ್ನುವ ಮೂಲಕ ಚೀನಾಗೆ ಖಡಕ್​ ಎಚ್ಚರಿಕೆ ಸಂದೇಶ ರವಾನಿಸಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ನವದೆಹಲಿ ಶಾಂತಿಯನ್ನು ಬಯಸುತ್ತದೆ ಹೊರತು ಯಾವುದೇ ಘರ್ಷಣೆ ಬಯಸುವುದಿಲ್ಲ ಎಂದು ಶಾಂತಿ ಮಂತ್ರ ಜಪಿಸಿದರು.

ಹೈದರಾಬಾದ್​ನ ದುಂಡಿಗಲ್​ನಲ್ಲಿರುವ ಏರ್​ಫೋರ್ಸ್​ ಅಕಾಡೆಮಿಯ ಕಂಬೈನ್ಡ್​ ಗ್ರಾಜುಯೇಷನ್ ಪರೇಡ್​ ಉದ್ದೇಶಿಸಿ ರಾಜನಾಥ್​ ಸಿಂಗ್​ ಮಾತನಾಡಿದರು.

ಯಾವುದೇ ಪರಿಸ್ಥಿತಿ ಇರಲಿ ಭಾರತ ಸರ್ವಸನ್ನದ್ಧವಾಗಿದೆ ಎಂದು ಸೇನಾ ಸಾಮರ್ಥ್ಯ ಸಾರಿದ ಸಚಿವರು, ಗಡಿಯಲ್ಲಿ ಪಾಕಿಸ್ತಾನ ಕ್ರಾಸ್​ ಬಾರ್ಡರ್​ ಟೆರರಿಸಂ ನಡೆಸುತ್ತಿದೆ. ನೇರವಾಗಿ ಎದರಿಸಲಾಗದೇ ಪ್ರಾಕ್ಸಿ ವಾರ್​ ಮೊರೆ ಹೋಗಿದೆ ಎಂದು ಪಾಕ್​ ವಿರುದ್ಧ ಕಿಡಿಕಾರಿದರು.

ಪಶ್ಚಿಮ ವಲಯದಲ್ಲಿ ಪಾಕಿಸ್ತಾನ ವಿಧ್ವಂಸಕ ಕೃತ್ಯಕ್ಕೆ ಕೈಹಾಕಿದೆ. ನಮ್ಮ ವಿರುದ್ಧ ನಾಲ್ಕು ಯುದ್ಧಗಳಲ್ಲಿ ಮಣ್ಣು ಮುಕ್ಕಿದ್ದರೂ ಈಗಲೂ ಪ್ರಾಕ್ಸಿ ವಾರ್​ ಅಥವಾ ಮೋಸದ ಯುದ್ಧ ಮಾಡುತ್ತಲೇ ಇದೆ. ಪಾಕ್​ನ ಈ ಪ್ರಯತ್ನಗಳನ್ನು ಎಚ್ಚರಿಕೆಯಿಂದ ಎದುರಿಸುವ ನಮ್ಮ ಭದ್ರತಾ ಪಡೆಗಳನ್ನು ಸನ್ಮಾನಿಸಲು ನಾನು ಬಯಸುತ್ತೇನೆಂದರು.

ಉಲ್ಲಂಘನೆ, ಆಕ್ರಮಣಶೀಲತೆ ಮತ್ತು ಗಡಿಗಳಲ್ಲಿ ಯಾವುದೇ ಏಕಪಕ್ಷೀಯ ಕ್ರಮಕ್ಕೆ ಸೂಕ್ತ ಉತ್ತರ ನೀಡುವ ಮೂಲಕ ಭಾರತ ದುರ್ಬಲವಲ್ಲ ಎಂಬುದನ್ನು ನಾವು ತೋರಿಸಿದ್ದೇವೆಂದು ಯೋಧರನ್ನು ರಕ್ಷಣಾ ಸಚಿವರು ಹುರಿದುಂಬಿಸಿದರು. (ಏಜೆನ್ಸೀಸ್​)