ಪಹಲ್ಗಾಮ್ ಭಯೋತ್ಪಾದಕ ದಾಳಿ, ಆಪರೇಷನ್ ಸಿಂಧೂರ, ಭಾರತ ಮತ್ತು ಪಾಕ್ ನಡುವಿನ ಕದನ ವಿರಾಮ ಕುರಿತು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಕರೆಯಬೇಕು, ಜೊತೆಗೆ ಸಂಸತ್ತಿನಲ್ಲಿ ವಿಶೇಷ ಅಧಿವೇಶನ ನಡೆಸಬೇಕು ಎಂದು ರಾಷ್ಟ್ರೀಯ ಕಾಂಗ್ರೆಸ್ ಆಗ್ರಹಿಸಿದೆ.
ನವದೆಹಲಿ : ಪಹಲ್ಗಾಮ್ ಘಟನೆ, ಆಪರೇಷನ್ ಸಿಂಧೂರ ಮತ್ತು ಎಲ್ಲಾ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲು ಭಾರತ ಮತ್ತು ಪಾಕಿಸ್ತಾನದ ನಡುವೆ ಆದ ಒಪ್ಪಂದದ ಕುರಿತು ವಿವರವಾದ ಚರ್ಚೆಗಾಗಿ ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ನಡೆಸಿ ಸಂಸತ್ತಿನ ವಿಶೇಷ ಅಧಿವೇಶನ ಕರೆಯಬೇಕೆಂದು ಭಾನುವಾರ (11) ಕಾಂಗ್ರೆಸ್ ಒತ್ತಾಯಿಸಿದೆ.
ಇದನ್ನೂ ಓದಿ: ಲಕ್ನೋದಲ್ಲಿ ಬ್ರಹ್ಮೋಸ್ ಕ್ಷಿಪಣಿ ಘಟಕ ಉದ್ಘಾಟನೆ; ವರ್ಷಕ್ಕೆ 80-100 ಕ್ಷಿಪಣಿಗಳ ಉತ್ಪಾದನೆ| Brahmos missile
ಈ ಸಂಬಂಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಕೂಡಲೇ ಮೋದಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಹಾಗೂ ಸಂಸತ್‌ನಲ್ಲಿ ವಿಶೇಷ ಅಧಿವೇಶನ ಕರೆದರೆ ಈ ಎಲ್ಲಾ ವಿಷಯಗಳ ಬಗ್ಗೆ ಸಮಗ್ರವಾಗಿ ಚರ್ಚಿಸಬಹುದು ಎಂದು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮ ಕುರಿತ ಚರ್ಚೆಗೆ ತಟಸ್ಥ ವೇದಿಕೆಯ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಪ್ರಸ್ತಾಪಿಸಿರುವುದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ನಂಬುತ್ತದೆ. ನಾವು ಶಿಮ್ಲಾ ಒಪ್ಪಂದವನ್ನು ಕೈಬಿಟ್ಟಿದ್ದೇವೆಯೇ? 3ನೇ ವ್ಯಕ್ತಿಯ ಮಧ್ಯಸ್ಥಿಕೆಗೆ ಆಹ್ವಾನ ಕೊಟ್ಟಿದ್ದೇವೆ ಎಂಬ ಅನುಮಾನ ಮೂಡಿದೆ ಎಂಬ ಕಳವಳ ವ್ಯಕ್ತಪಡಿಸಿದ್ದಾರೆ.
1971 ರಲ್ಲಿ ಇಂದಿರಾ ಗಾಂಧಿಯವರು ಪ್ರದರ್ಶಿಸಿದ ಅಸಾಧಾರಣ ದಿಟ್ಟ ಮತ್ತು ದೃಢನಿಶ್ಚಯದ ನಾಯಕತ್ವವನ್ನು ದೇಶವು ನೆನಪಿಸಿಕೊಳ್ಳುವುದು ಸ್ವಾಭಾವಿಕ ಎಂದು ರಾಷ್ಟ್ರೀಯ ಕಾಂಗ್ರೆಸ್ ನಂಬುತ್ತದೆ ಎಂದು ಜೈರಾಮ್ ರಮೇಶ್ ಎಕ್ಸ್‌ನಲ್ಲಿ ಬರೆದಿದ್ದಾರೆ.
ಈ ಇಡೀ ಪರಿಸ್ಥಿತಿಯ ಕುರಿತು ದೇಶದ ಇಬ್ಬರು ಮಾಜಿ ಸೇನಾ ಮುಖ್ಯಸ್ಥರು ನೀಡಿದ ಹೇಳಿಕೆಗಳ ಬಗ್ಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಗಮನ ಸೆಳೆಯಲು ಬಯಸುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ಪ್ರಧಾನ ಮಂತ್ರಿಗಳೇ ಪ್ರತಿಕ್ರಿಯಿಸಬೇಕು ಎಂದು ಮನವಿ ಮಾಡಿದ್ದಾರೆ.
(ಏಜೆನ್ಸೀಸ್)