ಬೆಂಗಳೂರು: ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಕರ್ನಾಟಕದ ಸನ್ನದ್ಧತೆಯನ್ನು ಕಾಪಾಡಲು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (10) ವಿಧಾನಸೌಧದ ಕೊಠಡಿಯಿಂದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಇದನ್ನೂ ಓದಿ: ಭಾರತ-ಪಾಕ್ ಸಂಘರ್ಷ; ಡ್ರೋನ್ ದಾಳಿ ಬೆನ್ನಲ್ಲೇ ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹತ್ವದ ಭದ್ರತಾ ಸಭೆ| Modi meeting
ಗೃಹ ಮತ್ತು ಕಂದಾಯ ಇಲಾಖೆಗಳ ಹಿರಿಯ ಅಧಿಕಾರಿಗಳು ಮತ್ತು ಇತರ ಪ್ರಮುಖ ಸಚಿವಾಲಯಗಳ ಜೊತೆ ಸಿಎಂ ಚರ್ಚೆ ನಡೆಸಿದ್ದು, ಸಭೆಯಲ್ಲಿ ಯುದ್ಧದ ಸಂದರ್ಭದಲ್ಲಿ ಅಗತ್ಯ ವಸ್ತುಗಳು ಮತ್ತು ಸೇವೆಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವತ್ತ ಗಮನ ಹರಿಸಿದ್ದಾರೆ. ಅಗತ್ಯ ವಸ್ತುಗಳಿಗೆ ಯಾವುದೇ ಕೊರತೆ ಉಂಟಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನೀರು, ಆಹಾರ ಧಾನ್ಯಗಳು ಮತ್ತು ವೈದ್ಯಕೀಯ ಸೇವೆಗಳಂತಹ ಪ್ರಮುಖ ಸರಬರಾಜುಗಳ ನಿರ್ವಹಣೆಗೆ ಯಾವುದೇ ಸಮಸ್ಯೆ ಉಂಟಾಗದ ರೀತಿ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ನಾಗರೀಕರ ರಕ್ಷಣಾ ಕಾರ್ಯಚಟುವಟಿಕೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಹಿರಿಯ ಪೋಲಿಸ್ ಅಧಿಕಾರಿಗಳು, ಮಹಾನಗರಗಳ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಕೆಲವೊಂದು ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದ್ದು, ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹರಡುವುದನ್ನು ತಪ್ಪಿಸಲು ಕಟ್ಟೆಚ್ಚರ ವಹಿಸಿ ಎಂದು ಆದೇಶಿಸಿದ್ದಾರೆ. ರಾಜ್ಯದ ಕಾನೂನು ಸುವ್ಯವಸ್ಥೆಗಿಂತ ಯಾವುದೂ ದೊಡ್ಡದಲ್ಲ, ರಾಜ್ಯದ ಜನರ ರಕ್ಷಣೆಗೆ ಮೊದಲ ಆಧ್ಯತೆ ನೀಡಿ ಎಂದಿದ್ದಾರೆ.