ನ್ಯೂಸ್

ಮೊಬೈಲ್ ಉತ್ಪಾದನೆಯಲ್ಲಿ ನಂ.1 ದೇಶವಾಗಲು ಭಾರತಕ್ಕೆ ಇನ್ನೊಂದೇ ಹೆಜ್ಜೆ ಬಾಕಿ!

ನವದೆಹಲಿ: ಪ್ರಸ್ತುತ ಮೊಬೈಲ್ ತಯಾರಿಕೆಯಲ್ಲಿ ಭಾರತವು ವಿಶ್ವದಲ್ಲೇ ಪ್ರಾಬಲ್ಯ ಸಾಧಿಸುತ್ತಿದೆ. ದೇಶವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ಉತ್ಪಾದಕ ರಾಷ್ಟ್ರವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಭಾರತದ ಮೂಲಸೌಕರ್ಯ, ಅನೂಕೂಲಕ ಸರ್ಕಾರಿ ನೀತಿ ಮತ್ತು ಪ್ರತಿಭಾವಂತ ನೌಕರರು ಇರುವುದರಿಂದ ಜಾಗತಿಕ ಕಂಪೆನಿಗಳನ್ನು ಭಾರತ ಆಕರ್ಷಿಸುತ್ತಿದೆ. ಅತಿದೊಡ್ಡ ಸ್ಮಾರ್ಟ್​ಫೋನ್ ಕಂಪೆನಿ ಆ್ಯಪಲ್ ತನ್ನ ಉತ್ಪನ್ನಗಳನ್ನು ಭಾರತದಲ್ಲಿ ತಯಾರಿಸುತ್ತಿದೆ. ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಕಂಪೆನಿ ನೊಯ್ಡಾದಲ್ಲಿ ಈಗಾಗಲೇ ಉತ್ಪಾದನಾ ಘಟಕ ತೆರೆದಿದೆ. ಈ ಮೂಲಕ ಮೊಬೈಲ್ ತಯಾರಿಕಾ ಕ್ಷೇತ್ರಕ್ಕೆ ಭಾರತ ಸೂಕ್ತ ತಾಣವಾಗಿ ಬದಲಾಗಿದೆ ಎಂದು ವರದಿಯಾಗಿದೆ.

ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತವು ತಂತ್ರಜ್ಞಾನದ ಮೇಲೆ ತನ್ನ ಹಿಡಿತ ಬಲಪಡಿಸಿದೆ. ಜತೆಗೆ ಮೊಬೈಲ್ ಕ್ಷೇತ್ರದಲ್ಲಿ 100 ಪ್ರತಿಶತ ವಿದೇಶಿ ನೇರ ಹೂಡಿಕೆಗೆ ಅನುಮತಿ ನೀಡಿದೆ. ಇದು ಹೂಡಿಕೆದಾರರಿಗೂ ಸಾಕಷ್ಟು ನೆರವಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಮೇಕ್ ಇನ್ ಇಂಡಿಯಾ ಯೋಜನೆಯಡಿ ಆ್ಯಪಲ್ ಕಂಪೆನಿ ಭಾರತದ ಮೂರು ಕಡೆಗಳಲ್ಲಿ ಮೊಬೈಲ್ ಉತ್ಪಾದಿಸುತ್ತಿದೆ.

ಲಾವಾ ಕಂಪೆನಿ ದೇಶೀಯ ಮಾರುಕಟ್ಟೆಗೆ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಮೊದಲ ಭಾರತೀಯ ಬ್ರಾಂಡ್ ಆಗಿದೆ. ಉತ್ತಮ ಮೂಲಸೌಕರ್ಯ ನೀಡಿರುವುದರಿಂದ ಕಂಪೆನಿಗಳಿಗೆ ಭಾರತದಲ್ಲಿ ತನ್ನ ಉತ್ಪಾದನೆಯನ್ನು ದ್ವಿಗುಣಗೊಳಿಸಲು ಸಾಧ್ಯವಾಗುತ್ತಿದೆ ಎಂದು ವ್ಯಾಖ್ಯಾನಿಸಲಾಗಿದೆ. (ಏಜೆನ್ಸೀಸ್)