ನ್ಯೂಸ್

ಜಪಾನ್​ ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕ ದೇಶವಾದ ಭಾರತ: ನೀತಿ ಆಯೋಗದ ಸಿಇಒ ಹೇಳಿಕೆ! India

India : ಜಾಗತಿಕ ಆರ್ಥಿಕ ಶ್ರೇಯಾಂಕದಲ್ಲಿ ಭಾರತವು ಒಂದು ಸ್ಥಾನ ಜಿಗಿದಿದ್ದು, ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ ಹೊರಹೊಮ್ಮಿದೆ ಎಂದು ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಶನಿವಾರ (ಮೇ 24) ಹೇಳಿದ್ದಾರೆ. ಇದೀಗ ದೇಶದ ಜಿಡಿಪಿ 4 ಟ್ರಿಲಿಯನ್ ಡಾಲರ್​​ ಗಡಿಯನ್ನು ತಲುಪಿದ್ದು, ಗಾತ್ರದಲ್ಲಿ ಅಮೆರಿಕ, ಚೀನಾ ಮತ್ತು ಜರ್ಮನಿಗಿಂತ ಹಿಂದಿದೆ ಎಂದಿದ್ದಾರೆ.

ನೀತಿ ಆಯೋಗದ 10ನೇ ಆಡಳಿತ ಮಂಡಳಿ ಸಭೆಯ ನಂತರ ಮಾತನಾಡಿದ ಸುಬ್ರಹ್ಮಣ್ಯಂ, ದೇಶೀಯ ಸುಧಾರಣೆಗಳು ಮತ್ತು ಭಾರತದ ಪರವಾಗಿ ಹೆಚ್ಚು ಹೆಚ್ಚು ಒಲವು ತೋರುತ್ತಿರುವ ಜಾಗತಿಕ ವಾತಾವರಣದ ಸಂಯೋಜನೆಯೇ ಈ ಏರಿಕೆ ಹಾಗೂ ಅಭಿವೃದ್ಧಿಗೆ ಕಾರಣ ಎಂದು ಹೇಳಿದರು.

ನಾನು ಹೇಳುತ್ತಿರುವಂತೆ, ನಾವು ಈಗ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ. ನಾವು 4 ಟ್ರಿಲಿಯನ್ ಡಾಲರ್​ ಆರ್ಥಿಕತೆಯನ್ನು ತಲುಪಿದ್ದೇವೆ ಎಂದ ಸುಬ್ರಹ್ಮಣ್ಯಂ, ಅದಕ್ಕೆ ಸಾಕ್ಷಿಯಾಗಿ ಇತ್ತೀಚಿನ IMF ಅಂದಾಜುಗಳನ್ನು ಉಲ್ಲೇಖಿಸಿದರು. ಯುಎಸ್, ಚೀನಾ ಮತ್ತು ಜರ್ಮನಿ ಮಾತ್ರ ನಮ್ಮ ಮುಂದಿವೆ. ನಾವು ಇದೇ ಹಾದಿಯಲ್ಲಿಯೇ ಮುಂದುವರಿದರೆ, ನಾವು ಕೇವಲ 2.5 ರಿಂದ 3 ವರ್ಷಗಳಲ್ಲಿ ಮೂರನೇ ಅತಿದೊಡ್ಡ ರಾಷ್ಟ್ರವಾಗಬಹುದು ಎಂದರು.

ಅಮೆರಿಕದಲ್ಲಿ ಮಾರಾಟವಾಗುವ ಐಫೋನ್‌ಗಳನ್ನು ಭಾರತದಂತಹ ದೇಶಗಳಲ್ಲಿ ತಯಾರಿಸುವ ಬದಲು ದೇಶೀಯವಾಗಿ ತಯಾರಿಸಬೇಕು ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಬ್ರಹ್ಮಣ್ಯಂ, ಭವಿಷ್ಯದ ಯುಎಸ್ ಸುಂಕಗಳ ನಿರ್ದಿಷ್ಟತೆಗಳು ಸ್ಪಷ್ಟವಾಗಿಲ್ಲ. ಆದರೆ ಆ ಚಲನಶೀಲತೆಯನ್ನು ಲೆಕ್ಕಿಸದೆ ಭಾರತವು ವೆಚ್ಚ-ಸ್ಪರ್ಧಾತ್ಮಕ ಉತ್ಪಾದನಾ ನೆಲೆಯನ್ನು ನೀಡುವುದನ್ನು ಮುಂದುವರಿಸುತ್ತದೆ ಎಂದರು. ಪ್ರಸ್ತುತ ಭಾರತವು ಪ್ರಮುಖ ಪರ್ಯಾಯ ಉತ್ಪಾದನಾ ಕೇಂದ್ರವಾಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳುತ್ತಿರುವುದರ ನಡುವೆಯೇ ನಾಲ್ಕನೇ ಆರ್ಥಿಕತೆ ದೇಶವಾಗಿ ಹೊರಹೊಮ್ಮುವ ಮೂಲಕ ಮೈಲಿಗಲ್ಲನ್ನು ಸಾಧಿಸಿದೆ ಎಂದು ತಿಳಿಸಿದರು.

ಅಂದಹಾಗೆ, ಭಾರತವು ಜಾಗತಿಕ ಪೂರೈಕೆ ಸರಪಳಿಗಳಲ್ಲಿ ತನ್ನ ಪಾತ್ರವನ್ನು ಇನ್ನಷ್ಟು ಬಲಪಡಿಸಲು ಮತ್ತು 'ಮೇಕ್ ಇನ್ ಇಂಡಿಯಾ' ಅಭಿಯಾನದ ಅಡಿಯಲ್ಲಿ ಹೊಸ ಹೂಡಿಕೆಗಳನ್ನು ಆಕರ್ಷಿಸಲು ಪ್ರಯತ್ನಿಸುತ್ತಿರುವ ಸಮಯದಲ್ಲಿ ಈ ಆರ್ಥಿಕ ಮೈಲಿಗಲ್ಲು ಸಾಧಿಸಿದೆ. (ಏಜೆನ್ಸೀಸ್​)