ನ್ಯೂಸ್

ಭಾರತಕ್ಕೆ ಎಚ್ಚರಿಕೆ ಬೇಕು, ಗಾಬರಿ ಬೇಡ; ಅಫ್ಘನ್​ ಆಚೆ ಈಚೆ...

ಅಫ್ಘಾನಿಸ್ತಾನವನ್ನು ತಾಲಿಬಾನ್ ಕೈವಶ ಮಾಡಿಕೊಂಡ ವಿದ್ಯಮಾನ ಜಾಗತಿಕ ವಲಯದಲ್ಲಿ ತೀವ್ರ ಕಳವಳ ಮೂಡಿಸಿದೆ. ಅದರಲ್ಲೂ, ಚೀನಾ, ಪಾಕಿಸ್ತಾನದೊಂದಿಗೆ ಸೆಣೆಸುತ್ತಿರುವ ಭಾರತಕ್ಕೆ 3ನೇ ಶತ್ರು ಹುಟ್ಟಿಕೊಂಡಿತೇ ಎಂಬ ಆತಂಕ. ಅಫ್ಘನ್ ಭವಿಷ್ಯವೇನು? ಭಯೋತ್ಪಾದನೆ ಮತ್ತೆ ಹೆಚ್ಚಲಿದೆಯೇ ಇಂಥ ಅನೇಕ ಜ್ವಲಂತ ಪ್ರಶ್ನೆಗಳಿಗೆ ತಜ್ಞರು ವಿಜಯವಾಣಿ-ದಿಗ್ವಿಜಯ ಕ್ಲಬ್​ಹೌಸ್ ಸಂವಾದದಲ್ಲಿ ವಿಶ್ಲೇಷಣಾತ್ಮಕ ಉತ್ತರ ನೀಡಿದರು. ಖ್ಯಾತ ವಿಶ್ಲೇಷಕ ಪ್ರೇಮಶೇಖರ ಹಾಗೂ ಮಾಜಿ ರಾಯಭಾರಿ, ಜಾಗತಿಕ ವಿದ್ಯಮಾನಗಳ ವಿಶ್ಲೇಷಕ ಎನ್.ಪಾರ್ಥಸಾರಥಿ 2 ಗಂಟೆಗಳ ದೀರ್ಘ ಚರ್ಚೆಯಲ್ಲಿ ಅಫ್ಘನ್ ಸ್ಥಿತಿಯನ್ನು ಎಳೆಎಳೆಯಾಗಿ ವಿವರಿಸಿದರು.

ಅಮೆರಿಕ ತನ್ನ ಹಿತ ಸಾಧಿಸಿಕೊಂಡು ಹಿಂದೆ ಸರಿದಿದೆ; ಭಾರತಕ್ಕೆ ಎಚ್ಚರಿಕೆ ಬೇಕು ಗಾಬರಿ ಬೇಡ

ಅಫ್ಘಾನಿಸ್ತಾನ ಆಡಳಿತ ತಾಲಿಬಾನ್ ಕೈಗೆ ಬಂದಿರುವುದರಿಂದ ಮುಂದೇನು ಎಂಬ ಪ್ರಶ್ನೆ ಉದ್ಭವವಾಗಿದೆ ನಿಜ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಭಾರತ ಎಚ್ಚರಿಕೆಯ ಹೆಜ್ಜೆ ಇರಿಸುವುದು ಅಗತ್ಯವೇ ಹೊರತು ತುಂಬ ಗಾಬರಿಗೊಳ್ಳಬೇಕಿಲ್ಲ. ತಾಲಿಬಾನ್ ಪ್ರಚೋದನೆಯಿಂದ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಬಹುದೆು ಎಂಬ ಚರ್ಚೆಗಳಾಗುತ್ತಿವೆ. ಆದರೆ, ಜಮ್ಮು-ಕಾಶ್ಮೀರದ ಪರಿಸ್ಥಿತಿ ಮುಂಚಿನಂತಿಲ್ಲ. 370ನೇ ವಿಧಿಯನ್ವಯ ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ಕೇಂದ್ರಾಡಳಿತ ಪ್ರದೇಶವಾಗಿದೆ. ಅಂದರೆ ಸಂಪೂರ್ಣವಾಗಿ ಕೇಂದ್ರದ ಹಿಡಿತದಲ್ಲಿದೆ. ಕಳೆದ ಮೂರು ತಿಂಗಳುಗಳಿಂದ ಗಡಿ ನಿಯಂತ್ರಣ ರೇಖೆಯೂ ಬಹುತೇಕ ಶಾಂತವಾಗಿದೆ. ಹಾಗಾಗಿ, ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತೆ ತಲೆಎತ್ತುವ ಸಾಧ್ಯತೆ ಇಲ್ಲ ಎಂದು ಖ್ಯಾತ ವಿಶ್ಲೇಷಕರಾದ ಪ್ರೇಮಶೇಖರ ಮತ್ತು ಎನ್.ಪಾರ್ಥಸಾರಥಿ ಅಭಿಪ್ರಾಯಪಟ್ಟರು.

‘ಅಮೆರಿಕ ಮೊದಲು’ ನೀತಿಯ ಪರಿಣಾಮ

ಅಮೆರಿಕಕ್ಕೆ ತನ್ನ ಹಿತವಷ್ಟೇ ಮುಖ್ಯ. ಅಲ್ಲದೆ, ಬೇರೆ ರಾಷ್ಟ್ರಗಳ ವ್ಯವಹಾರದಲ್ಲಿ ಮೂಗು ತೂರಿಸುವುದು ಬಿಟ್ಟು, ‘ಅಮೆರಿಕ ಮೊದಲು’ ಎಂಬ ನೀತಿಯನ್ನು ಅದು ಕೆಲ ವರ್ಷಗಳ ಹಿಂದೆ ಅಳವಡಿಸಿಕೊಂಡಿದೆ. 2001 ಸೆಪ್ಟೆಂಬರ್ 11ರಂದು ಅಮೆರಿಕದ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಳಿಕ ಅಫ್ಘಾನಿಸ್ತಾನದಲ್ಲಿ ನ್ಯಾಟೋ ಸೇನೆ ನಿಯೋಜನೆಯ ಮುಖ್ಯ ಗುರಿ ಅಲ್ ಕೈದಾವನ್ನು ಬಗ್ಗುಬಡಿಯುವುದಾಗಿತ್ತು. ಈ ವಿಷಯದಲ್ಲಿ ಅಮೆರಿಕ ಗುರಿ ಸಾಧಿಸಿದೆ. ಅದಕ್ಕೆ ಅಫ್ಘನ್ ಸ್ಥಿತಿ ಕುರಿತಾಗಲಿ, ಅಲ್ಲಿನ ಜನಸಾಮಾನ್ಯರ ಕಾಳಜಿಯಾಗಲಿ ಇಲ್ಲ. ಅಶ್ರಫ್ ಘನಿ ಸರ್ಕಾರವನ್ನು ಮುಂದಿಟ್ಟುಕೊಂಡು, ಇನ್ನಷ್ಟು ಕಾಲ ಸೇನೆಯನ್ನು ಮುಂದುವರಿಸುವ ಅಗತ್ಯ ಅದಕ್ಕೆ ಕಾಣಲಿಲ್ಲ. ಸೇನೆ ವಾಪಸಾತಿಯ ನಿರ್ಧಾರವನ್ನು ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದರು. ಜೋ ಬೈಡೆನ್ ಅಧ್ಯಕ್ಷರಾದ ಬಳಿಕ ಆ ಪ್ರಕ್ರಿಯೆಗೆ ವೇಗ ನೀಡಿದರಷ್ಟೇ. ಒಂದು ವೇಳೆ ಟ್ರಂಪ್ ಅಧಿಕಾರದಲ್ಲಿ ಇದ್ದಿದ್ದರೆ ಒಪ್ಪಂದದ ಮೂಲಕ ತಾಲಿಬಾನ್​ಗೆ ಆಡಳಿತದಲ್ಲಿ ಪಾಲು ಕೊಡಿಸುತ್ತಿದ್ದರೆ ಹೊರತು ಇಡೀ ಆಡಳಿತವನ್ನು ಒಪ್ಪಿಸುತ್ತಿರಲಿಲ್ಲ.

ಭಾರತದ ಹೂಡಿಕೆ ಜನಕಲ್ಯಾಣಕ್ಕೆ

ಅಫ್ಘಾನಿಸ್ತಾನ-ಭಾರತ ಸಂಬಂಧ ದಶಕಗಳಿಂದಲೂ ಉತ್ತಮವಾಗಿದೆ. ಅಫ್ಘಾನಿಸ್ತಾನ ಪುನರ್ನಿರ್ವಣದಲ್ಲಿ ಭಾರತದ ಪಾತ್ರ ಮಹತ್ವದ್ದು. ಅಲ್ಲಿನ ಜನರಲ್ಲಿ ಭಾರತದ ಬಗ್ಗೆ ಅಭಿಮಾನವಿದೆ. ಭಾರತ ಅಲ್ಲಿ ಸಂಸತ್ ಭವನವನ್ನು, ಅಣೆಕಟ್ಟೆಗಳನ್ನು ನಿರ್ವಿುಸಿದೆ. ಶಾಲೆ, ಆಸ್ಪತ್ರೆಗಳನ್ನು ಮರುನಿರ್ವಿುಸಿದೆ. ರಸ್ತೆಗಳನ್ನು ಮಾಡಿದೆ. ಇದಕ್ಕಾಗಿ ಒಟ್ಟಾರೆ 3 ಬಿಲಿಯನ್ ಡಾಲರ್ ಖರ್ಚು ಮಾಡಲಾಗಿದೆ. ಅಲ್ಲಿ ಸಂಸದೀಯ ವ್ಯವಸ್ಥೆ ಮುಂದುವರಿಯಬಹುದೆಂಬ ಆಶಾವಾದದಿಂದ ಭಾರತ ಹಲವು ಸುಧಾರಣೆಗಳನ್ನು ಕೈಗೊಂಡಿತು. ಇದೆಲ್ಲ ವ್ಯರ್ಥವಾಗುತ್ತೆ ಎಂಬ ಕಳವಳ ಬೇಡ. ಈ ಸೌಲಭ್ಯಗಳನ್ನು ತಾಲಿಬಾನಿಯರೂ ಬಳಸಿಕೊಳ್ಳುತ್ತಾರೆ. ಭಾರತ ಒಳ್ಳೆಯ ಕೆಲಸ ಮಾಡಿದೆ ಎಂದು ತಾಲಿಬಾನ್ ಕೂಡ ಹೇಳಿದೆ. ಆ ಸೌಲಭ್ಯಗಳನ್ನು ಅದು ಹಾಳು ಮಾಡುವಂಥ ಧಾಷ್ಟರ್್ಯಕ್ಕೆ ಇಳಿಯುವುದಿಲ್ಲ. ಅಷ್ಟಕ್ಕೂ, ಭಾರತ ಅಲ್ಲಿನ ಜನರ ಉಪಯೋಗಕ್ಕಾಗಿ ಇದೆಲ್ಲ ಮಾಡಿರುವುದರಿಂದ ಕಳವಳ ಪಡಬೇಕಿಲ್ಲ.

ಎರಡು ದಶಕದ ಹಿಂದಿನ ಸ್ಥಿತಿಗೆ

ಎರಡು ದಶಕಗಳಲ್ಲಿ ಅಮೆರಿಕ ಅಫ್ಘಾನಿಸ್ತಾನದಲ್ಲಿ 3 ಟ್ರಿಲಿಯನ್ ಡಾಲರ್ ವೆಚ್ಚ ಮಾಡಿದೆ. ಅಫ್ಘನ್ ಸೇನೆಯನ್ನು ತಯಾರು ಮಾಡಲೆಂದೇ 297 ಬಿಲಿಯನ್ ಡಾಲರ್ ವ್ಯಯಿಸಿದೆ. ಆದರೆ, 1990ರ ದಶಕದ ಸ್ಥಿತಿಗೆ ಮತ್ತೆ ಅಫ್ಘನ್ ಮರಳಿದೆ. ಆದರೆ, ಈ ಬೆಳವಣಿಗೆ ನಿರೀಕ್ಷಿತವೇ. ದೋಹಾದಲ್ಲಿ ತಾಲಿಬಾನ್, ಅಫ್ಘನ್ ಸರ್ಕಾರ ಮತ್ತು ಅಮೆರಿಕದ ನಡುವೆ ಮಾತುಕತೆ ನಡೆದಿದೆ. ಹಿಂಸೆ ಹರಡಬಾರದು, ಸರ್ಕಾರಿ ಅಧಿಕಾರಿಗಳಿಗೆ ತೊಂದರೆ ಮಾಡಬಾರದು ಮತ್ತು ತಾಳ್ಮೆಯಿಂದ ಮುಂದುವರಿಯಬೇಕೆಂಬ ಮೂರು ಷರತ್ತುಗಳನ್ನು ತಾಲಿಬಾನ್​ಗೆ ಹಾಕಿಯೇ, ಒಮ್ಮತಕ್ಕೆ ಬರಲಾಗಿತ್ತು. ಈ ಮಾತುಕತೆ-ಒಪ್ಪಂದದ ಪ್ರಕಾರ ಸೇನೆ ಹಿಂಪಡೆದು, ಆಡಳಿತದಲ್ಲಿ ತಾಲಿಬಾನ್​ಗೆ ಪಾಲು ಕೊಡುವ ನಿರ್ಧಾರವಾಗಿತ್ತು. ಈಗ ಇಡೀ ಆಡಳಿತ ತಾಲಿಬಾನ್ ಕೈಗೆ ಹೋಗಿದೆ.

ಅಮೆರಿಕ ಅಧ್ಯಕ್ಷರ ನಡೆ

2008ರಲ್ಲಿ ಬರಾಕ್ ಒಬಾಮ ಮತ್ತು ಹಿಲರಿ ಕ್ಲಿಂಟನ್ ನಡುವೆ ಟಿಕೆಟ್ ಸ್ಪರ್ಧೆ ಇತ್ತು. ಒಬಾಮ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ, ಗೆದ್ದು ಬಂದರು. ಆದರೆ, ಜಾರ್ಜ್ ಬುಷ್ ಮಾಡಿದ ಕೆಲಸಗಳನ್ನು ಒಬಾಮ ವ್ಯರ್ಥ ಮಾಡಿದರು. ಒಬಾಮ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಜೋ ಬೈಡೆನ್ ಪಾಕಿಸ್ತಾನ ಪರವಾಗಿದ್ದರು. ಒಸಾಮಾ ಬಿನ್ ಲಾಡೆನ್​ನನ್ನು ಹುಡುಕಿ ಕೊಂದದ್ದನ್ನು ಬೈಡೆನ್ ವಿರೋಧಿಸಿದ್ದರು. ಹಿಂದಿನ ಎಂಟು ವರ್ಷಗಳಲ್ಲಿ ಆದ ನೀತಿಗಳ ಬದಲಾವಣೆಗಳನ್ನು ಗಮನಿಸಿದ ಡೊನಾಲ್ಡ್ ಟ್ರಂಪ್ ಅದೆಲ್ಲ ಸರಿಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ಕೊಟ್ಟರು. ಪಾಕ್​ಗೆ ಹಣದ ನೆರವು ನೀಡಿದರೂ, ಅದರ ಬದಲಾಗಿ ಸಿಕ್ಕಿದ್ದು ಮೋಸ ಮತ್ತು ಸುಳ್ಳು ಎಂದು ಹೇಳಿ, ಅನುದಾನ ಕಡಿತಗೊಳಿಸುವ ದಿಟ್ಟ ನಿರ್ಧಾರ ಮಾಡಿದರು.

ತಾಲಿಬಾನ್ ಜತೆ ಮಾತುಕತೆ ಅಗತ್ಯ

| ರಾಜಗುರು ದ್ವಾರಕಾನಾಥ

ಅಫ್ಘನ್​ನಲ್ಲಿನ ಬೆಳವಣಿಗೆಗಳು ವಿಶ್ವಕ್ಕೆ ದೊಡ್ಡ ಚಿಂತೆಯಾಗಿವೆ. ಭಯೋತ್ಪಾದನೆ ಮತ್ತೆ ಹೆಡೆಯೆತ್ತುವ ಆತಂಕ ತಲೆದೋರಿದೆ. ಅಲ್ಲಿ ಇಂಥದ್ದೊಂದು ಆಪತ್ತು ಬರಲಿದೆ ಎಂದು ಆರು ತಿಂಗಳ ಹಿಂದೆಯೇ ‘ವಿಜಯವಾಣಿ’ಯಲ್ಲಿ ಬರೆದ ಲೇಖನದಲ್ಲಿ ತಿಳಿಸಿದ್ದೆ. ಈಗಿನ ಸ್ಥಿತಿಯಲ್ಲಿ ಜಾಗತಿಕ ಸಮುದಾಯ ತಾಲಿಬಾನ್ ಜತೆ ಸೌಹಾರ್ದಯುತವಾಗಿ ಮಾತುಕತೆ ನಡೆಸಬೇಕು. ಆ ಮೂಲಕ ಭಯೋತ್ಪಾದನೆ ಹರಡದಂತೆ ಕ್ರಮ ಕೈಗೊಳ್ಳಬೇಕು. ರಕ್ತಪಾತ ನಡೆಸದೆ, ಶರಿಯಾ ಕಾನೂನು ದುರುಪಯೋಗ ಪಡಿಸಿಕೊಳ್ಳದೆ ತಾಲಿಬಾನ್ ಆಡಳಿತ ನೀಡುವಂತಾಗಬೇಕು. ಹೆಣ್ಣುಮಕ್ಕಳಿಗೆ ವಿದ್ಯೆ, ಆಶ್ರಯ, ರಕ್ಷಣೆ ನೀಡಬೇಕು. ಭಾರತದ ಗಡಿಭದ್ರತೆಗೆ ಕೇಂದ್ರ ಸರ್ಕಾರ ಇನ್ನಷ್ಟು ಆದ್ಯತೆ ನೀಡಬೇಕು. ತಾಲಿಬಾನ್ ಮತ್ತೆ ಕ್ರೌರ್ಯಕ್ಕೆ ಮರಳದಂತೆ ಎಲ್ಲ ರಾಷ್ಟ್ರಗಳು ಸಾಮೂಹಿಕವಾಗಿ ಪ್ರಯತ್ನಿಸಬೇಕು. ಚೀನಾ, ಪಾಕಿಸ್ತಾನ ತಾಲಿಬಾನ್​ಗೆ ಸಹಕಾರ ನೀಡುತ್ತಿರುವುದು ಆತಂಕದ ವಿಚಾರ. ಅಮೆರಿಕ ಸರ್ಕಾರ ಸೂಕ್ತ ಸಂಧಾನ ಮಾಡಿ, ಸೇನೆಯನ್ನು ಹಿಂಪಡೆಯಬಹುದಾಗಿತ್ತು. ಜತೆಗೆ, ತಾಲಿಬಾನಿಗಳ ಜತೆ ಮಾತನಾಡಿ ವಿಶ್ವಕ್ಕೆ, ಅಪ್ಘನ್ ಪ್ರಜೆಗಳಿಗೆ ಹಾನಿಯಾಗದಂತೆ ಎಚ್ಚರ ವಹಿಸಬೇಕು.

ಆರು ತಿಂಗಳು ಇರಬೇಕಿತ್ತು

| ಬೆಂಕಿ ಬಸಣ್ಣ ನ್ಯೂಯಾರ್ಕ್

ಅಫ್ಘಾನಿಸ್ತಾನದಿಂದ ಸೇನೆ ವಾಪಸ್ ಪಡೆದಿರುವ ಕ್ರಮದ ಬಗ್ಗೆ ಅಮೆರಿಕನ್​ರಲ್ಲಿ ಮಿಶ್ರ ಪ್ರತಿಕ್ರಿಯೆ ಇದೆ. ದಿಢೀರ್ ಆಗಿ ಸೇನೆ ವಾಪಸ್ ಪಡೆದು, ಆ ದೇಶವನ್ನು, ಅಲ್ಲಿಯ ಜನರನ್ನು ಸಂಕಷ್ಟಕ್ಕೆ ದೂಡಿದ್ದು ತಪು್ಪ ಎಂಬ ಭಾವನೆ ಇದೆ. ಚುನಾವಣಾ ತಂತ್ರದ ಭಾಗವಾಗಿ ಈ ನಿರ್ಧಾರ ಮಾಡಲಾಯಿತು. ಆ ಒಪ್ಪಂದದ ಪ್ರಕಾರವೇ ಸೇನೆ ಹಿಂದೆ ಪಡೆದಿರುವುದಾಗಿ ಜೋ ಬೈಡೆನ್ ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ಇನ್ನೊಂದು ಆರು ತಿಂಗಳು ಸಮಯ ಪಡೆದುಕೊಂಡು, ಹಿಂದೆ ಸರಿಯಬಹುದಿತ್ತು. ಅಷ್ಟರಲ್ಲಿ ಪರಿಸ್ಥಿತಿ ಸುಧಾರಣೆಯಾಗಬಹುದಿತ್ತೇನೋ.

ಅಮೆರಿಕ ಮತ್ತೆ ಮರಳಬಹುದು!

| ವಲ್ಲೀಶ ಶಾಸ್ತ್ರಿ ಅಮೆರಿಕ

ಭಾರತವು ಪಾಕಿಸ್ತಾನ ಮತ್ತು ಚೀನಾ ಎಂಬ ಎರಡು ವೈರಿಗಳೊಂದಿಗೆ ಸೆಣೆಸುತ್ತಿದೆ. ಚೀನಾ, ಪಾಕಿಸ್ತಾನ ಎರಡೂ ದೇಶಗಳ ಬೆಂಬಲವಿರುವುದರಿಂದ ತಾಲಿಬಾನ್ ಭಾರತಕ್ಕೆ ಮೂರನೇ ಶತ್ರುವಾಗಿ ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಕಾಶ್ಮೀರದಲ್ಲಿ ಉಗ್ರರ ಉಪಟಳ ಜಾಸ್ತಿಯಾಗುತ್ತದೇನೋ ಎಂಬ ಆತಂಕವೂ ಕಾಡುತ್ತಿದೆ. ಮುಂದೆ, ಅಲ್ ಕೈದಾದಂಥ ಸಂಘಟನೆಗಳು ಮತ್ತೆ ತಲೆ ಎತ್ತಿದರೆ ಅಮೆರಿಕ ಅಫ್ಘನ್​ಗೆ ಮರಳುವ ಸಾಧ್ಯತೆ ಇದೆ. ತಾಲಿಬಾನ್​ಗೆ ಚೀನಾ, ಪಾಕ್ ಮಾನ್ಯತೆ ನೀಡುವುದರಿಂದ ಅಮೆರಿಕ ಈ ದೇಶಗಳ ಸಹಾಯ ಕೇಳದೆ ಭಾರತದ ನೆರವು ಯಾಚಿಸಬಹುದು. ಆಗ ಭಾರತ ಸೂಕ್ತ ನಿರ್ಣಯ ತಳೆಯಬೇಕಾಗುತ್ತದೆ.

ಅಫ್ಘನ್ ಮಾನಸಿಕತೆಯೇ ವಿಚಿತ್ರ

ಹೆಣ್ಣುಮಕ್ಕಳ ಶೋಷಣೆ ಅಫ್ಘಾನಿಸ್ತಾನದ ಚರಿತ್ರೆಯುದ್ದಕ್ಕೂ ನಡೆದುಕೊಂಡು ಬಂದಿದೆ. ಅದುವೇ ಅಲ್ಲಿಯ ಸಮಾಜದ ಮನಸ್ಥಿತಿಯಾಗಿದೆ. 9ನೇ ಶತಮಾನದಿಂದಲೂ ಅಫ್ಘಾನ್ ಮನೋಭಾವ ಹೀಗೇ ಇದೆ. ಮಹಿಳಾವಿರೋಧಿ ನೀತಿಗಳು ಅವರಿಗೆ ತಪ್ಪು ಅನಿಸುವುದಿಲ್ಲ. ಈ ಹಿಂದೆ ತಾಲಿಬಾನ್ ಆಡಳಿತ ಕೊನೆಗೊಂಡು 2003ರಲ್ಲಿ ಪ್ರಜಾಪ್ರಭುತ್ವ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮೊದಲ ಬಾರಿಗೆ ಮಹಿಳೆಯರಿಗೆ ಶಿಕ್ಷಣ, ಉದ್ಯೋಗ ಮಾಡುವ ಸ್ವಾತಂತ್ರ್ಯ ದೊರೆತಿತ್ತು. ಅದೇ ಸ್ಥಿತಿ ಮುಂದುವರಿಯುವ ನಿರೀಕ್ಷೆ ಇತ್ತು. ಆದೀಗ ಕಮರಿದೆ. ತಾಲಿಬಾನ್ ಉನ್ನತ ನಾಯಕರು ಮಹಿಳೆಯರಿಗೆ ಶಿಕ್ಷಣ, ಕೆಲಸ ಸೇರಿದಂತೆ ಇನ್ನಿತರ ಸ್ವಾತಂತ್ರ್ಯ ನೀಡಿ, ಅವರ ಹಕ್ಕುಗಳನ್ನು ರಕ್ಷಣೆ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ. ಆದರೆ, ಇದಕ್ಕೆ ವಿರುದ್ಧವಾಗಿ ಆ ಉಗ್ರಪಡೆಯ ಕೆಳಹಂತದವರು ನಡೆದುಕೊಳ್ಳುತ್ತಿದ್ದಾರೆ. ಬಿಗಿಯಾದ ಬುರ್ಖಾ ಧರಿಸಿದ ಕಾರಣಕ್ಕೆ ಕೆಲ ದಿನಗಳ ಹಿಂದೆ ಮಹಿಳೆಯನ್ನು ಹತ್ಯೆ ಮಾಡಿದ್ದು, ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಯನ್ನು ಹೊರಕಳುಹಿಸಿದ್ದಾರೆ. ಉನ್ನತ ನಾಯಕರು ಬದಲಾದರೂ, ಕೆಳಹಂತದ ಉಗ್ರರ ಮನೋಭಾವ ಪರಿವರ್ತನೆಗೊಂಡಿಲ್ಲ ಎಂಬುದರ ಸಂಕೇತವಿದು. ಮಹಿಳಾ ಹಕ್ಕು, ಸ್ವಾತಂತ್ರ್ಯ ರಕ್ಷಣೆ ಮತ್ತು ಮಾನವ ಹಕ್ಕು ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ತಾಲಿಬಾನಿಗಳ ಮೇಲೆ ಬಾಹ್ಯವಾಗಿ ಒತ್ತಡ ಹೇರಬಹುದಾಗಿದೆ. ಅದಕ್ಕಾಗಿ ಆರ್ಥಿಕ ನೆರವು ತಡೆಯುವುದರೊಂದಿಗೆ ರಾಜತಾಂತ್ರಿಕ ಒತ್ತಡವನ್ನು ವಿಶ್ವದ ಇತರ ರಾಷ್ಟ್ರಗಳು ಹಾಕಬೇಕು. ಆಗ ಮಾತ್ರ ಪರಿವರ್ತನೆ ಸಾಧ್ಯ. ಒಡಹುಟ್ಟಿದ ಮಕ್ಕಳು, ಮಹಿಳೆಯರನ್ನು ಬಿಟ್ಟು ಅಲ್ಲಿಯ ಪುರುಷರು ದೇಶದಿಂದ ಪಲಾಯನ ಆಗುತ್ತಿರುವ ದೃಶ್ಯ ಅಲ್ಲಿಯ ಸಾಮಾಜಿಕ ಮನಸ್ಥಿತಿಯನ್ನು ತೋರಿಸುತ್ತದೆ.

ವಿಶ್ವಸಂಸ್ಥೆಯ ಪಾತ್ರ ಸೀಮಿತ: ವಿಶ್ವಸಂಸ್ಥೆ ಸಲಹೆಗಳನ್ನು ಕೊಡಬಹುದು. ನಿರ್ಣಯಗಳನ್ನು ಸ್ವೀಕರಿಸಬಹುದು ಅಷ್ಟೇ. ಅದಕ್ಕೆ ತನ್ನದೇ ಆದ ಸೇನೆ ಇಲ್ಲ. ಅಲ್ಲದೆ, ಅಫ್ಘನ್​ನಿಂದ ಅಮೆರಿಕ ಸೇನೆಯೇ ಹಿಂದಡಿ ಇಟ್ಟಿರುವಾಗ ಮತ್ತೆ ಸೇನಾ ಕಾರ್ಯಾಚರಣೆ ನಡೆಸುವುದು ಸೂಕ್ತವಾಗದು. ವಿಶ್ವಸಂಸ್ಥೆ ತನ್ನ ಮಿತಿಯಲ್ಲಿ ಕೆಲಸ ಮಾಡುತ್ತಿದೆ.

ಸೇನೆ ಮೊದಲೇ ಸೋತಿತ್ತು: ಯುದ್ಧಗಳು ಮೊದಲು ನಡೆಯುವುದು ಮಿದುಳಿನಲ್ಲಿ, ಆ ಮೇಲೆ ಯುದ್ಧಭೂಮಿಯಲ್ಲಿ. ಅಫ್ಘನ್ ಸೈನಿಕರ ಸಂಖ್ಯೆ 3.50 ಲಕ್ಷದಷ್ಟಿದೆ (ಸೈನಿಕರು 2.50 ಲಕ್ಷ, ಪೊಲೀಸರು 1 ಲಕ್ಷ). ಆದರೆ, ತಾಲಿಬಾನಿಗಳ ಸಂಖ್ಯೆ 85 ಸಾವಿರ ಮಾತ್ರ. ಹಾಗಿದ್ದರೆ ಸೇನೆ ಮಂಡಿಯೂರಿದ್ದು ಏಕೆ ಎಂಬ ಪ್ರಶ್ನೆ ಬಹುತೇಕರಿಗೆ ಕಾಡುತ್ತಿದೆ. ಸೇನೆ ಮಾನಸಿಕವಾಗಿ ಮೊದಲೇ ಸೋಲು ಒಪ್ಪಿಕೊಂಡಿತ್ತು. ಹೋರಾಟ ಮಾಡುವ ಮನೋಭಾವ ಸೈನಿಕರಿಗೆ ಇರಲಿಲ್ಲ. ತಾಲಿಬಾನಿಗಳು ಮತ್ತೆ ಬರುತ್ತಾರೆ, ಅವರಿಗೆ ಪ್ರದೇಶಗಳನ್ನು ಬಿಟ್ಟುಕೊಡಬೇಕು ಎಂದು ಅವರು ಸಿದ್ಧರಾಗಿದ್ದರೆ ಹೊರತು ಹೋರಾಟಕ್ಕೆ ಅಣಿಯಾಗಿರಲಿಲ್ಲ. ತಜಕಿಸ್ತಾನ ಗಡಿ ಮೂಲಕ ಅದೆಷ್ಟೋ ಸೈನಿಕರು ಓಡಿ ಹೋದರೆ, ಹಲವು ತುಕಡಿಗಳು ಶರಣಾದವು. ಅತ್ತ, ತಾಲಿಬಾನ್​ಗಳಿಗೆ ಗೆಲ್ಲಬೇಕೆಂಬ ಹಠವಿತ್ತು. ನ್ಯಾಟೋ ಪಡೆ ಮತ್ತು ತಾಲಿಬಾನ್ ನಡುವೆ ರಹಸ್ಯ ಒಪ್ಪಂದವೂ ಆಗಿದ್ದರಿಂದ, ಇದೆಲ್ಲ ನಡೆದಿದೆ. ಹೊರನೋಟಕ್ಕೆ ಕ್ಷಿಪ್ರ, ಅನಿರೀಕ್ಷಿತ ಬೆಳವಣಿಗೆ ಅನಿಸಿದರೂ, ನ್ಯಾಟೋ ಪಡೆ ಮತ್ತು ಅಮೆರಿಕ ಸಹಕಾರದಿಂದ ಇದೆಲ್ಲ ಸಂಭವಿಸಿದೆ.

ಆಧುನಿಕತೆ ಅನಿವಾರ್ಯ: ಮೂಲಭೂತವಾದವನ್ನು ನಿಯಂತ್ರಿಸುವ ಬಗ್ಗೆ ಇಸ್ಲಾಂ ಜಗತ್ತು ಚಿಂತನೆ ಮಾಡಬೇಕು. ಸೌದಿ ಅರೇಬಿಯಾ ಈಗ ಅನಿವಾರ್ಯವಾಗಿ ಆಧುನಿಕತೆಗೆ ತೆರೆದುಕೊಳ್ಳುತ್ತಿದೆ. ಅಲ್ಲಿ ತೈಲ ಆದಾಯ ಕುಸಿದಿದೆ. ಪರ್ಯಾಯ ಆದಾಯಮೂಲಗಳನ್ನು ಕಂಡುಕೊಳ್ಳಲು ಸೌದಿ ಸರ್ಕಾರ ಪ್ರಯತ್ನಿಸುತ್ತಿದೆ. ಅದಕ್ಕಾಗಿ ಪ್ರವಾಸೋದ್ಯಮಕ್ಕೆ ತೆರೆದುಕೊಳ್ಳುತ್ತಿದೆ. ಜನರು ಬರಬೇಕು ಎಂದರೆ ಸ್ಥಿತಿ ಸಾಮಾನ್ಯ ಹಾಗೂ ಸುಧಾರಣೆಯಿಂದ ಕೂಡಿರಬೇಕು. ಅದಕ್ಕಾಗಿ, ಮಹಿಳೆಯರಿಗೆ ಕ್ರಮೆಣ ಸ್ವಾತಂತ್ರ್ಯ ನೀಡಲಾಗುತ್ತಿದೆ. ಇಂಥ ಸ್ಥಿತಿ ಈಗಲೇ ಅಫ್ಘನ್​ನಲ್ಲಿ ಕಾಣುವುದು ಕಷ್ಟ. ಆದರೂ, 2001ಕ್ಕಿಂತ ಮುಂಚಿನ ಸ್ಥಿತಿಗಿಂತ ಈಗಿನ ಸ್ಥಿತಿ ಭಿನ್ನವಾಗಿದೆ. ಏನು ಬೇಕಾದರೂ ಮಾಡಬಹುದು ಎಂಬ ಧಾಷ್ಟರ್್ಯ ಈಗ ತಾಲಿಬಾನ್ ಬಳಿ ಇಲ್ಲ. ಸೌದಿ ಅರೇಬಿಯಾ, ಕತಾರ್ ಕೂಡ ಅದರ ಕೃತ್ಯಗಳನ್ನು ಬೆಂಬಲಿಸುತ್ತಿಲ್ಲ. ತಾವು ಬದಲಾಗದಿದ್ದಲ್ಲಿ ಆರ್ಥಿಕ ಸ್ಥಿತಿ ಹೀನಾಯವಾಗುತ್ತದೆ, ಬದುಕುವುದು ಕಷ್ಟವಾಗುತ್ತದೆ ಎಂಬುದು ತಾಲಿಬಾನ್​ಗೆ ಅರಿವಾದಾಗ ಸೌದಿ ಅರೇಬಿಯಾದಲ್ಲಿ ಕಂಡುಬಂದ ಬದಲಾವಣೆ ಅಫ್ಘನ್​ನಲ್ಲೂ ಕಾಣಬಹುದು. ಆದ್ದರಿಂದ ಅಲ್ಲಿ ಮೂಲಭೂತವಾದ ಸ್ವಲ್ಪ ಕಡಿಮೆಯಾಗಬಹುದು.

ಭ್ರಷ್ಟ ವ್ಯವಸ್ಥೆ: ಹಿಂದಿನ ಹಮೀದ್ ಕರ್ಜೆ ಸರ್ಕಾರ ಅಫ್ಘನ್ ಸುಧಾರಣೆಗೆ ಸಾಕಷ್ಟು ಶ್ರಮಿಸಿತು. ಮೂಲಭೂತವಾದ ಕಡಿಮೆಯಾಗಿ, ಆಧುನಿಕತೆಯತ್ತ ಆ ದೇಶ ಸಾಗಿತು. ಅಶ್ರಫ್ ಘನಿ ಸರ್ಕಾರದಲ್ಲಿ ಇದೆಲ್ಲ ತಲೆಕೆಳಗಾಯಿತು. ಭ್ರಷ್ಟವ್ಯವಸ್ಥೆ ನೆಲೆಯೂರಿತು. ಇಂಥ ಸರ್ಕಾರವನ್ನು ರಕ್ಷಿಸಲು ಹೋರಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಸೈನಿಕರೂ ನಿರ್ಧರಿಸಿಬಿಟ್ಟರು. ಅಶ್ರಫ್ ಘನಿ ದೇಶದಿಂದ ಪಲಾಯನ ಮಾಡುವಾಗ ಕಾರು, ಹೆಲಿಕಾಪ್ಟರ್ ತುಂಬ ಹಣ ತುಂಬಿಕೊಂಡು ಹೋಗಿದ್ದಾರೆ ಎಂಬ ವರದಿಗಳಿವೆ. ಇಡೀ ವ್ಯವಸ್ಥೆಯ ಭ್ರಷ್ಟವಾದ ಮೇಲೆ ಅಲ್ಲಿ ಸುಧಾರಣೆಯ ಆಶಯಗಳು ಈಡೇರುವುದಿಲ್ಲ.

ಚೀನಾಗೆ ಆಂತರಿಕ ಸಮಸ್ಯೆಗಳ ಭಾರ: ಚೀನಾ ಈ ಸಂದರ್ಭವನ್ನು ಭಾರತದ ವಿರುದ್ಧ ಉಪಯೋಗಿಸಿಕೊಳ್ಳುವುದಿಲ್ಲ. 2016-17ರಲ್ಲಿ ಡೋಕ್ಲಾಂನಲ್ಲಿ ಚೀನಾ ಭಾರತದಿಂದ ಭಾರೀ ಮುಖ ಭಂಗ ಅನುಭವಿಸಿತು. ಗಲ್ವಾನ್ ವಿಷಯದಲ್ಲಿ ಹಿನ್ನಡೆ ಕಂಡಿತು. ಆದರೆ, ತಾಲಿಬಾನಿಗಳನ್ನು ಬಳಸಿಕೊಂಡು ಕಾಶ್ಮೀರದ ಸ್ಥಿತಿ ಹದಗೆಡಿಸುವ ಸಾಧ್ಯತೆ ಇಲ್ಲ. ಏಕೆಂದರೆ, ಕಾಶ್ಮೀರವೂ ಈಗ ಬದಲಾಗಿದೆ, ಕೇಂದ್ರದ ನಿಯಂತ್ರಣದಲ್ಲಿದೆ. ಮುಖ್ಯವಾಗಿ, ಚೀನಾಕ್ಕೆ ಆಂತರಿಕ ಸಮಸ್ಯೆಗಳು ತುಂಬ ಇವೆ. ಈಗಿನ ಸಂಘರ್ಷಗಳಲ್ಲಿ ಗೆಲುವು-ಸೋಲು ಮುಖ್ಯವಲ್ಲ; ಯಾರು ಹೆಚ್ಚು ಹಾನಿ ಮಾಡುತ್ತಾರೆ ಎಂಬುದು ಮುಖ್ಯ.

ಪಾಕ್​ಗೂ ಭೀತಿ: ಪಾಕ್ ತಾಲಿಬಾನಿಗಳು ಚೀನಾ ಪರವಾಗಿಲ್ಲ. ಡ್ರಾ್ಯಗನ್ ರಾಷ್ಟ್ರಕ್ಕೆ ಮಾತ್ರ ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಪೂರ್ಣಗೊಳಿಸುವ ಆಸೆ ಇದೆ. ಇತ್ತೀಚೆಗೆ ಪಾಕ್ ತಾಲಿಬಾನಿಗಳು ಚೀನಾ ಇಂಜಿನಿಯರ್​ಗಳ ಮೇಲೆ ದಾಳಿ ನಡೆಸಿದ್ದಾರೆ. ಇದರಿಂದ ಚೀನಾ 4300 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಯೋಜನೆಯನ್ನೇ ಸ್ಥಗಿತಗೊಳಿಸಿದೆ. ಅಲ್ಲದೆ, ಪಾಕ್ ತಾಲಿಬಾನಿಗಳು ಮುಂಚೆಗಿಂತ ಆಕ್ರಮಕ ವಾಗಿದ್ದಾರೆ. ಅವರು ಅಪ್ಘನ್ ತಾಲಿಬಾನಿಗಳ ಜತೆ ಹೋಗದೆ ಸ್ವತಂತ್ರ ದಾರಿ ತುಳಿದರೆ ಪಾಕಿಸ್ತಾನದ ಸ್ಥಿತಿಯೇ ದಾರುಣವಾಗುತ್ತದೆ.