ನ್ಯೂಸ್

ಬಾಂಗ್ಲಾದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ್ನು ಸರ್ಕಾರ ಕೂಡಲೇ ರಕ್ಷಿಸಬೇಕು: ಬಾಬಾ ರಾಮ್​ದೇವ್​

ನವದೆಹಲಿ: ಉದ್ಯೋಗ ಮೀಸಲಾತಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ಸರ್ಕಾರದ ವಿರುದ್ಧ ಅಲ್ಲಿನ ಪ್ರಜೆಗಳು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾ ರೂಪ ತಾಳಿದ್ದು, 300ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದ್ದು, ಪ್ರಧಾನಿ ಸ್ಥಾನಕ್ಕೆ ಶೇಖ್​ ಹಸೀನಾ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಇದೀಗ ಇಡೀ ದೇಶ ಮಿಲಿಟರಿ ಆಡಳಿತದಲ್ಲಿದ್ದು, ಮಧ್ಯಂತರ ಅಥವಾ ಪ್ರಜಾಸತ್ತಾತ್ಮಕವಲ್ಲದ ಸರ್ಕಾರ ರಚನೆಗೆ ಸಿದ್ಧತೆಗಳು ನಡೆಯುತ್ತಿವೆ. 

ಇದರ ಹೊರತಾಗಿಯೂ ದೇಶಾದ್ಯಂತ ಹಿಂಸಾಚಾರ ಭುಗಿಲೆದ್ದಿದ್ದು, ದೇವಾಲಯ ಹಾಗೂ ಹಿಂದೂಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ. ಹಿಂದೂಗಳ ಮೇಲಿನ ದಾಳಿಯನ್ನು ಖಂಡಿಸಿರುವ ಯೋಗಗುರು ಬಾಬಾ ರಾಮ್​ದೇವ್​ ಸರ್ಕಾರವು ರಾಜತಾಂತ್ರಿಕವಾಗಿ, ರಾಜಕೀಯವಾಗಿ ಸಾಧ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಬಾಂಗ್ಲಾದೇಶದಲ್ಲಿ ಮೂಲಭೂತವಾದಿ ಶಕ್ತಿಗಳು ಹಿಂದೂ ಮನೆಗಳು, ದೇವಾಲಯಗಳು ಮತ್ತು ವ್ಯವಹಾರಗಳ ಮೇಲೆ ಯೋಜಿತ ದಾಳಿಗಳನ್ನು ನಡೆಸುತ್ತಿರುವ ರೀತಿ ನಾಚಿಕೆಗೇಡಿನ ಮತ್ತು ಅಪಾಯಕಾರಿಯಾಗಿದೆ. ನಮ್ಮ ಹಿಂದೂ ಸಹೋದರರ ತಾಯಂದಿರು, ಸಹೋದರಿಯರು ಮತ್ತು ಪುತ್ರಿಯರ ಗೌರವ ಮತ್ತು ಘನತೆಗೆ ಧಕ್ಕೆಯಾಗದಂತೆ ಭಾರತವು ಜಾಗರೂಕತೆಯಾಗಿರಬೇಕು. ಇಡೀ ದೇಶವು ನಮ್ಮ ಅಲ್ಪಸಂಖ್ಯಾತ ಹಿಂದೂ ಸಹೋದರರೊಂದಿಗೆ ಪೂರ್ಣವಾಗಿ ನಿಲ್ಲಬೇಕು.

ಅಂದು ನಾವು ಬಾಂಗ್ಲಾದೇಶವನ್ನು ರಚಿಸಲು ಸಹಾಯ ಮಾಡಿದೆವು. ಅದೇ ರೀತಿ ಇದೀಗ ನಮ್ಮ ಸಹೋದರರು ಕಷ್ಟದಲ್ಲಿದ್ದು, ನಾವು ನಮ್ಮ ಶಕ್ತಿಯನ್ನು ತೋರಿಸಬೇಕಿದೆ. ಲವು ರಾಜಕಾರಣಿಗಳು, ಧಾರ್ಮಿಕ ಉಗ್ರಗಾಮಿಗಳು ಮತ್ತು ಕೆಲವು ಯೂಟ್ಯೂಬರ್‌ಗಳು ಭಾರತದಲ್ಲಿ ಜಾತಿ, ಧರ್ಮ, ಮೀಸಲಾತಿ ಮತ್ತು ಸಂವಿಧಾನದ ಹೆಸರಿನಲ್ಲಿ ಇದೇ ರೀತಿಯ ಅಶಾಂತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವುದು ದುರದೃಷ್ಟಕರವಾಗಿದೆ. ನಾವು ಈ ರೀತಿಯ ದುಷ್ಟ ಶಕ್ತಿಗಳನ್ನು ಒಟ್ಟಾಗಿ ಎದುರಿಸಬೇಕಿದೆ ಎಂದು ಯೋಗ ಗುರು ಬಾಬಾ ರಾಮ್​ದೇವ್ ಕರೆ ನೀಡಿದ್ದಾರೆ.