ನ್ಯೂಸ್

ಸಬ್​ಕಾ ಸಾಥ್.. ವಿಶ್ವಕ್ಕೆ ಮಾದರಿ ಮಂತ್ರ; 100 ಕೋಟಿ ಹಸಿದ ಹೊಟ್ಟೆಗಳಿಂದ 200 ಕೋಟಿ ಕುಶಲ ಕೈಗಳವರೆಗೆ ಪ್ರಗತಿ ಕಂಡಿದೆ ಭಾರತ: ಮೋದಿ

ನವದೆಹಲಿ: ಜಿಡಿಪಿ-ಕೇಂದ್ರಿತ ಧೋರಣೆ ತೊರೆದು ಮಾನವ- ಕೇಂದ್ರಿತ ಧೋರಣೆಯತ್ತ ಸಾಗಿರುವ ಜಗತ್ತಿನ ಕಲ್ಯಾಣ ಸಾಧಿಸುವುದಕ್ಕೆ ಭಾರತದ ‘ಸಬ್​ಕಾ ಸಾಥ್ ಸಬ್​ಕಾ ವಿಕಾಸ್’ ಮಾದರಿಯು ಇಡೀ ವಿಶ್ವಕ್ಕೆ ಮಾರ್ಗದರ್ಶಿ ಸಿದ್ಧಾಂತ ಆಗಬಲ್ಲದು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಭಾರತದಲ್ಲಿ ಅಭಿವೃದ್ಧಿಗೆ ಹಾದಿ ತೋರಿದ ಸಬ್​ಕಾ ಸಾಥ್ ಸಬ್​ಕಾ ವಿಕಾಸ್ ಮಾದರಿಯು ಜಗತ್ತಿನ ಕಲ್ಯಾಣ ಸಾಧಿಸಲು ಕೂಡ ಮಾರ್ಗದರ್ಶಿ ಆಗಬಹುದಾಗಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು.

ಭಾರತ ನೂರು ಕೋಟಿ ಹಸಿದ ಹೊಟ್ಟೆಗಳ ದೇಶವೆಂದು ಬಹಳ ಕಾಲ ಭಾವಿಸಲಾಗುತ್ತಿತ್ತು. ಆದರೆ, ಈಗ ದೇಶವನ್ನು ಶತಕೋಟಿಗಿಂತ ಅಧಿಕ ಮಹತ್ವಾಕಾಂಕ್ಷೆಯ ಮೆದುಳುಗಳು, 200 ಕೋಟಿಗಿಂತ ಹೆಚ್ಚು ಕುಶಲ ಕೈಗಳು ಮತ್ತು ನೂರಾರು ದಶಲಕ್ಷ ಯುವಜನರಿರುವ ರಾಷ್ಟ್ರವಾಗಿ ಕಾಣಲಾಗುತ್ತಿದೆ ಎಂದು ಪ್ರಧಾನಿ ಮೋದಿ ವಿವರಿಸಿದರು.

ಜಿ20 ದೇಶಗಳ ಕೂಟದ ಶೃಂಗಸಭೆ ನಡೆಯಲಿರುವ ಒಂದು ವಾರದ ಮುಂಚೆ ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆ ಬಗ್ಗೆ ಮಾತನಾಡಿದ ಅವರು, 100 ಕೋಟಿ ಹಸಿದ ಹೊಟ್ಟೆಗಳಿಂದ 200 ಕೋಟಿ ಕುಶಲ ಕೈಗಳವರೆಗೆ ಪ್ರಗತಿಯನ್ನು ಸಾಧಿಸಲಾಗಿದೆ ಎಂದು ವರ್ಣಿಸಿದರು. ಭಾರತದ ಇದುವರೆಗಿನ ಸಾಧನೆಯನ್ನು ಸಂದರ್ಶನದಲ್ಲಿ ಉಲ್ಲೇಖಿ ಸಿದ ಅವರು, ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಜಪಾನ್ ಪ್ರಧಾನಿ ಫುಮಿಯೋ ಕಿಷಿದಾ, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಸೌದಿ ಅರೇಬಿಯಾ ದೊರೆ ಮಹಮದ್ ಬಿನ್ ಸಲ್ಮಾನ್ ಮತ್ತಿತರ ಮುಖಂಡರು ಸೆ. 9 ಮತ್ತು 10ರಂದು ನಡೆಯುವ ಜಿ20 ಶೃಂಗ ಸಭೆಯಲ್ಲಿ ಸಮಾಗಮಗೊಳ್ಳಲಿದ್ದಾರೆ. ಇದು ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳ ವೇದಿಕೆಯಾಗಿದೆ ಎಂದರು.

ಜಿ20 ಕೇಂದ್ರಿತ ವಿಚಾರಗಳ ಸಂದರ್ಶನವಾದರೂ ಭಾರತದ ಆರ್ಥಿಕ ಪ್ರಗತಿ, ಜಾಗತಿಕ ರಂಗದಲ್ಲಿ ಹೆಚ್ಚುತ್ತಿರುವ ಗೌರವ, ಸೈಬರ್ ಭದ್ರತೆ, ಸಾಲದ ಜಾಲ, ಜೈವಿಕ-ಇಂಧನ ನೀತಿ, ವಿಶ್ವ ಸಂಸ್ಥೆ ಸುಧಾರಣೆ, ತಾಪಮಾನ ಬದಲಾವಣೆ ಮತ್ತು 2047ರಲ್ಲಿ ಭಾರತ ಹೇಗಿರಬಹುದು ಎಂಬಿತ್ಯಾದಿ ವಿಚಾರಗಳನ್ನೂ ಪ್ರಸ್ತಾಪಿಸಿದರು. ‘ಭಾರತ ಜಿ20 ಕೂಟದ ಅಧ್ಯಕ್ಷತೆ ವಹಿಸಿರುವುದರಿಂದ ಅನೇಕ ಸಕಾರಾತ್ಮಕ ಪರಿಣಾಮಗಳು ಉಂಟಾಗುತ್ತಿವೆ. ಅವುಗಳಲ್ಲಿ ಕೆಲವು ನನ್ನ ಹೃದಯಕ್ಕೆ ಹತ್ತಿರವಾಗಿರುವಂಥದ್ದಾಗಿವೆ’ ಎಂದು ಮೋದಿ ಹೇಳಿದರು.

ಜಿ 20 ಸಾಮರ್ಥ್ಯ ಅನಾವರಣ

ಜಾಗತಿಕ ಜಿಡಿಪಿಯ ಶೇಕಡಾ 85, ಅಂತಾರಾಷ್ಟ್ರೀಯ ವಾಣಿಜ್ಯದ ಶೇ. 75 ಪಾಲು ಮತ್ತು ವಿಶ್ವದ ಜನಸಂಖ್ಯೆಯ ಶೇ. 65 ಭಾಗವನ್ನು ಜಿ20 ದೇಶಗಳು ಹೊಂದಿವೆ. ಕಳೆದ ವರ್ಷ ನವೆಂಬರ್​ನಲ್ಲಿ ಇಂಡೋನೇಷ್ಯಾದಿಂದ ಕೂಟದ ಅಧ್ಯಕ್ಷತೆ ವಹಿಸಿಕೊಂಡಿದ್ದ ಭಾರತ, ಇದೇ ಡಿಸೆಂಬರ್​ನಲ್ಲಿ ಬ್ರೆಜಿಲ್​ಗೆ ಅಧ್ಯಕ್ಷ ಪದವಿಯನ್ನು ಹಸ್ತಾಂತರಿಸಲಿದೆ. ಒಟ್ಟು ಆರ್ಥಿಕ ಬಲಾಢ್ಯತೆಯ ಲೆಕ್ಕದಲ್ಲಿ ಜಿ20 ಒಂದು ಪ್ರಭಾವಶಾಲಿ ಕೂಟವೆನ್ನುವುದು ನಿಜ. ಆದರೆ, ಇದೇ ಹೊತ್ತಿಗೆ ಜಿಡಿಪಿ-ಕೇಂದ್ರಿತ ಧೋರಣೆಯು ಈಗ ಮಾನವ-ಕೇಂದ್ರಿತ ಧೋರಣೆಯಾಗಿ ಬದಲಾಗುತ್ತಿರುವುದು ಅಷ್ಟೇ ವಾಸ್ತವಿಕ ಎಂದ ಮೋದಿ, ಎರಡನೇ ವಿಶ್ವ ಯುದ್ಧದ ನಂತರ ಹೊಸ ಆರ್ಥಿಕ ವ್ಯವಸ್ಥೆ ರೂಪುಗೊಂಡಂತೆ ಕೋವಿಡೋತ್ತರವಾಗಿ ಹೊಸ ವಿಶ್ವ ವ್ಯವಸ್ಥೆ ರೂಪುಗೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟರು. ಮಾನವ-ಕೇಂದ್ರಿತ ಧೋರಣೆಯತ್ತ ಜಗತ್ತು ಹೊರಳುತ್ತಿದ್ದು ಅದರ ವೇಗವರ್ಧಕವಾಗಿ ನಾವು ಪಾತ್ರ ವಹಿಸುತ್ತಿದ್ದೇವೆ. ಭಾರತ ಜಿ20 ಕೂಟದ ಅಧ್ಯಕ್ಷತೆ ವಹಿಸಿರುವುದರಿಂದ ಮೂರನೇ ಜಗತ್ತಿನ ರಾಷ್ಟ್ರಗಳಲ್ಲಿ ಆತ್ಮವಿಶ್ವಾಸದ ಬೀಜ ಮೊಳೆತಿದೆ ಎಂದರು.

2047ರ ದೂರದೃಷ್ಟಿ: 2047ರ ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗುತ್ತದೆ. ನಮ್ಮ ರಾಷ್ಟ್ರೀಯ ಜೀವನದಲ್ಲಿ ಭ್ರಷ್ಟಾಚಾರ, ಜಾತೀಯತೆ ಮತ್ತು ಕೋಮುವಾದಕ್ಕೆ ಸ್ಥಾನವೇ ಇರುವುದಿಲ್ಲ. 2047ರ ವೇಳೆಯ ದೇಶದ ಆರ್ಥಿಕ ಅಭಿವೃದ್ಧಿಯು ತಮ್ಮ ಆಡಳಿತದ ಒಂಬತ್ತು ವರ್ಷಗಳ ರಾಜಕೀಯ ಸ್ಥಿರತೆಯ ‘ಸಹಜ ಉಪ-ಉತ್ಪನ್ನ’ವಾಗಿರುತ್ತದೆ ಎಂದರು.

ಬಹಳಷ್ಟು ಮುಂದುವರಿದ ರಾಷ್ಟ್ರಗಳು ನಿಧಾನಗತಿಯ ಆರ್ಥಿಕ ಬೆಳವಣಿಗೆ, ಹೆಚ್ಚಿನ ಹಣದುಬ್ಬರ, ಭಾರಿ ಕೊರತೆಗಳು ಮತ್ತು ಜನರ ವೃದ್ಧಾಪ್ಯ ಮುಂತಾದ ಸಮಸ್ಯೆಗಳಿಂದ ನರಳುತ್ತಿವೆ. ಆದರೆ, ಅತಿ ಹೆಚ್ಚು ಯುವಜನರನ್ನು ಹೊಂದಿರುವ ಭಾರತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆ ಎಂದು ಪರಿಗಣಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.

ನಿರ್ಣಾಯಕ ಜನಾದೇಶದಿಂದ ಐದನೇ ದೊಡ್ಡ ಆರ್ಥಿಕತೆ

2022ರ ಮಾರ್ಚ್ 31ರ ಅಂತ್ಯಕ್ಕೆ ಭಾರತದ ಆರ್ಥಿಕತೆ ಬ್ರಿಟನ್ ದೇಶವನ್ನು ಹಿಂದಕ್ಕೆ ಹಾಕಿ 3.39 ಟ್ರಿಲಿಯನ್ ಡಾಲರ್ (ಅಂದಾಜು 280 ಲಕ್ಷ ಕೋಟಿ ರೂಪಾಯಿ) ಆಗಿದ್ದು, ಜಗತ್ತಿನ ಐದನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಅಮೆರಿಕ, ಚೀನಾ, ಜಪಾನ್ ಮತ್ತು ಜರ್ಮನಿ ಮೊದಲ ನಾಲ್ಕು ಸ್ಥಾನಗಳಲ್ಲಿವೆ. 2014ಕ್ಕೂ ಮುಂಚೆ ಮೂರು ದಶಕಗಳ ಕಾಲ ಅನೇಕ ಅಸ್ಥಿರ ಸರ್ಕಾರಗಳು ಇದ್ದಿದ್ದರಿಂದ ಸಾಕಷ್ಟು ಪ್ರಗತಿ ಸಾಧಿಸಲು ಆಗಿರಲಿಲ್ಲ. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಜನರು ಬಿಜೆಪಿಗೆ ನಿರ್ಣಾಯಕ ಜನಾದೇಶ ನೀಡಿದ್ದರಿಂದ ಸ್ಥಿರ ಸರ್ಕಾರ ರಚನೆ ಸಾಧ್ಯವಾಗಿದೆ. ಭವಿಷ್ಯದ, ಸುಸ್ಪಷ್ಟ ದಿಕ್ಕಿನ ನೀತಿಗಳನ್ನು ರೂಪಿಸಲು ಆಗಿದೆ ಎಂದರು. ಈ ಸ್ಥಿರತೆಯಿಂದಾಗಿ ಕಳೆದ ಒಂಬತ್ತು ವರ್ಷಗಳಲ್ಲಿ ಅನೇಕ ಸುಧಾರಣೆಗಳನ್ನು ತರಲಾಗಿದೆ ಎಂದರು. ಹಿಂದೆ ಭಾರತವನ್ನು ಒಂದು ಮಾರುಕಟ್ಟೆಯಾಗಿಯಷ್ಟೇ ಕಾಣಲಾಗು ತ್ತಿತ್ತು. ಆದರೆ, ಈಗ ಜಾಗತಿಕ ಸವಾಲುಗಳಿಗೆ ಪರಿಹಾರ ಸೂಚಿಸುವ ಭಾಗವಾಗಿ ಅದು ಹೊರಹೊಮ್ಮಿದೆ ಎಂದರು.

ನಾಲ್ಕನೇ ‘ಡಿ’ ಸೇರ್ಪಡೆ: ಪ್ರಜಾಪ್ರಭುತ್ವ (ಡೆಮಾಕ್ರಸಿ), ಜನಸಂಖ್ಯೆ (ಡೆಮಾಗ್ರಫಿ) ಮತ್ತು ವೈವಿಧ್ಯತೆ (ಡೈವರ್ಸಿಟಿ) ಎಂಬ ಈ ಹಿಂದಿನ ಮೂರು ‘ಡಿ’ಗಳಿಗೆ ಅಭಿವೃದ್ಧಿ (ಡೆವಲಪ್​ವೆುಂಟ್) ಎಂಬ ಇನ್ನೊಂದು ‘ಡಿ’ ಸೇರಿಸಿದ ಪ್ರಧಾನಿ, ಮುಂದಿನ ಸಾವಿರ ವರ್ಷ ಕಾಲ ನೆನಪಿಟ್ಟುಕೊಳ್ಳುವಂಥ ಬೆಳವಣಿಗೆಗೆ ಅಡಿಪಾಯ ಹಾಕುವ ಅವಕಾಶ ದೇಶಕ್ಕಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಾಕ್, ಚೀನಾಗೆ ಕುಟುಕಿದ ಪ್ರಧಾನಿ: ಪಾಕಿಸ್ತಾನ ಮತ್ತು ಚೀನಾ ಆಕ್ಷೇಪವೆತ್ತಿದರೂ ಕಾಶ್ಮೀರ ಮತ್ತು ಅರುಣಾಚಲ ಪ್ರದೇಶದಲ್ಲಿ ಜಿ-20 ಸಭೆಗಳನ್ನು ನಡೆಸಲಾದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೋದಿ, ‘ಒಂದು ವೇಳೆ ಈ ಸ್ಥಳಗಳಲ್ಲಿ ಸಭೆಗಳನ್ನು ನಡೆಸದಿದ್ದರೆ ಇಂಥ ಪ್ರಶ್ನೆಗೆ ಅರ್ಥವಿರುತ್ತಿತ್ತು’ ಎಂದರು. ಈ ಮೂಲಕ ಇವೆರಡೂ ಭಾರತದ ಅವಿಭಾಜ್ಯ ಭಾಗಗಳೆಂದು ಪರೋಕ್ಷವಾಗಿ ಚೀನಾ ಮತ್ತು ಪಾಕ್​ಗೆ ಕುಟುಕಿದರು. ವಿಶಾಲ, ಸುಂದರ ಹಾಗೂ ವೈವಿಧ್ಯಮಯವಾದ ದೇಶದ ಪ್ರತಿಯೊಂದು ಭಾಗದಲ್ಲಿ ಸಭೆ ನಡೆಸುವುದು ಅಪೇಕ್ಷಣೀಯ ಎಂದರು.

ಜಿ 20 ಮೋದಿ ಕಾರ್ಯಸೂಚಿ

  • ಭಾರತದ ಅಧ್ಯಕ್ಷತೆ ಅವಧಿಯಲ್ಲಿ ದೇಶದಾದ್ಯಂತ ನಡೆಯುವ ಜಿ-20 ಸಭೆ-ಕಾರ್ಯಕ್ರಮಗಳಲ್ಲಿ ಒಟ್ಟಾರೆಯಾಗಿ ಅಂದಾಜು 1 ಲಕ್ಷ ಪ್ರತಿನಿಧಿಗಳ ಪಾಲ್ಗೊಳ್ಳುವಿಕೆ.
  • ಭಾರತದ ಅಧ್ಯಕ್ಷತೆ ಮುಗಿಯುವ ಹೊತ್ತಿಗೆ ಎಲ್ಲ 28 ರಾಜ್ಯ ಮತ್ತು 8 ಕೇಂದ್ರಾಡಳಿತ ಪ್ರದೇಶಗಳಲ್ಲಿ 220ಕ್ಕೂ ಅಧಿಕ ಸಭೆಗಳ ಆಯೋಜನೆ.
  • ಜಿ-20 ಘೋಷವಾಕ್ಯ ‘ವಸುಧೈವ ಕುಟುಂಬಕಂ- ಒಂದು ಭೂಮಿ, ಒಂದು ಕುಟುಂಬ ಒಂದು ಭವಿಷ್ಯ’ -ಇದು ಒಂದು ಘೋಷಣೆ ಮಾತ್ರವಾಗಿರದೆ ನಮ್ಮ ಸಂಸ್ಕೃತಿಗಳಿಂದ ಆಯ್ದ ಸಮಗ್ರ ತತ್ವಶಾಸ್ತ್ರವೂ ಆಗಿದೆ.
  • ಮಹಾತ್ಮಾ ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ನೆಲ್ಸನ್ ಮಂಡೇಲಾ ಮತ್ತು ಕ್ವಾಮೆ ಕ್ರುಮಾಹ್​ರಂಥ ಮಹಾನ್ ನಾಯಕರ ಮಾನವೀಯ ದೃಷ್ಟಿಕೋನ ಮತ್ತು ಸಿದ್ಧಾಂತಗಳ ಪ್ರೇರಣೆ.