ಬೆಂಗಳೂರು: ಇಂಡಿಯಾ ಲಾಕ್ಡೌನ್.. #IndiaLockdown
- ಹೌದು.. ಸದ್ಯ ಟ್ರೆಂಡಿಂಗ್ನಲ್ಲಿ ಇರುವ ಈ ಹ್ಯಾಷ್ಟ್ಯಾಗ್ ಹಲವರನ್ನು ಬೆಚ್ಚಿ ಬೀಳಿಸಿದೆ. ಇದ್ದಕ್ಕಿದ್ದಂತೆ ಟ್ರೆಂಡ್ ಆಗಲಾರಂಭಿಸಿರುವ 'ಲಾಕ್ಡೌನ್' ಬಹಳಷ್ಟು ಮಂದಿ ಏನು ಎಂದು ಒಮ್ಮೆ ಟ್ವಿಟರ್ನಲ್ಲಿ ಸರಿಯಾಗಿ ಪರಿಶೀಲಿಸಿ ನೋಡುವಂತೆ ಮಾಡಿದೆ.
ಟ್ವಿಟರ್ನಲ್ಲಿ #IndiaLockdown ಟಾಪ್ ಟ್ರೆಂಡಿಂಗ್ನಲ್ಲಿರುವುದನ್ನು ನೋಡಿದ ಹಲವರು ಮತ್ತೇನಾದರೂ ಲಾಕ್ಡೌನ್ ಜಾರಿಯಾಯ್ತಾ, ಕರೊನಾ ಇದ್ದಕ್ಕಿದ್ದಂತೆ ಹೆಚ್ಚಾಯ್ತಾ, ವರ್ಕ್ ಫ್ರಂ ಹೋಂ ಸಿಗುತ್ತಾ ಎಂದೆಲ್ಲ ಯೋಚಿಸಿದ್ದಾಗಿ ಹೇಳಿದ್ದಾರೆ.
ಆದರೆ ಅಸಲಿಗೆ ಆಗಿದ್ದೇ ಬೇರೆ. ಏಕೆಂದರೆ ಇದು ಸಿನಿಮಾವೊಂದರ ಕಾರಣಕ್ಕಾಗಿ ಆಗಿರುವ ಟ್ರೆಂಡಿಂಗ್. ದೇಶದಲ್ಲಿ 21 ದಿನಗಳ ಲಾಕ್ಡೌನ್ ಆಗಿರುವುದನ್ನೇ ಕಥಾಹಂದರವಾಗಿ ನಿರ್ಮಿಸಲಾಗಿರುವ 'ಇಂಡಿಯಾ ಲಾಕ್ಡೌನ್' ಹಿಂದಿ ಸಿನಿಮಾದಿಂದಾಗಿ ಇಂಥದ್ದೊಂದು ಟ್ರೆಂಡಿಂಗ್ ಟ್ವಿಟರ್ನಲ್ಲಾಗಿದೆ. ಮಧುರ್ ಭಂಡಾರ್ಕಾರ್ ನಿರ್ದೇಶನದ ಈ ಸಿನಿಮಾದಲ್ಲಿ ಶ್ವೇತಾ ಬಸು ಪ್ರಸಾದ್, ಪ್ರತೀಕ್ ಬಬ್ಬರ್, ಸಾಯಿ ತಮ್ಹನ್ಕರ್, ಪ್ರಕಾಶ್ ಬೆಳವಾಡಿ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಡಿ. 2ರಂದು ತೆರೆ ಕಾಣಲಿದೆ.