ನ್ಯೂಸ್

ಭಯೋತ್ಪಾದಕರ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳಲು ಭಾರತ ಸಿದ್ಧವಾಗಿದೆ; ಪ್ರಧಾನಿ ಮೋದಿ ಶಪಥ| Modi

Modi| ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಕೆಲ ದಿನಗಳಿಂದ ಗಡಿಯಲ್ಲಿ ಉದ್ವಿಗ್ನತೆ ಮುಂದುವರೆದಿದ್ದು, ಭಯೋತ್ಪಾದಕರು ಮತ್ತು ಅವರ ಬೆಂಬಲಿಗರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಹೈದರಾಬಾದ್ ಹೌಸ್‌ನಲ್ಲಿ ಅಂಗೋಲಾ ಅಧ್ಯಕ್ಷ ಜೊವೊ ಲೌರೆಂಕೋ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಪ್ರಧಾನಿ ಮೋದಿ ಈ ಬಗ್ಗೆ ಮಾತನಾಡಿದ್ದು, ಭಯೋತ್ಪಾದಕರಿಗೆ ಸಹಾಯ ಮಾಡುವವರನ್ನು ಯಾವುದೇ ಕಾರಣಕ್ಕೂ ನಾವು ಸುಮ್ಮನೆ ಬಿಡುವುದಿಲ್ಲ ಎಂದು ಅವರು ಹೇಳಿದ್ದು, ಅಂತಹ ಜನರ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಈ ಮೂಲಕ ಪಹಲ್ಗಾಮ್‌ ದಾಳಿ ಬಗ್ಗೆ ಎರಡನೇ ಬಾರಿ ಪ್ರತಿಕ್ರಿಯಿಸಿರುವ ಮೋದಿ, ಪಾಕಿಸ್ತಾನಕ್ಕೆ ನೇರ ಎಚ್ಚರಿಕೆಯನ್ನು ನೀಡಿದ್ದಾರೆ. ಮಾನವೀಯತೆಗೆ ದೊಡ್ಡ ಬೆದರಿಕೆ ಎಂದು ನಾವು ಸರ್ವಾನುಮತದಿಂದ ಹೇಳಿದ್ದೇವೆ. ಉಗ್ರರು ಹಾಗೂ ಅವರನ್ನು ಬೆಂಬಲಿಸುವವರ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳುತ್ತೇವೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದ್ದಕ್ಕಾಗಿ ಅಂಗೋಲಾ ಅಧ್ಯಕ್ಷ ಲೌರೆಂಕೊ ಅವರಿಗೆ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.

ಪಹಲ್ಗಾಮ್ ದಾಳಿ ನಡೆದ ಒಂದು ದಿನದ ನಂತರ ನಡೆದ ಭದ್ರತಾ ಸಚಿವ ಸಂಪುಟ ಸಮಿತಿ ಸಭೆಯ ನಂತರ ಪ್ರಧಾನಿ ಮೋದಿ ನ್ಯಾಯವನ್ನು ಪಡೆಯಲು ಭಾರತ ಯಾವುದೇ ಅವಕಾಶವನ್ನು ಬಿಡುವುದಿಲ್ಲ ಎಂದು ಎಚ್ಚರಿಸಿದ್ದರು. “ನಾವು ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನು ಗುರುತಿಸುತ್ತೇವೆ, ಪತ್ತೆಹಚ್ಚುತ್ತೇವೆ ಮತ್ತು ಶಿಕ್ಷಿಸುತ್ತೇವೆ. ನಾವು ಅವರನ್ನು ಭೂಮಿಯ ತುದಿಯವರೆಗೆ ಹಿಂಬಾಲಿಸುತ್ತೇವೆ” ಎಂದು ಅವರು ಹೇಳಿದ್ದರು.

(ಏಜೆನ್ಸೀಸ್)

ಸಿಂಧೂ ನದಿ ಒಪ್ಪಂದ ರದ್ದು, ಪಾಕಿಸ್ತಾನದ ವಿಮಾನಗಳಿಗೆ ವಾಯುಮಾರ್ಗ ಬಂದ್, ವಾಘಾ-ಅಟ್ಟಾರಿ ಗಡಿ ಬಂದ್, ಪಾಕಿಸ್ತಾನಕ್ಕೆ ಭಾರತದ ಸಮುದ್ರಮಾರ್ಗ ಬಂದ್ ಹೀಗೆ ಹಲವು ದಿಟ್ಟ ಕ್ರಮಗಳನ್ನು ಕೈಗೊಂಡಿದೆ. ಇಂದು ಮುಂಜಾನೆ, ಪಾಕಿಸ್ತಾನದ ವಿರುದ್ಧ ಮತ್ತೊಂದು ಮಹತ್ವದ ಕ್ರಮದಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಪಾಕಿಸ್ತಾನಿ ಸರಕುಗಳ ನೇರ ಅಥವಾ ಪರೋಕ್ಷ ಆಮದನ್ನು ಭಾರತ ನಿಷೇಧಿಸಿದೆ.