ನ್ಯೂಸ್

ಭಾರತ ತಟಸ್ಥವಲ್ಲ ಶಾಂತಿದೂತ; ನಿಲುವು ಸ್ಪಷ್ಟಪಡಿಸಿದ ಪ್ರಧಾನಿ ಮೋದಿ

ಕಿಯೆವ್: ರಷ್ಯಾ ಮತ್ತು ಯೂಕ್ರೇನ್ ಯುದ್ಧದ ಸಂದರ್ಭದಲ್ಲಿ ಭಾರತ ತಟಸ್ಥವಾಗಿರಲಿಲ್ಲ, ಮೂಕಪ್ರೇಕ್ಷಕನೂ ಆಗಿರಲಿಲ್ಲ, ಬದಲಿಗೆ ಯಾವತ್ತೂ ಶಾಂತಿಸ್ಥಾಪನೆಯ ಪರ ನಿಲುವು ಹೊಂದಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ಯೂಕ್ರೇನ್ ಪ್ರವಾಸದಲ್ಲಿರುವ ಮೋದಿ, ರಾಜಧಾನಿ ಕಿಯೆವ್​ನಲ್ಲಿ ಆ ರಾಷ್ಟ್ರದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಭಾರತದ ಈ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ‘ಪರಸ್ಪರ ಮಾತುಕತೆ ಮತ್ತು ರಾಜತಾಂತ್ರಿಕ ಪ್ರಯತ್ನಗಳಿಂದ ಮಾತ್ರವೇ ಸಂಘರ್ಷವನ್ನು ಅಂತ್ಯಗೊಳಿಸಲು ಸಾಧ್ಯ. ಶಾಂತಿಸ್ಥಾಪನೆಯ ದಿಸೆಯಲ್ಲಿ ಸಾಧ್ಯವಿರುವ ಎಲ್ಲ ಪೂರಕ ನೆರವನ್ನು ನೀಡಲು ಭಾರತ ಸಿದ್ಧವಾಗಿದೆ’ ಎಂದು ಮೋದಿ ಹೇಳಿದ್ದಾರೆ.

ದ್ವಿಪಕ್ಷೀಯ ಮಾತುಕತೆ ಬಳಿಕ ಸುದ್ದಿಗಾರರಿಗೆ ವಿವರ ನೀಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್, ‘ಚರ್ಚೆ ಬಹುತೇಕ ರಷ್ಯಾ-ಯೂಕ್ರೇನ್ ಯುದ್ಧಕ್ಕೆ ಸಂಬಂಧಿಸಿತ್ತು. ಶಾಂತಿ ಸ್ಥಾಪನೆಗಾಗಿ ಸಂಬಂಧಿಸಿದವರೆಲ್ಲರ ಜತೆ ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಮೋದಿ ಸಲಹೆ ನೀಡಿದರು. ಇದಲ್ಲದೆ ಭಾರತ ಮತ್ತು ಯೂಕ್ರೇನ್ ನಡುವಿನ ವಾಣಿಜ್ಯ ಸಂಬಂಧ ಮರುನಿರ್ವಿುಸುವ ದಿಸೆಯಲ್ಲಿ ರ್ಚಚಿಸಿದರು’ ಎಂದು ತಿಳಿಸಿದರು.

ಗಾಂಧಿ ಪ್ರತಿಮೆಗೆ ಗೌರವ: ಕಿಯೆವ್​ನ ಓಯಸಿಸ್ ಆಫ್ ಪೀಸ್ ಉದ್ಯಾನದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗೆ ಪ್ರಧಾನಿ ಮೋದಿ ಗೌರವ ಸಲ್ಲಿಸಿದರು.

4 ಒಪ್ಪಂದಗಳಿಗೆ ಸಹಿ: ಪ್ರಧಾನಿ ಮೋದಿ ಯೂಕ್ರೇನ್ ಭೇಟಿ ವೇಳೆ ಎರಡೂ ರಾಷ್ಟ್ರಗಳು 4 ಒಪ್ಪಂದ ಮಾಡಿಕೊಂಡಿವೆ. ಔಷಧ, ಆಹಾರೋದ್ಯಮ, ಕೃಷಿ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಈ ಒಪ್ಪಂದಗಳಿಗೆ ಎರಡೂ ಕಡೆಯ ಅಧಿಕಾರಿಗಳು ಸಹಿ ಹಾಕಿದ್ದಾರೆ.

ಜಂಟಿ ಹೇಳಿಕೆ ಬಿಡುಗಡೆ: ಮಾತುಕತೆ ಬಳಿಕ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ಶಾಂತಿ ಸ್ಥಾಪನೆಗಾಗಿ ರಷ್ಯಾ- ಯೂಕ್ರೇನ್ ಚರ್ಚೆಗೆ ಮುಂದಾಗಬೇಕೆಂಬ ಆಶಯ ಭಾರತ ವ್ಯಕ್ತಪಡಿಸಿದೆ. ‘ನಾನು ಶಾಂತಿ ಸಂದೇಶ ಹೊತ್ತು ಯೂಕ್ರೇನ್​ಗೆ ಬಂದಿದ್ದೇನೆ. ಮಿತ್ರನಾಗಿ ಭಾರತ ಸಹಕರಿಸಲಿದೆ ಎಂಬುದಾಗಿ ಮೋದಿ ಹೇಳಿದರು’ ಎಂಬುದು ಹೇಳಿಕೆಯಲ್ಲಿದೆ.

ಮಕ್ಕಳ ಸ್ಮಾರಕಕ್ಕೆ ಗೊಂಬೆ: ರಷ್ಯಾ ದಾಳಿಯಿಂದಾಗಿ ಮಡಿದ ಯೂಕ್ರೇನ್​ನ ಮುಗ್ಧ ಮಕ್ಕಳ ಸ್ಮಾರಕಕ್ಕೆ ಪ್ರಧಾನಿ ಮೋದಿ ಗೊಂಬೆ ಇರಿಸಿ ಗೌರವ ಅರ್ಪಿಸಿದರು. ‘ಯುದ್ಧದಿಂದಾಗಿ ಈ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಇವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಪಾಲಕರಿಗೆ ದೇವರು ನೀಡಲಿ’ ಎಂದು ಮೋದಿ ಪ್ರಾರ್ಥಿಸಿದರು.

ಮೋದಿ-ಝೆಲೆನ್​ಸ್ಕಿ ಆಲಿಂಗನ: ಯೂಕ್ರೇನ್​ನಲ್ಲಿರುವ ರಾಷ್ಟ್ರೀಯ ಸಂಗ್ರಹಾಲಯಕ್ಕೆ ಭೇಟಿ ನೀಡಿದ ವೇಳೆ ಮೋದಿ ಅವರಿಗೆ ಹಸ್ತಲಾಘವ ನೀಡಿ ಬರಮಾಡಿಕೊಂಡ ಅಧ್ಯಕ್ಷ ಝೆಲೆನ್​ಸ್ಕಿ, ಆಲಂಗಿಸಿಕೊಂಡರು. ಕೆಲವು ತಿಂಗಳ ಹಿಂದೆ ಮೋದಿ ರಷ್ಯಾಕ್ಕೆ ಭೇಟಿ ನೀಡಿದ್ದಾಗ ಅಲ್ಲಿನ ಅಧ್ಯಕ್ಷ ಪುತಿನ್ ಕೂಡ ಮೋದಿ ಅವರನ್ನು ಆಲಂಗಿಸಿಕೊಂಡಿದ್ದರು. ಆಗ ಝೆಲೆನ್​ಸ್ಕಿ ‘ಮುಗ್ಧ ಮಕ್ಕಳನ್ನು ಕೊಂದ ಪುತಿನ್ ಜತೆ ಆಲಿಂಗನ ಏಕೆ?’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಭೀಷ್ಮ್ ಕ್ಯೂಬ್ ಉಡುಗೊರೆ: ಯುದ್ಧಗ್ರಸ್ತ ಯೂಕ್ರೇನ್​ನಲ್ಲಿ ಗಾಯಾಳುಗಳ ಚಿಕಿತ್ಸೆಗೆ ನೆರವಾಗುವ ದಿಸೆಯಲ್ಲಿ ನಾಲ್ಕು ಭೀಷ್ಮ್ (ಭಾರತ್ ಹೆಲ್ತ್ ಇನಿಷಿಯೇಟಿವ್ ಫಾರ್ ಸಹಯೋಗ್ ಹಿತ ಆಂಡ್ ಮೈತ್ರಿ) ಕ್ಯೂಬ್​ಗಳನ್ನು ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಉಡುಗೊರೆಯಾಗಿ ನೀಡಿದರು. ಔಷಧ, ಆರೋಗ್ಯ ಪರಿಕರ ಒಳಗೊಂಡ ಈ ಕ್ಯೂಬ್​ಗಳು ಗಾಯಾಳುಗಳ ತ್ವರಿತ ಚೇತರಿಕೆಗೆ ನೆರವಾಗಲಿವೆ.

ಯೂಕ್ರೇನ್​ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ: 1991ರಲ್ಲಿ ಸ್ವತಂತ್ರವಾದ ಯೂಕ್ರೇನ್​ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ಪೋಲೆಂಡ್​ಗೆ ಭೇಟಿ ನೀಡಿದ್ದ ಮೋದಿ ಗುರುವಾರ ರಾತ್ರಿ ಅಲ್ಲಿಂದ ರೈಲಿನಲ್ಲಿ ಹೊರಟು 10 ಗಂಟೆಗಳ ಪ್ರಯಾಣದ ನಂತರ ಶುಕ್ರವಾರ ಬೆಳಗ್ಗೆ ಯೂಕ್ರೇನ್ ತಲುಪಿದರು.

ಪ್ರವಾಸ ಅಂತ್ಯ: ‘ನನ್ನ ಐತಿಹಾಸಿಕ ಯೂಕ್ರೇನ್ ಪ್ರವಾಸ ಯಶಸ್ವಿ ಆಗಿದೆ. ಸ್ನೇಹ ವೃದ್ಧಿಯ ಉದ್ದೇಶ ಇಟ್ಟುಕೊಂಡು ಇಲ್ಲಿಗೆ ಬಂದಿದ್ದೆ. ಯೂಕ್ರೇನ್ ಸರ್ಕಾರ ಮತ್ತು ಜನತೆ ನೀಡಿದ ಆತಿಥ್ಯಕ್ಕೆ ನಾನು ಋಣಿ’ ಎಂದು ಕಿಯೆವ್​ನಿಂದ ಹೊರಡುವ ಸಮಯದಲ್ಲಿ ಮೋದಿ ಹೇಳಿದ್ದಾರೆ.