ನವದೆಹಲಿ: ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಯೋಧರ ಜತೆಗಿನ ಗಲ್ವಾನ್ ಘರ್ಷಣೆಯ ಬಳಿಕ ಭಾರತ ವಾಸ್ತವ ಗಡಿರೇಖೆಯುದ್ದಕ್ಕೂ (ಎಲ್ಎಸಿ) ಭದ್ರತೆಯನ್ನು ಹೆಚ್ಚಿಸುತ್ತಿದೆ. ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಯ 3 ಸಾವಿರಕ್ಕೂ ಹೆಚ್ಚು ಯೋಧರನ್ನು ಗಡಿ ಭದ್ರತೆಗಾಗಿ ನಿಯೋಜಿಸಲು ಸರ್ಕಾರ ನಿರ್ಧರಿಸಿದೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಐಟಿಬಿಪಿಯ ಹಲವು ಯೋಧರು ದೇಶದ ವಿವಿಧೆಡೆಗಳಲ್ಲಿ ನಿಯೋಜನೆಗೊಂಡಿದ್ದಾರೆ. ಇವರೆಲ್ಲರನ್ನೂ ಆ ಕರ್ತವ್ಯದಿಂದ ಮುಕ್ತಗೊಳಿಸಿ, ಗಡಿ ಭದ್ರತೆಗೆ ನಿಯೋಜಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಭಾರತವನ್ನು ಹಣಿಯಲು ಹೊಸ ಪ್ರಹಸನ ಆರಂಭಿಸಿದ ಚೀನಾ
ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಐಟಿಬಿಪಿಯ 15 ಕಂಪನಿಗಳನ್ನು ಈಗಾಗಲೆ ಕೇಂದ್ರಾಡಳಿತ ಪ್ರದೇಶ ಲಡಾಖ್ಗೆ ರವಾನಿಸಲಾಗಿದೆ. ಒಂದು ಕಂಪನಿ ಎಂದರೆ ಅಂದಾಜು 100ರಿಂದ 120 ಯೋಧರು ಇರುತ್ತಾರೆ. ಈಗ ರವಾನಿಸಲಾಗಿರುವ 15 ಕಂಪನಿಗಳು ಸೇರಿ ಒಟ್ಟು 30 ಕಂಪನಿಗಳನ್ನು ಭದ್ರತಾ ಕಾರ್ಯಕ್ಕಾಗಿ ಕೆಲವೇ ದಿನಗಳಲ್ಲಿ ಎಲ್ಎಸಿಗೆ ರವಾನಿಸಲಾಗುವುದು ಎಂದು ಮೂಲಗಳು ಖಚಿತಪಡಿಸಿವೆ.
ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಪ್ರದೇಶದಲ್ಲಿನ ಎಲ್ಎಸಿ ಬಳಿ ಸಾಮಾನ್ಯವಾಗಿ 7 ಸಾವಿರ ಯೋಧರು ಗಡಿ ಭದ್ರತೆಗಾಗಿ ಸದಾ ನಿಯೋಜನೆಗೊಂಡಿರುತ್ತಾರೆ.