ಜಿನೀವಾ(ಸ್ವಿಜರ್ಲೆಂಡ್): ಲಡಾಖ್ ಗಡಿಯಲ್ಲಿ ಕ್ಯಾತೆ ತೆಗೆದಿರುವ ಚೀನಾಕ್ಕೆ ಭಾರತ ಜಾಗತಿಕ ವೇದಿಕೆಯಲ್ಲಿ ತಿರುಗೇಟು ನೀಡಿದೆ. ಹಾಂಕಾಂಗ್ಗೆ ಸಂಬಂಧಿಸಿ ಚೀನಾ ರೂಪಿಸಿರುವ ವಿಶೇಷ ಕಾನೂನಿನ ಕುರಿತು ಭಾರತ ವಿಶ್ವಸಂಸ್ಥೆಯಲ್ಲಿ ವಿರೋಧ ವ್ಯಕ್ತಪಡಿಸಿದೆ. ವಿಶ್ವ ಸಮುದಾಯದಲ್ಲಿ ಚೀನಾ ಬಗ್ಗೆ ಹೆಚ್ಚುತ್ತಿರುವ ಅತೃಪ್ತಿಗೆ ಹೆಚ್ಚಿನ ಬೆಂಬಲ ಕ್ರೋಡೀಕರಿಸಲು ಇದು ನೆರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಭಿನ್ನಮತೀಯರನ್ನು ಬಗ್ಗು ಬಡಿಯಲೆಂದೇ ಚೀನಾ ರೂಪಿಸಿರುವ ರಾಷ್ಟ್ರೀಯ ಭದ್ರತಾ ಕಾನೂನಿನ ಬಗ್ಗೆ ಹಾಂಕಾಂಗ್ನ ಕಳವಳಕ್ಕೆ ವಿಶ್ವ ಸಮುದಾಯ ಸೂಕ್ತವಾಗಿ ಸ್ಪಂದಿಸಬೇಕು ಎಂಬುದು ಭಾರತದ ಮನವಿಯಾಗಿದೆ. ‘ಹಾಂಕಾಂಗ್ನಲ್ಲಿ ಭಾರತೀಯರೂ ಸಾಕಷ್ಟು ಸಂಖ್ಯೆಯಲ್ಲಿ ನೆಲೆಸಿರುವುದರಿಂದ ಅಲ್ಲಿನ ಇತ್ತೀಚಿನ ವಿದ್ಯಮಾನಗಳನ್ನು ಭಾರತ ಗಮನಿಸುತ್ತಿದೆ’ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿ ಹಾಗೂ ಕಾಯಂ ಪ್ರತಿನಿಧಿಯಾಗಿರುವ ರಾಜೀವ್ ಕೆ. ಚಂದರ್ ಹೇಳಿದ್ದಾರೆ.
ಹಾಂಕಾಂಗ್ನಲ್ಲಿ ಸುಮಾರು 38,000 ಭಾರತೀಯರು ನೆಲೆಸಿದ್ದಾರೆ. ಮಕಾವು ಸಮೀಪ ಭಾರತೀಯ ಸಮುದಾಯದ ಸಾಕಷ್ಟು ಜನರು ವಾಸಿಸುತ್ತಿದ್ದಾರೆ. ವಿವಾದಾತ್ಮಕ ಕಾನೂನನ್ನು ಚೀನಾದ ಸಂಸತ್ತು ಮಂಗಳವಾರ ಅನುಮೋದಿಸಿದ ನಂತರ ಹಾಂಕಾಂಗ್ನಲ್ಲಿ ಪ್ರತಿಭಟನೆ ಇನ್ನಷ್ಟು ವ್ಯಾಪಕವಾಗಿದೆ.
ಚೀನಾ, ಪಾಕ್ ಕುತಂತ್ರ ವಿಫಲ
ಪಾಕಿಸ್ತಾನದ ಕರಾಚಿ ಷೇರು ಮಾರುಕಟ್ಟೆ ಕಟ್ಟಡದ ಮೇಲೆ ನಡೆದ ಉಗ್ರ ದಾಳಿಗೆ ಭಾರತವನ್ನು ಹೊಣೆ ಮಾಡಿ ಖಂಡನಾ ಹೇಳಿಕೆ ಹೊರಡಿಸಲು ಮುಂದಾಗಿದ್ದ ಚೀನಾ ಹಾಗೂ ಪಾಕಿಸ್ತಾನಕ್ಕೆ ಹಿನ್ನಡೆಯಾಗಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಅಮೆರಿಕ ಮತ್ತು ಜರ್ಮನಿ ಇದಕ್ಕೆ ತಡೆ ಹಾಕಿವೆ. ಈ ಮೂಲಕ ಚೀನಾಕ್ಕೆ ಮತ್ತೊಂದು ಮುಖಭಂಗವಾಗಿದ್ದು, ಭಾರತ ಮೇಲುಗೈ ಸಾಧಿಸಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ ಭಯೋತ್ಪಾದನೆ ಕೃತ್ಯಗಳನ್ನು ಖಂಡಿಸುವುದು ಸಹಜ ಪ್ರಕ್ರಿಯೆ. ಮಂಡನೆಯಾದ ಹೇಳಿಕೆಯನ್ನು ನಿಯಮದಂತೆ ನಾಲ್ಕು ಗಂಟೆವರೆಗೆ ‘ಮೌನ’ ಅವಧಿಗೆ ಒಳಪಡಿಸಲಾಗಿತ್ತು. ಯಾರೂ ಅದಕ್ಕೆ ಆಕ್ಷೇಪಣೆ ಎತ್ತದಿದ್ದರೆ ಅದು ಯಥಾವತ್ತಾಗಿ ಅಂಗೀಕಾರವಾಗುತ್ತದೆ. ಆದರೆ ಇದಕ್ಕೆ ಜರ್ಮನಿ, ಅಮೆರಿಕ ಆಕ್ಷೇಪ ವ್ಯಕ್ತಪಡಿಸಿದವು.