ನವದೆಹಲಿ: ಭಾರತ ಮಾನವಸಹಿತ ಗಗನಯಾನಕ್ಕೆ ಸಜ್ಜಾಗುತ್ತಿರುವ ನಡುವೆಯೇ, ಸದ್ದಿಲ್ಲದೆ ಮಾನವಸಹಿತ ‘ಸಮುದ್ರಯಾನ’ವನ್ನೂ ಕೈಗೊಳ್ಳಲು ಸಜ್ಜಾಗಿದೆ. ಆಳ ಸಾಗರ ಮತ್ತು ಅದರ ಸಂಪನ್ಮೂಲಗಳನ್ನು ಅನ್ವೇಷಿಸುವ ಗುರಿಯನ್ನು ಹೊಂದಿರುವ ಈ ಯೋಜನೆ 2026ರಲ್ಲಿ ಸಾಕಾರಗೊಳ್ಳಲಿದೆ. ಜಲಾಂತರ್ಗಾಮಿ (ಸಬ್ವುರ್ಸಿಬಲ್) ವಾಹನದ ಮೂಲಕ ಮೂವರನ್ನು ಸಮುದ್ರದಲ್ಲಿ 6,000 ಮೀಟರ್ ಆಳಕ್ಕೆ ಕಳುಹಿಸಿಕೊಡಲು ಮಾಡ್ಯೂಲ್ ಸಿದ್ಧವಾಗಿದೆ. ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಗುರುವಾರ ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಈ ಘೊಷಣೆ ಮಾಡಿದ್ದಾರೆ.
ಸಮುದ್ರಯಾನ ಭಾರತದ ಮೊದಲ ಮಾನವಸಹಿತ ಸಾಗರ ಯೋಜನೆಯಾಗಿದ್ದು, ಆಳ ಸಮುದ್ರದ ಸಂಪನ್ಮೂಲಗಳನ್ನು ಅಧ್ಯಯನ ಮಾಡಲು ಮತ್ತು ಜೀವವೈವಿಧ್ಯ ಮೌಲ್ಯಮಾಪನ ಕೈಗೊಳ್ಳಲು ವಿನ್ಯಾಸಗೊಳಿಸಲಾಗಿದೆ. ಜಲಾಂತರ್ಗಾಮಿ ವಾಹನವನ್ನು ಕೇವಲ ಪರಿಶೋಧನೆಯ ಉದ್ದೇಶಗಳಿಗಾಗಿ ಮಾತ್ರ ಬಳಸುವುದರಿಂದ ಈ ಯೋಜನೆಯಿಂದ ಯಾವುದೇ ಪರಿಸರ ಹಾನಿ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಇದನ್ನು ಚೆನ್ನೈನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (ಸಾಗರ ತಂತ್ರಜ್ಞಾನ ರಾಷ್ಟ್ರೀಯ ಸಂಸ್ಥೆ- ಎನ್ಐಒಟಿ) ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸುತ್ತಿದೆ.
ಇದುವರೆಗೂ ಅನ್ವೇಷಣೆ ಮಾಡಲಾಗದ ಆಳ ಸಮುದ್ರ ಪ್ರದೇಶಗಳನ್ನು ವೈಜ್ಞಾನಿಕ ಸಿಬ್ಬಂದಿಗೆ ನೇರವಾಗಿ ವೀಕ್ಷಿಸಲು ಮತ್ತು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುವ ಉದ್ದೇಶವಿರುವುದರಿಂದ ಈ ಯೋಜನೆಯು ಮಹತ್ವದ್ದಾಗಿದೆ. ಇದು ಕೇಂದ್ರ ಸರ್ಕಾರದ ’ಹೊಸ ಭಾರತ’ದ ದೃಷ್ಟಿಕೋನಕ್ಕೆ ಅನುರೂಪವಾಗಿದ್ದು, ನೀಲಿ ಆರ್ಥಿಕತೆಯ ಬೆಳವಣಿಗೆಯ ಹತ್ತು ಪ್ರಮುಖ ಆಯಾಮಗಳಲ್ಲಿ ಒಂದಾಗಿ ಎತ್ತಿ ತೋರಿಸುತ್ತದೆ.
ಎಲೈಟ್ ಕ್ಲಬ್ಗೆ ಭಾರತ
ಅಮೆರಿಕ, ರಷ್ಯಾ, ಫ್ರಾನ್ಸ್, ಜಪಾನ್ ಮತ್ತು ಚೀನಾ ಸೇರಿದಂತೆ ಆಳ ಸಮುದ್ರಯಾನಗಳನ್ನು ನಡೆಸಲು ವಿಶೇಷ ತಂತ್ರಜ್ಞಾನ ಮತ್ತು ವಾಹನಗಳನ್ನು ಹೊಂದಿರುವ ದೇಶಗಳ ಗಣ್ಯ ಗುಂಪಿಗೆ ಭಾರತವು ಈ ಯೋಜನೆಯ ಮೂಲಕ ಸೇರ್ಪಡೆಯಾಗಲಿದೆ.
ಮತ್ಸ್ಯ 6000
ಈ ಯಾನಕ್ಕಾಗಿ ನಿರ್ವಿುಸಲಾಗುತ್ತಿರುವ ವಾಹನಕ್ಕೆ ‘ಮತ್ಸ್ಯ 6000’ ಎಂದು ನಾಮಕರಣ ಮಾಡಲಾಗಿದೆ. ಈ ವಾಹನವು ಸಾಮಾನ್ಯ ಕಾರ್ಯಾಚರಣೆಯಲ್ಲಿ 12 ಗಂಟೆಗಳ ಕಾಲ ಮತ್ತು ಮಾನವ ಸುರಕ್ಷತೆಗಾಗಿ ತುರ್ತು ಸಂದರ್ಭದಲ್ಲಿ 96 ಗಂಟೆಗಳ ಕಾಲ ಕಾರ್ಯಾಚರಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.
4,077 ಕೋಟಿ ರೂ. ವೆಚ್ಚ
ಸಮುದ್ರಯಾನ ಯೋಜನೆಯನ್ನು ಒಳಗೊಂಡಿರುವ ಡೀಪ್ ಓಷನ್ ಮಿಷನ್ನ (ಆಳ ಸಾಗರ ಕಾರ್ಯಯೋಜನೆ) ವೆಚ್ಚವನ್ನು ಐದು ವರ್ಷಗಳ ಅವಧಿಗೆ 4,077 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದ್ದು, ಇದನ್ನು ಹಂತಹಂತವಾಗಿ ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ.