ಜಿನೇವಾ: ಕರೊನಾ ಸಾಂಕ್ರಾಮಿಕತೆಗೆ ಬಲಿಯಾದವರ ನಿಜವಾದ ಸಂಖ್ಯೆಯನ್ನು ಬಹಿರಂಗಪಡಿಸುವ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಪ್ರಯತ್ನಗಳಿಗೆ ಭಾರತ ಅಡ್ಡಗಾಲು ಹಾಕುತ್ತಿದೆ ಎಂಬ ಆರೋಪಕ್ಕೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ‘ನ್ಯೂಯಾರ್ಕ್ ಟೈಮ್್ಸ’ ಪತ್ರಿಕೆಯಲ್ಲಿ ಏಪ್ರಿಲ್ 16ರಂದು ಪ್ರಕಟವಾದ ‘ಕೋವಿಡ್ನ ಜಾಗತಿಕ ಸಾವಿನ ಸಂಖ್ಯೆ ಬಹಿರಂಗಕ್ಕೆ ಭಾರತದ ಅಡ್ಡಿಗಾಲು’ ಎಂಬ ಲೇಖನ ಪ್ರಕಟವಾಗಿದೆ. ಜಗತ್ತಿನಾದ್ಯಂತ 2021ರ ಅಂತ್ಯದ ಹೊತ್ತಿಗೆ ಒಟ್ಟು 1.5 ಕೋಟಿಗೂ ಅಧಿಕ ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಇದು ಈ ಹಿಂದೆ ಅಂದಾಜು ಮಾಡಿದ್ದಕ್ಕಿಂತ ತುಂಬಾ ಹೆಚ್ಚಿನದ್ದು ಎಂದು ಡಬ್ಲ್ಯುಎಚ್ಒ ಹೇಳಿದೆ. ಜಗತ್ತಿನಾದ್ಯಂತ ಕರೊನಾದಿಂದ ಮೃತಪಟ್ಟಿರುವ ಜನರ ನಿಖರವಾದ ಸಂಖ್ಯೆಯನ್ನು ತಿಳಿಯಲು ಒಂದು ವರ್ಷಕ್ಕಿಂತ ಹೆಚ್ಚು ಕಾಲ ತಜ್ಞರು ಸಂಶೋಧನೆ ಹಾಗೂ ವಿಶ್ಲೇಷಣೆ ನಡೆಸಿದ್ದಾರೆ. ಆದರೆ ಭಾರತದ ಆಕ್ಷೇಪದಿಂದಾಗಿ ಆ ವರದಿಯ ಬಿಡುಗಡೆ ವಿಳಂಬಗೊಂಡಿದೆ. ಭಾರತದಲ್ಲಿ ಮೃತಪಟ್ಟವರ ಸಂಖ್ಯೆಯ ಲೆಕ್ಕಾಚಾರದ ವಿಧಾನ ಸರಿಯಿಲ್ಲ ಎಂದು ವಾದಿಸುತ್ತಿರುವ ಭಾರತ, ಆ ವರದಿ ಬಹಿರಂಗಗೊಳ್ಳದಂತೆ ಸತತ ಪ್ರಯತ್ನ ನಡೆಸುತ್ತಿದೆ ಎಂದು ಪತ್ರಿಕೆ ಹೇಳಿದೆ.
500% ಏರಿಕೆ: ದೆಹಲಿ-ರಾಷ್ಟ್ರ ರಾಜಧಾನಿ ವಲಯದಲ್ಲಿ (ಎನ್ಸಿಆರ್) ಕಳೆದ 15 ದಿನಗಳಲ್ಲಿ ಕರೊನಾ ಹರಡುವಿಕೆ ಶೇಕಡ 500ರಷ್ಟು ಏರಿಕೆಯಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಕಳೆದ 15 ದಿನಗಳಲ್ಲಿ ತಮ್ಮ ಸಮೀಪವರ್ತಿ ವಲಯಗಳಲ್ಲಿ ಒಬ್ಬರು ಅಥವಾ ಹೆಚ್ಚು ಜನರು ಕೋವಿಡ್ ಸೋಂಕಿತರಾಗಿದ್ದಾರೆ ಎಂದು ಸಮೀಕ್ಷೆಗೆ ಪ್ರತಿಕ್ರಿಯಿಸಿದ ದೆಹಲಿ-ಎನ್ಸಿಆರ್ನ ಶೇಕಡ 19ರಷ್ಟು ಜನರು ತಿಳಿಸಿದ್ದಾರೆ.
ಕರೊನಾ ಸಾಂಕ್ರಾಮಿಕತೆ ವೇಳೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದಾಗಿ ದೇಶದಲ್ಲಿ ಸುಮಾರು 40 ಲಕ್ಷ ಜನರು ಮೃತಪಟ್ಟಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಯಾವತ್ತೂ ಸತ್ಯ ನುಡಿಯುವುದಿಲ್ಲ, ಬೇರೆಯವರಿಗೂ ಸತ್ಯ ಹೇಳಲು ಬಿಡುವುದಿಲ್ಲ. | ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ
ವಿಧಾನವೇ ಸರಿಯಲ್ಲ: ಕರೊನಾ ಸಾವನ್ನು ಲೆಕ್ಕ ಹಾಕಲು ಡಬ್ಲ್ಯುಎಚ್ಒ ಬಳಸಿರುವ ವಿಧಾನವನ್ನು ಭಾರತ ಪ್ರಶ್ನಿಸಿದೆ. ಭೌಗೋಳಿಕವಾಗಿ ವಿಶಾಲವಾಗಿರುವ ಹಾಗೂ ಅಗಾಧ ಜನಸಂಖ್ಯೆಯಿರುವ ಭಾರತದಂಥ ದೇಶದಲ್ಲಿ ಸಾವಿನ ಸಂಖ್ಯೆಯ ಲೆಕ್ಕಾಚಾರಕ್ಕೆ ಗಣಿತಶಾಸ್ತ್ರೀಯ ವಿಧಾನವನ್ನು ಅನ್ವಯಿಸಲಾಗದು ಎಂದಿದೆ. ಟಯರ್ ಒನ್ ದೇಶಗಳಿಂದ ನೇರವಾಗಿ ಪಡೆದ ಸಾವಿನ ಸಂಖ್ಯೆಗಳನ್ನು ವಿಶ್ಲೇಷಿಸಲು ಡಬ್ಲ್ಯುಎಚ್ಒ ಒಂದು ಗಣಿತೀಯ ವಿಧಾನವನ್ನು ಬಳಸುತ್ತದೆ. ‘ಫಲಿತಾಂಶ ಏನೇ ಇರಬಹುದು; ಭಾರತದ ಮೂಲಭೂತ ಆಕ್ಷೇಪ ಇರುವುದು ಅಳವಡಿಸಿಕೊಂಡ ಕ್ರಮಕ್ಕೆ’ ಎಂದು ಕೇಂದ್ರ ಸರ್ಕಾರ ಹೇಳಿದೆ.
* ದಕ್ಷಿಣ ಕೊರಿಯಾದಲ್ಲಿ ಕರೊನಾ ಸೋಂಕು ಉಲ್ಬಣಿಸಿದ್ದು ಒಂದೇ ದಿನ 93,001 ಹೊಸ ಪ್ರಕರಣಗಳು ದೃಢಪಟ್ಟಿವೆ.