ನ್ಯೂಸ್

ಕೇಂದ್ರದಿಂದ ಸೂರ್ಯಕಾಂತಿ, ಸೋಯಾಬೀನ್‌ ಎಣ್ಣೆಯ ಆಮದು ಸುಂಕ ಕಡಿತ: ಅಡುಗೆ ಎಣ್ಣೆ ಬೆಲೆ ಇಳಿಕೆ ಸಾಧ್ಯತೆ

ದೆಹಲಿ: ಕೇಂದ್ರ ಸರ್ಕಾರವು ಸಾರ್ವಜನಿಕರಿಗೆ ಗುಡ್​ನ್ಯೂಸ್​ವೊಂದನ್ನು ನೀಡಿದೆ. ಬೆಲೆ ಏರಿಕೆಯಿಂದಾಗಿ ತತ್ತರಿಸಿದ ಜನತೆ ಇದೀಗ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಕೇಂದ್ರವು ಅಡುಗೆ ಎಣ್ಣೆಯ ಮೇಲಿನ ಆಮದು ಸುಂಕನ್ನು ಕಡಿತಗೊಳಿಸಿದ್ದು, ಖಾದ್ಯ ತೈಲದ ಬೆಲೆಯನ್ನು ನಿಯಂತ್ರಣದಲ್ಲಿಡಲು ಈ ಕ್ರಮವನ್ನು ಕೈಗೊಂಡಿದೆ.

ಭಾರತವು ಸಂಸ್ಕರಿಸಿದ ಸೋಯಾಯಿಲ್ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲಿನ ಆಮದು ಸುಂಕವನ್ನು ಶೇಕಡಾ 17.5ರಿಂದ ಶೇಕಡಾ 12.5ಕ್ಕೆ ಇಳಿಸಿದೆ.ಈ ಕ್ರಮವು ಖಾದ್ಯ ತೈಲ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮತ್ತು ಕಚ್ಚಾ ಮತ್ತು ಸಂಸ್ಕರಿಸಿದ ತೈಲಗಳ ಆಮದುಗಳ ನಡುವೆ ಸಮತೋಲನವನ್ನು ಸಾಧಿಸಲು ಸಹಾಯಕವಾಗಿದೆ. 

ಇದನ್ನೂ ಓದಿ: ಬಿಜೆಪಿಗರ ಯಾವ ಕುತಂತ್ರವೂ ಅನ್ನಭಾಗ್ಯದ ದಾಸೋಹವನ್ನು ತಡೆಯಲು ಸಾಧ್ಯವಿಲ್ಲ: ಕಾಂಗ್ರೆಸ್​

ಕೇಂದ್ರವು ಮುಖ್ಯವಾಗಿ ಅರ್ಜೆಂಟೀನಾ, ಬ್ರೆಜಿಲ್, ಉಕ್ರೇನ್ ಮತ್ತು ರಷ್ಯಾದಿಂದ ಈ ಎರಡು ರೀತಿಯ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಚ್ಚಾ ಪಾಮ್ ಎಣ್ಣೆ, ಕಚ್ಚಾ ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಬೆಲೆಗಳು ಗಣನೀಯ ಇಳಿಕೆ ಕಂಡಿವೆ.

ಈ ತಿಂಗಳ ಮೊದಲನೇ ವಾರದಲ್ಲಿ ಕೇಂದ್ರವು ಖಾದ್ಯ ತೈಲ ಕಂಪನಿಗಳ ಸಭೆಯನ್ನು ಕರೆದು, ಜಾಗತಿಕ ಮಾರುಕಟ್ಟೆಗನುಗುಣವಾಗಿ ಅಡುಗೆ ಎಣ್ಣೆಯ ಎಂಆರ್‌ಪಿ ದರವನ್ನು ಪ್ರತಿ ಲೀಟರ್‌ಗೆ 8 ರಿಂದ 12 ರೂ. ಕಡಿಮೆಗೊಳಿಸುವಂತೆ ಕೇಂದ್ರ ಆಹಾರ ಸಚಿವಾಲಯವು ಉದ್ಯಮಗಳಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಮುಂದಿನ ದಿನಮಾನಗಳಲ್ಲಿ ಎಂಆರ್​ಪಿ ದರವು ಕಡಿಮೆಯಾಗುವ ಸಾಧ್ಯತೆಯಿದೆ.(ಏಜೆನ್ಸೀಸ್​)