ನ್ಯೂಸ್

ಲಡಾಖ್ ಗಡಿ ಬೂದಿ ಮುಚ್ಚಿದ ಕೆಂಡ; ಚೀನಾ ಸೇನೆ ಸನ್ನದ್ಧ; ಪ್ರತ್ಯುತ್ತರಕ್ಕೆ ಭಾರತವೂ ಸಿದ್ಧ

rameshmysuru

ನವದೆಹಲಿ: ಭಾರತ-ಚೀನಾ ಮಧ್ಯೆ ಲಡಾಖ್ ಗಡಿ ತಿಕ್ಕಾಟ ಕುರಿತು ಮಿಲಿಟರಿ ಹಾಗೂ ರಾಜತಾಂತ್ರಿಕ ಮಟ್ಟದಲ್ಲಿ ಹಲವು ಸುತ್ತಿನ ಮಾತುಕತೆಗಳು ನಡೆದು, ಸೇನೆ ಹಿಂಪಡೆಯುವಿಕೆಗೆ ಎರಡೂ ಕಡೆಗಳಿಂದ ಒಮ್ಮತ ಮೂಡಿದ್ದರೂ ಚೀನಾ ತನ್ನ ಸೇನಾ ಪಡೆಗಳನ್ನು ಗಡಿಯಿಂದ ಹಿಂದೆ ಕರೆಸಿಕೊಳ್ಳದೆ ಮೊಂಡಾಟ ಮುಂದುವರಿಸಿದೆ.

ಲಡಾಖ್ ಗಡಿಯಲ್ಲಿ ಪ್ರಸ್ತುತ ಚೀನಾ 40 ಸಾವಿರ ಸೈನಿಕರನ್ನು ಜಮಾವಣೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಭಾರತ ಕೂಡ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಗಳು, ಶಸ್ತ್ರಸಜ್ಜಿತ ವಾಹನಗಳು ಹಾಗೂ ದೀರ್ಘ ಶ್ರೇಣಿಯ ಫಿರಂಗಿ ದಳಗಳ ನಿಯೋಜನೆಯನ್ನು ಮುಂದುವರಿಸಿದೆ ಎಂದು ಕೆಲ ಮೂಲಗಳು ತಿಳಿಸಿವೆ. ಹೀಗಾಗಿ ಮತ್ತೊಂದು ಸುತ್ತಿನ ಬಿಕ್ಕಟ್ಟು ಆರಂಭವಾಗುವ ಸಾಧ್ಯತೆ ಇದೆ.

ಯಥಾಸ್ಥಿತಿ ಕಾಯ್ದುಕೊಳ್ಳಲು ಕ್ರಮ: ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್​ಎಸಿ) ಯಥಾಸ್ಥಿತಿ ಕಾಯ್ದುಕೊಳ್ಳಲು ಭಾರತೀಯ ಸಶಸ್ತ್ರ ಪಡೆಗಳು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ ಎಂದು ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ವೈ.ಕೆ. ಜೋಶಿ ಹೇಳಿದ್ದಾರೆ. ಎಲ್​ಎಸಿಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಪ್ರಸ್ತುತ ಪರಿಸ್ಥಿತಿ ಪರಿಹರಿಸಲು ಮಿಲಿಟರಿ ಮಟ್ಟದ ಸಂವಾದದಲ್ಲಿ ತೊಡಗಿಸಿಕೊಂಡಿದ್ದೇವೆ. ಕೋರ್ ಕಮಾಂಡರ್ ಮಟ್ಟದಲ್ಲಿ ನಾಲ್ಕು ಸುತ್ತಿನ ಮಾತುಕತೆ ನಂತರ ಸೇನೆ ಹಿಂಪಡೆಯುವಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇಸ್ರೇಲ್​ನಿಂದ ಭಾರತಕ್ಕೆ ನೆರವಿನ ಭರವಸೆ: ಭಾರತದ ರಕ್ಷಣಾ ಸರಕು ಪೂರೈಕೆಯ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿರುವ ಇಸ್ರೇಲ್, ಚೀನಾದೊಂದಿಗಿನ ಗಡಿ ಬಿಕ್ಕಟ್ಟಿನ ಕುರಿತು ಸಾಧ್ಯವಾದ ಸಹಾಯ ಮಾಡುವುದಾಗಿ ಭಾರತಕ್ಕೆ ಭರವಸೆ ನೀಡಿದೆ. ಉಭಯ ದೇಶಗಳ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಮತ್ತು ಬೆಂಜಮಿನ್ ಗ್ಯಾಂಟ್ಜಾ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ರಕ್ಷಣಾ ಕಾರ್ಯಗಳನ್ನು ಮತ್ತಷ್ಟು ಬಲಪಡಿಸುವ ಸಾಧ್ಯತೆಗಳ ಬಗ್ಗೆ ರ್ಚಚಿಸಿದ್ದಾರೆ. ಇಂಡೋನೇಷ್ಯಾದ ರಕ್ಷಣಾ ಸಚಿವ ಪ್ರಬೊವೊ ಸುಬಿಯಾಂಟೊ ಸೋಮವಾರ ನವದೆಹಲಿಗೆ ಭೇಟಿ ನೀಡಲಿದ್ದಾರೆ.