ನವದೆಹಲಿ: ಭಾರತ ಮತ್ತು ಚೀನಾ ಸೇನಾ ಪಡೆಗಳು ಮಂಗಳವಾರ(ಅ.30) ಡೆಮ್‌ಚೋಕ್ ಮತ್ತು ಡೆಪ್ಸಾಂಗ್‌ನಲ್ಲಿ ನೈಜ ನಿಯಂತ್ರಣ ರೇಖೆ(India-China LAC)ಯಲ್ಲಿ ಸಂಪೂರ್ಣವಾಗಿ ಹಿಂದಕ್ಕೆ ಸರಿದವು.
ಪೂರ್ವ ಲಡಾಖ್‌ನಲ್ಲಿ ಎರಡೂ ಸೇನೆಗಳ ವಾಪಸಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ದೀಪಾವಳಿಯಿಂದ ಉಭಯ ದೇಶಗಳ ಸೇನೆಗಳು ಕೇವಲ ಗಸ್ತು ತಿರುಗಲು ದಾರಿ ಸುಗಮವಾಗಿದೆ. ಅಷ್ಟೇ ಅಲ್ಲ, ದೀಪಾವಳಿ ಪ್ರಯುಕ್ತ ಎರಡೂ ಸೇನೆಗಳು ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡವು.
ಎರಡೂ ಸೇನೆಗಳು ಗಡಿಯಲ್ಲಿ ತಮ್ಮ ತಾತ್ಕಾಲಿಕ ಸೇನಾ ಶಿಬಿರಗಳನ್ನು ತೆರವುಗೊಳಿಸಿದ್ದು, ಬಹುತೇಕ ಪೂರ್ಣಗೊಂಡಿದೆ. ಇದರೊಂದಿಗೆ ಎರಡೂ ಕಡೆಯಿಂದ ಉನ್ನತ ಮಟ್ಟದ ಪರಿಶೀಲನೆಯನ್ನು ಸಹ ಮಾಡಲಾಗಿದೆ.
ಇನ್ನು ಮುಂದೆ 10 ರಿಂದ 15 ಸೈನಿಕರ ತುಕಡಿ ಮಾತ್ರ ಇಲ್ಲಿ ಗಸ್ತು ತಿರುಗಲಿದೆ. ಏಪ್ರಿಲ್ 2020 ರ ಮೊದಲು ಪರಿಸ್ಥಿತಿಯನ್ನು ಪುನಃಸ್ಥಾಪಿಸಲಾಗುತ್ತದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಕಳೆದ ನಾಲ್ಕೂವರೆ ವರ್ಷದಿಂದ ಗಡಿಯಲ್ಲಿ ಉಭಯ ದೇಶಗಳ ಸೇನೆಗಳ ನಡುವೆ ಘರ್ಷಣೆಯ ಸನ್ನಿವೇಶವಿದ್ದು, ಕೊನೆಗೂ ಇದು ಅಂತ್ಯಗೊಂಡಿದೆ.
ಅ. 21 ರಂದು ಬ್ರಿಕ್ಸ್ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ನಂತರ ಗಡಿ ಸಮಸ್ಯೆ ಬಗ್ಗೆ ಒಮ್ಮತ ಮೂಡಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ಇದು ವಿಶ್ವಕ್ಕೇ ಮಾದರಿಯಾಗಿದೆ.