ನವದೆಹಲಿ: ಕಳೆದ ಬಾರಿ ಹೀನಾಯವಾಗಿ ಸೋಲುಂಡಿದ್ದ ಕಾಂಗ್ರೆಸ್ ಈ ಬಾರಿ ಪುಟಿದ್ದೆದ್ದಿದ್ದು, ಆಡಳಿತಾರೂಢ ಬಿಜೆಪಿಗೆ ಟಕ್ಕರ್ ಕೊಡುತ್ತಿದೆ. ಲೊಕಸಭಾ ಚುನಾವಣೆಯ ಮತಎಣಿಕೆಯಲ್ಲಿ ಈ ಬಾರಿ ಇಂಡಿ ಒಕ್ಕೂಟ 225 ಸ್ಥಾನಗಳಲ್ಲಿ ಮುನ್ನಡೆಯನ್ನು ಸಾಧಿಸಿದ್ದು, ಸರ್ಕಾರ ರಚನೆಯ ಆಸೆಯನ್ನು ಜೀವಂತವಾಗಿ ಇರಿಸಿಕೊಂಡಿದೆ.
ಇಂಡಿ ಒಕ್ಕೂಟ ಈಗಾಗಲೇ ಸರ್ಕಾರ ರಚನೆಗೆ ಪ್ರಯತ್ನವನ್ನು ಆರಂಭಿಸಿದ್ದು, ಎನ್ಡಿಎ ಮೈತ್ರಿಕೂಟವಾದ ಬಿಹಾರದ ಜೆಡಿಯು ಮತ್ತು ಟಿಡಿಪಿ ಜತೆ ಮಾತುಕತೆಯನ್ನು ನಡೆಸಲಿದೆ ಎಂಬ ಮಾಹಿತಿ ತಿಳಿದುಬಂದಿದೆ.
545 ಸ್ಥಾನಗಳನ್ನು ಹೊಂದಿರುವ ಲೋಕಸಭೆಯಲ್ಲಿ ಸರ್ಕಾರ ರಚಿಸಲು 272 ಸ್ಥಾನಗಳ ಬಹುಮತವನ್ನು ಸಾಧಿಸಬೇಕಾಗಿದೆ. ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟ 297 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೂ ಕೂಡ ಬಿಜೆಪಿ ಏಕಾಂಗಿಯಾಗಿ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ. ಏಕೆಂದರೆ, ಸರ್ಕಾರ ರಚನೆಗೆ ಮೈತ್ರಿ ಪಕ್ಷಗಳನ್ನು ಅವಲಂಬಿಸಬೇಕಾಗಿದೆ.
ಇತ್ತ ಇಂಡಿ ಒಕ್ಕೂಟ 227 ಸ್ಥಾನಗಳಲ್ಲಿ ಮುನ್ನಡೆಯನ್ನು ಸಾಧಿಸಿದೆ. ಬಹುಮತಕ್ಕೆ 45 ಸ್ಥಾನಗಳು ಬೇಕಾಗಿದ್ದು, ಈಗಲೂ ಕೂಡ ಸರ್ಕಾರ ರಚನೆಯ ಆಸೆಯನ್ನು ಜೀವಂತವಾಗಿ ಇರಿಸಿಕೊಂಡಿದೆ. ಸದ್ಯ ಸರ್ಕಾರ ರಚನೆಯ ಕಸರತ್ತನ್ನು ಇಂಡಿ ಒಕ್ಕೂಟ ಆರಂಭಿಸಿದ್ದು, ಎನ್ಡಿಎ ಮೈತ್ರಿ ಪಕ್ಷಗಳ ಜತೆ ಮಾತುಕತೆ ನಡೆಸಲಿದೆ. ಮೂಲಗಳ ಪ್ರಕಾರ, ಕಾಂಗ್ರೆಸ್ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಟಿಡಿಪಿ ಜತೆ ಮಾತನಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಜೆಡಿಯು ಪ್ರತಿಕ್ರಿಯೆ ಏನು?
ಇಂಟಿ ಒಕ್ಕೂಟ ಜೆಡಿಯು ಜತೆ ಮಾತುಕತೆ ನಡೆಸಿದೆ ಎಂದು ತಿಳಿಯುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಜೆಡಿಯು ನಾವು ಯಾವುದೇ ಕಾರಣಕ್ಕೂ ಇಂಡಿ ಒಕ್ಕೂಟ ಜತೆ ಕೈಜೋಡಿಸುವುದಿಲ್ಲ, ನಾವು ಎನ್ಡಿಎ ಜತೆ ಸೇರಿ ಸರ್ಕಾರ ರಚನೆ ಮಾಡುತ್ತೇವೆ ಎಂದು ಸ್ಪಷ್ಟ ಸಂದೇಶವನ್ನು ರವಾನಿಸಿದೆ.
ಮಧ್ಯಾಹ್ನ 1.06ರ ಟ್ರೆಂಡ್ ಪ್ರಕಾರ ಒಟ್ಟು 545 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 298ರಲ್ಲಿ ಮತ್ತು ಕಾಂಗ್ರೆಸ್ 226ರಲ್ಲಿ ಹಾಗೂ ಇತರೆ 19 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 16, ಕಾಂಗ್ರೆಸ್ 10 ಮತ್ತು ಜೆಡಿಎಸ್ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. (ಏಜೆನ್ಸೀಸ್)