ನ್ಯೂಸ್

‘ಇಂಡಿಯಾ' ಮೈತ್ರಿಕೂಟ ಪತನದ ಅಂಚಿನಲ್ಲಿದೆ: ಕೆ.ಸಿ.ತ್ಯಾಗಿ

ನವದೆಹಲಿ: ಕಾಂಗ್ರೆಸ್ ನಾಯಕತ್ವವು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಪದೇ ಪದೇ ಅವಮಾನಿಸಿದೆ. ಬಿಹಾರದ ಮೈತ್ರಿಕೂಟ ಸರ್ಕಾರ ಪತನಕ್ಕೆ ಕಾಂಗ್ರೆಸ್​ ಪ್ರಮುಖ ಕಾರಣ ಎಂದು ಜೆಡಿಯು ಹಿರಿಯ ನಾಯಕ ಕೆ.ಸಿ.ತ್ಯಾಗಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ ನೇತೃತ್ವದ ‘ಇಂಡಿಯಾ' ಮೈತ್ರಿಕೂಟವು ಪತನದ ಅಂಚಿನಲ್ಲಿದೆ. ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ‘ಇಂಡಿಯಾ’ ಬಣದ ಮಿತ್ರ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿರುವುದು ಇದಕ್ಕೆ ಸಾಕ್ಷಿ ಎಂದು ತ್ಯಾಗಿ ದೂರಿದ್ದಾರೆ.

ಕಾಂಗ್ರೆಸ್‌ನೊಂದಿಗೆ ಇತರೆ ಪಕ್ಷಗಳನ್ನು ಕರೆತರುವಲ್ಲಿ ನಿತೀಶ್ ಕುಮಾರ್ ಅವರು ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೂ ನಮ್ಮ ನಾಯಕ ನಿತೀಶ್ ಕುಮಾರ್ ಅವರನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಕಿಡಿಕಾರಿದ್ದಾರೆ.

ನಿತೀಶ್​ ಕುಮಾರ್ ಅವರು ಮೈತ್ರಿಕೂಟದಲ್ಲಿ ಯಾವುದೇ ಸ್ಥಾನವನ್ನು ಬಯಸುತ್ತಿಲ್ಲ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಕಾಂಗ್ರೆಸ್​ ನೇತೃತ್ವದ ಬಣ ಅವರನ್ನು ಅಗೌರವಿಸುತ್ತಾ ಬಂದಿದೆ ಎಂದು ಹೇಳಿದರು.

'ಇಂಡಿಯಾ' ಮೈತ್ರಿಕೂಟದಲ್ಲಿರುವ ಪ್ರಾದೇಶಿಕ ಪಕ್ಷಗಳು ಬಲಿಷ್ಠ ಬಿಜೆಪಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಹೇಗೆ ಸಾಧ್ಯ ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ.