ನ್ಯೂಸ್

ಸ್ವಿಸ್ ಬ್ಯಾಂಕ್ ಖಾತೆಗಳ ಹೊಸ ವಿವರ ಪಡೆದ ಭಾರತ; ಸ್ವಿಟ್ಜರ್ಲೆಂಡ್​ಜತೆಗೆ 5ನೇ ವಾರ್ಷಿಕ ಮಾಹಿತಿ ವಿನಿಮಯ

ನವದೆಹಲಿ: ವಾರ್ಷಿಕ ಆಧಾರದ ಮೇಲೆ ಮಾಹಿತಿ ವಿನಿಮಯದ ವ್ಯವಸ್ಥೆ ಅಡಿಯಲ್ಲಿ ಭಾರತವು ತನ್ನ ನಾಗರಿಕರು ಮತ್ತು ಸಂಸ್ಥೆಗಳ, ಸ್ವಿಸ್ ಬ್ಯಾಂಕ್ ಖಾತೆಗಳ ಹೊಸ ವಿವರಗಳನ್ನು ಸ್ವಿಟ್ಜರ್ಲೆಂಡ್​ನಿಂದ ಸ್ವೀಕರಿಸಿದೆ. ಸ್ವಿಟ್ಜರ್ಲೆಂಡ್ 104 ದೇಶಗಳೊಂದಿಗೆ ಅಂದಾಜು 36 ಲಕ್ಷ ಹಣಕಾಸು ಖಾತೆಗಳ ವಿವರಗಳನ್ನು ಹಂಚಿ ಕೊಂಡಿದೆ. ಇದು ಸ್ವಿಟ್ಜರ್ಲೆಂಡ್ ಮತ್ತು ಭಾರತದ ನಡುವಿನ ಐದನೇ ವಾರ್ಷಿಕ ಮಾಹಿತಿ ವಿನಿಮಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾದ ಹೊಸ ದತ್ತಾಂಶವು ವ್ಯಕ್ತಿಗಳು, ಕಾರ್ಪೆರೇಟ್​ಗಳು ಮತ್ತು ಟ್ರಸ್ಟ್​ಗಳಿಗೆ ಸಂಬಂಧಿಸಿದ ನೂರಾರು ಹಣಕಾಸು ಖಾತೆಗಳ ಮಾಹಿತಿ ಒಳಗೊಂಡಿದೆ. ಇವುಗಳಲ್ಲಿ ಹೆಸರು, ವಿಳಾಸ, ವಾಸಿಸುವ ದೇಶ ಮತ್ತು ತೆರಿಗೆ ಗುರುತಿನ ಸಂಖ್ಯೆ ಸೇರಿದಂತೆ ಗುರುತು, ಖಾತೆ ಮತ್ತು ಹಣಕಾಸಿನ ಮಾಹಿತಿ ಇದೆ. ಕಳೆದ ತಿಂಗಳು ಈ ವಿನಿಮಯ ನಡೆದಿದ್ದು, ಮುಂದಿನ ಮಾಹಿತಿಯನ್ನು ಸ್ವಿಟ್ಜರ್ಲೆಂಡ್ ಸೆ. 2024ರಲ್ಲಿ ಹಂಚಿಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಿಸ್ ರಾಜಧಾನಿ ಬರ್ನ್​ನಲ್ಲಿ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ (ಎಫ್​ಟಿಐ) ಸೋಮವಾರ ನೀಡಿದ ಹೇಳಿಕೆಯ ಪ್ರಕಾರ, ಸ್ವಯಂಚಾಲಿತ ಮಾಹಿತಿ ವಿನಿಮಯದ ಜಾಗತಿಕ ಮಾನದಂಡದ ಚೌಕಟ್ಟಿನೊಳಗೆ ಹಣಕಾಸು ಖಾತೆಗಳ ವಿವರಗಳನ್ನು 104 ದೇಶಗಳೊಂದಿಗೆ ಹಂಚಿಕೊಳ್ಳಲಾಗಿದೆ. ಈ ವರ್ಷ ಕಝಾಕಿಸ್ತಾನ್, ಮಾಲ್ಡೀವ್ಸ್ ಮತ್ತು ಓಮನ್ ಅನ್ನು ಹಿಂದಿನ 101 ದೇಶಗಳ ಪಟ್ಟಿಗೆ ಸೇರಿಸಲಾಗಿದೆ. ಹಣಕಾಸು ಖಾತೆಗಳ ಸಂಖ್ಯೆ ಅಂದಾಜು ಎರಡು ಲಕ್ಷದಷ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.

ಮಾಹಿತಿಯ ಉಪಯೋಗ: ಈ ಮಾಹಿತಿಯಲ್ಲಿನ ವಿವರಗಳನ್ನು ತೆರಿಗೆ ವಂಚನೆ, ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ಸೇರಿದಂತೆ ಇತರ ತಪ್ಪು ಕೃತ್ಯಗಳ ತನಿಖೆಗೆ ಬಳಸಲಾಗುವುದು ಎಂದು ಮೂಲಗಳು ತಿಳಿಸಿವೆ.