ನ್ಯೂಸ್

ಜನಜಾಗೃತಿ ಅಗತ್ಯ; ಹೆಚ್ಚುತ್ತಿರುವ ಡಿಜಿಟಲ್ ವಂಚನೆ....

ಆಧುನಿಕ ತಂತ್ರಜ್ಞಾನ ಬೆಳೆದಂತೆ ಅದರ ಉಪಯೋಗಗಳು ಹೆಚ್ಚಿದಂತೆ ಜನರಿಗೆ ವಂಚನೆ ಕೂಡ ಹೆಚ್ಚುತ್ತಿರುವುದು ಕಳವಳದ ಸಂಗತಿ. ಬ್ಯಾಂಕ್ ಅಧಿಕಾರಿಗಳ ಹೆಸರಲ್ಲಿ ಕರೆಮಾಡಿ ಖಾತೆ ವಿವರ ತಿಳಿದು ಹಣ ಎಗರಿಸುವುದು, ಸಾಮಾಜಿಕ ಜಾಲತಾಣದಲ್ಲಿ ಸ್ನೇಹ ಬೆಳೆಸಿ ನಾನಾ ಬಗೆಯಲ್ಲಿ ವಂಚನೆ, ಡಿಜಿಟಲ್ ವ್ಯವಹಾರದ ಸಂದರ್ಭದಲ್ಲಿ ಮೋಸ...

ಹೀಗೆ ಈ ವ್ಯಾಪ್ತಿ ವಿಸ್ತಾರವಾಗುತ್ತಲೇ ಇದೆ. ಈಚೆಗೆ ಜನರನ್ನು ಮರುಳುಗೊಳಿಸಿ ಯಾಮಾರಿಸುತ್ತಿರುವ ಮತ್ತೊಂದು ದಂಧೆಯೆಂದರೆ ಮೊಬೈಲ್ ಅಪ್ಲಿಕೇಷನ್​ಗಳಲ್ಲೇ (ಆಪ್) ಸಾಲ ಕೊಡಿಸುವ ವ್ಯವಸ್ಥೆ. ಸುಲಭದಲ್ಲಿ ಸಾಲ ಕೊಡಿಸುವುದಾಗಿ ಹೇಳಿ, ಜನರ ಆಧಾರ್, ಪ್ಯಾನ್ ಇತ್ಯಾದಿ ದಾಖಲೆಗಳನ್ನು ಸಹ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಈ ರೀತಿ ಸಾಲ ಕೊಡಿಸುವ ಆಪ್ ವ್ಯವಹಾರದಲ್ಲಿ ಚೀನೀ ಪ್ರಜೆಗಳು ಹೆಚ್ಚಿನ ಪ್ರಮಾಣದಲ್ಲಿ ತೊಡಗಿರುವುದು ದೇಶದ ಭದ್ರತೆ ದೃಷ್ಟಿಯಿಂದಲೂ ಅಪಾಯಕಾರಿ ಎಂದೇ ಹೇಳಬೇಕಾಗಿದೆ. ಸಾಲ ನೀಡುವ 60ಕ್ಕೂ ಹೆಚ್ಚು ನಕಲಿ ಆಪ್​ಗಳು ದೇಶದಲ್ಲಿ ಸಕ್ರಿಯವಾಗಿದ್ದು, ಈ ಬಗ್ಗೆ ಗ್ರಾಹಕರು ಎಚ್ಚರವಹಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಜನರಿಗೆ ಸಲಹೆ ನೀಡಿರುವುದು ಸಮಸ್ಯೆಯ ಗಂಭೀರತೆಗೆ ಸಾಕ್ಷಿ ಎನ್ನಬಹುದು.

ಆಂಡ್ರಾಯ್ಡ್ ಬಳಕೆದಾರರ ವಿವಿಧ ಆಪ್ ಸ್ಟೋರ್​ಗಳಲ್ಲಿ ಲಭ್ಯವಿರುವ ಈ ಆಪ್​ಗಳು ಅಮಾಯಕ ಜನರನ್ನು ವಂಚಿಸುತ್ತಿವೆ ಎಂದು ಡಿಜಿಟಲ್ ಲೆಂಡಿಂಗ್ ಬಗೆಗಿನ ಆರ್​ಬಿಐ ಕಾರ್ಯಪಡೆ ತಿಳಿಸಿದೆ. ಈ ರೀತಿಯಾಗಿ ಸಾಲ ನೀಡುವ ಡಿಜಿಟಲ್ ಲೆಂಡಿಂಗ್ ಆಪ್ (ಡಿಎಲ್​ಎ)ಗಳ ಬಗ್ಗೆ ದೂರುಗಳು ಹೆಚ್ಚುತ್ತಿದ್ದು, ಇದಕ್ಕಾಗಿ ಆರ್​ಬಿಐ ‘ಸಚೇತ್’ ಎಂಬ ಪೋರ್ಟಲ್ ತೆರೆದಿದೆ. ಲೋನ್, ಇನ್ವೆಸ್ ್ಟೆುಂಟ್ ಲೋನ್, ಕ್ವಿಕ್ ಲೋನ್ ಇತ್ಯಾದಿ ಪದಗಳೊಂದಿಗೆ ಹುಡುಕಿದಾಗ 1,100 ಲೋನ್ ಆಪ್​ಗಳು ಕಂಡುಬರುತ್ತವೆ. ಇವು 2021ರ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ 80 ಕ್ಕೂ ಅಧಿಕ ಆಪ್ ಸ್ಟೋರ್​ಗಳ ಮೂಲಕ ಲಭ್ಯವಿದ್ದವು ಎಂದು ಹೇಳಲಾಗಿದೆ.

ಈ ರೀತಿಯ ಆಪ್​ಗಳ ಮೂಲಕ ಸಾಲ ಪಡೆದವರು ನಂತರದಲ್ಲಿ ಅಧಿಕ ಬಡ್ಡಿ ತುಂಬಬೇಕಾದ ಪರಿಸ್ಥಿತಿ ಹಾಗೂ ಕಿರುಕುಳ ಕೂಡ ಎದುರಿಸಿದ್ದಾರೆ ಎಂಬ ದೂರುಗಳಿವೆ. ಅಲ್ಲದೆ ಕೆಲವರ ಆಧಾರ್ ಮತ್ತು ಮತದಾರರ ಗುರುತಿನ ಚೀಟಿಗಳ ದುರ್ಬಳಕೆಯೂ ಆಗಿವೆ ಎಂದು ವರದಿಗಳಿವೆ. ಹೀಗಾಗಿ ಜನರು ಜಾಗೃತವಾಗಿರಬೇಕಾಗಿದೆ. ಅಧಿಕೃತ ಸಂಸ್ಥೆಗಳಲ್ಲಿ ಮಾತ್ರ ಸಾಲ, ಠೇವಣಿ ಇತ್ಯಾದಿ ವ್ಯವಹಾರ ಮಾಡಬೇಕು. ಇದಲ್ಲದೆ, ಸರ್ಕಾರ ಮತ್ತು ಸಂಬಂಧಪಟ್ಟ ಸಂಸ್ಥೆಗಳು ಜನರಲ್ಲಿ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದ ಅಗತ್ಯವಿದೆ. ಏಕೆಂದರೆ, ದಿನದಿನಕ್ಕೂ ಇಂಥ ವಂಚನೆಗಳ ಜಾಲ ವಿಸ್ತರಿಸುತ್ತಲೇ ಇದೆ ಮತ್ತು ಹೊಸ ಹೊಸ ಬಗೆಯ ವಂಚನೆಗಳು ನಡೆಯುತ್ತಿವೆ. ನಮ್ಮಲ್ಲಿ ಸೈಬರ್ ವಂಚನೆಯ ಪ್ರಕರಣಗಳ ತನಿಖೆ ನಡೆಸಿ, ರ್ತಾಕ ಅಂತ್ಯಕ್ಕೆ ತರಲು ಪೊಲೀಸ್ ವ್ಯವಸ್ಥೆಯಲ್ಲಿ ಸೈಬರ್ ವಿಭಾಗ ಬಲಗೊಳ್ಳಬೇಕಾದ ತುರ್ತು ಅಗತ್ಯವಿದೆ. ಏಕೆಂದರೆ ಇಂಥ ಪ್ರಕರಣಗಳ ತನಿಖೆಗೆ ತಂತ್ರಜ್ಞಾನ ಪರಿಣತಿ ಹಾಗೂ ಹೊಸ ರೀತಿಯ ತನಿಖಾ ವಿಧಾನದ ಮಾಹಿತಿ ಇರಬೇಕಾಗುತ್ತದೆ. ಸರ್ಕಾರಗಳು ಈ ಬಗ್ಗೆ ಗಮನಹರಿಸಬೇಕಿದೆ.