ದೇಶದಲ್ಲಿ ರಸ್ತೆ ಅಪಘಾತ ಪ್ರಕರಣಗಳಲ್ಲಿ ಸಾವುಗಳ ಸಂಖ್ಯೆ ಏರುತ್ತಿರುವುದರ ಬಗ್ಗೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಜನರಲ್ಲಿ ಕಾನೂನಿನ ಬಗ್ಗೆ ಭಯ ಅಥವಾ ಗೌರವ ಇಲ್ಲದಂತಾಗಿದೆ ಎಂದು ಬೊಟ್ಟು ಮಾಡಿದ್ದಾರೆ.
ರಸ್ತೆ ಅಪಘಾತದ ಕುರಿತಂತೆ ಪ್ರಶ್ನೆಯೊಂದಕ್ಕೆ ಗುರುವಾರ ಲೋಕಸಭೆಯಲ್ಲಿ ಉತ್ತರ ನೀಡಿದ ಗಡ್ಕರಿ, ‘ಮಹಾರಾಷ್ಟ್ರದಲ್ಲಿ ಪ್ರತಿಪಕ್ಷ ನಾಯಕನಾಗಿದ್ದಾಗ ನಾನೇ ಸ್ವತಃ ರಸ್ತೆ ಅಪಘಾತಕ್ಕೆ ಗುರಿಯಾಗಿ, ಕಾಲಿಗೆ ನಾಲ್ಕು ಕಡೆ ತೀವ್ರ ಪೆಟ್ಟು ಅನುಭವಿಸಿದ್ದೆ. ಈ ಸಮಸ್ಯೆಯ ಬಗ್ಗೆ ನಾನು ಸೂಕ್ಷ್ಮತೆ ಉಳ್ಳವನಾಗಿದ್ದೇನೆ’ ಎಂದಿದ್ದಾರೆ. ಅಲ್ಲದೆ, ‘ಅಪಘಾತಗಳಲ್ಲಿ ಸಾವಿನ ಸಂಖ್ಯೆ ತಗ್ಗಿಸಲು ಸರ್ಕಾರ ಶ್ರಮ ವಹಿಸುತ್ತಿದೆ. ರಸ್ತೆ, ವಾಹನಗಳ ನಿರ್ವಹಣೆ, ಕಾನೂನು ಜಾರಿ ಮತ್ತು ಜನಜಾಗೃತಿಯಿಂದ ಈ ಸಮಸ್ಯೆಯ ನಿವಾರಣೆ ಸಾಧ್ಯ. ಅಪಘಾತ ವಲಯಗಳಲ್ಲಿ ಮುಂಜಾಗ್ರತೆಗೆ 40 ಸಾವಿರ ಕೋಟಿ ರೂ.ಗಳನ್ನು ಸರ್ಕಾರ ವೆಚ್ಚ ಮಾಡುತ್ತಿದೆ’ ಎಂದಿದ್ದಾರೆ. ಈ ಮೂಲಕ ರಸ್ತೆ ಅಪಘಾತದಂಥ ಗಂಭೀರ ಸಮಸ್ಯೆಯ ಬಗ್ಗೆ ಗಡ್ಕರಿ ಮುಕ್ತವಾಗಿ ಮಾತನಾಡಿದ್ದಾರೆ. ಯುದ್ಧ, ಭಯೋತ್ಪಾದನೆ ಮತ್ತು ನಕ್ಸಲೀಯರ ವಿಧ್ವಂಸಕ ಕೃತ್ಯದಿಂದ ಸಂಭವಿಸುವ ಸಾವುಗಳಿಗಿಂತಲೂ ದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ಮೃತಪಡುವವರ ಸಂಖ್ಯೆ ಹೆಚ್ಚಿದೆ ಎಂಬುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ.
ಅತಿ ವೇಗದ ಚಾಲನೆ, ನಿರ್ಲಕ್ಷ್ಯದ ಚಾಲನೆ, ರಾಂಗ್ ವೇಯಲ್ಲಿ ನುಗ್ಗಿ ಬರುವುದು ಹೀಗೆ ಸಂಚಾರ ನಿಯಮಗಳನ್ನು ಸಾರಾಸಗಟಾಗಿ ಉಲ್ಲಂಘಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಅಪಘಾತ ಮತ್ತು ಜೀವಹಾನಿಗೆ ಕಾರಣವಾಗುತ್ತಿವೆ. ಈ ವರ್ಷ ದೇಶದಲ್ಲಿ 1.68 ಲಕ್ಷ ಜನರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದು, ಈ ಪೈಕಿ 30 ಸಾವಿರ ಜನರು ಹೆಲ್ಮೇಟ್ ಧರಿಸದ ಕಾರಣಕ್ಕೆ ಜೀವ ತೆತ್ತಿದ್ದಾರೆ. ರಸ್ತೆ ಅಪಘಾತಗಳನ್ನು ನಿಯಂತ್ರಿಸುವಲ್ಲಿ ಸರ್ಕಾರ ಮತ್ತು ಸಾರ್ವಜನಿಕರ ಜಂಟಿ ಹೊಣೆಗಾರಿಕೆ ಇದೆ. ರಸ್ತೆಗಳ ದುಸ್ಥಿತಿ, ವಾಹನ ಸವಾರರ ಅಜಾಗರೂಕ ಚಾಲನೆ, ವಿಶ್ರಾಂತಿ ಇಲ್ಲದೆ ವಾಹನ ಚಲಾಯಿಸುವುದು ಮತ್ತು ಹವಾಮಾನ ವೈಪರೀತ್ಯದಂಥ ಕಾರಣಗಳು ಅಪಘಾತದ ಪ್ರಮಾಣ ಹೆಚ್ಚಿಸುತ್ತಿವೆ.
ಜನರು ಕೂಡ ಸಂಚಾರ ನಿಯಮಗಳ ಪಾಲನೆಯಲ್ಲಿ ಯಾವುದೇ ಕಾರಣಕ್ಕೂ ಅಸಡ್ಡೆ ತೋರಬಾರದು, ಅಡ್ಡಾದಿಡ್ಡಿ ವಾಹನ ಚಾಲಕರ ವಿರುದ್ಧ ಸಂಚಾರ ಪೊಲೀಸರು ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ, ರಸ್ತೆಗಳ ಗುಣಮಟ್ಟ ಹೆಚ್ಚಬೇಕು. ಗುಂಡಿಗಳು ಸೃಷ್ಟಿಸಿರುವ ಗಂಡಾಂತರಗಳಿಂದ ಮಾರಣಾಂತಿಕ ಅಪಘಾತಗಳು ಸಂಭವಿಸಿದ ಹಲವು ನಿದರ್ಶನಗಳಿಗೆ ಬೆಂಗಳೂರು ಸಾಕ್ಷಿಯಾಗಿದೆ. ಜೀವ ಮತ್ತು ಜೀವನ ಎರಡೂ ಅಮೂಲ್ಯ. ಸಂಚಾರ ನಿಯಮಗಳ ಸರಿಯಾದ ಪಾಲನೆ ಬಗ್ಗೆ ಅರಿವು ಮೂಡಿಸಬೇಕಿದೆ ಮತ್ತು ಜನರು ತಮ್ಮ ಜವಾಬ್ದಾರಿಯನ್ನು ಅರಿತು ಸ್ವಯಂಪ್ರೇರಿತವಾಗಿ ಈ ನಿಟ್ಟಿನಲ್ಲಿ ಹೊಣೆಗಾರಿಕೆ ಮೆರೆಯಬೇಕಿದೆ.
ಸುರಕ್ಷಿತ ಚಾಲನೆಯ ಶಿಸ್ತನ್ನು ಚಾಲಕರು ಅಳವಡಿಸಿಕೊಳ್ಳಬೇಕು. ರಸ್ತೆ ಮತ್ತು ವಾಹನಗಳು ಅಭಿವೃದ್ಧಿಯ ವಾಹಕಗಳಾಗಬೇಕೆ ಹೊರತು ಜೀವಹಾನಿಯ ಮಾಧ್ಯಮಗಳಲ್ಲ ಎಂಬ ವಾಸ್ತವವನ್ನು ಸರ್ಕಾರ ಮತ್ತು ಜನಸಾಮಾನ್ಯರು ಮನಗಾಣಬೇಕಿದೆ. ಅಪಘಾತಗಳು ಮತ್ತು ಜೀವಹಾನಿ ತಗ್ಗಬೇಕಿದೆ.