ನ್ಯೂಸ್

ಮ್ಯೂಚುವಲ್ ಫಂಡ್​ಗಳಲ್ಲಿ ಹೆಚ್ಚಿದ ಆಸಕ್ತಿ; ಏಪ್ರಿಲ್, ಮೇ ತಿಂಗಳಲ್ಲಿ 81 ಲಕ್ಷ ಅಧಿಕ ಹೊಸ ಹೂಡಿಕೆದಾರರು

ಮೋಹನ್​ ಶೆಟ್ಟಿ

ಮುಂಬೈ: ಮ್ಯೂಚುವಲ್ ಫಂಡ್ ಕ್ಷೇತ್ರ ಪ್ರಸಕ್ತ ಹಣಕಾಸು ವರ್ಷದ (2024-25) ಮೊದಲ ಎರಡು ತಿಂಗಳಲ್ಲೇ (ಏಪ್ರಿಲ್ ಮತ್ತು ಮೇ) 81 ಲಕ್ಷಕ್ಕೂ ಅಧಿಕ ಖಾತೆದಾರರನ್ನು ಹೊಂದಿದೆ. ನಿಶ್ಚಿತ ಠೇವಣಿ ಯೋಜನೆ ಬಗ್ಗೆ ಬದಲಾಗುತ್ತಿರುವ ಧೋರಣೆ, ಆದಾಯದ ಸ್ತರದಲ್ಲಿ ವೃದ್ಧಿ ಮತ್ತು ವಿತ್ತ ಮಾರುಕಟ್ಟೆಗೆ ಸರಳ ಪ್ರವೇಶದ ಅವಕಾಶಗಳು ಹೊಸ ಹೂಡಿಕೆದಾರರ ಸಂಖ್ಯೆಯನ್ನು ವೃದ್ಧಿಸುವಲ್ಲಿ ಕೊಡುಗೆ ನೀಡಿವೆ. ಅಲ್ಲದೆ, ಹೂಡಿಕೆದಾರರಿಗೆ ದೊರೆಯುತ್ತಿರುವ ನಿರಂತರ ಮಾಹಿತಿ, ಆರ್ಥಿಕ ಸಾಕ್ಷರತೆ ಪ್ರಮಾಣ ಹೆಚ್ಚಳ ಮತ್ತು ಮ್ಯೂಚುವಲ್ ಫಂಡ್​ಗಳ ಬಗ್ಗೆ ಸೆಲೆಬ್ರಿಟಿಗಳು ಜಾಗೃತಿ ಮೂಡಿಸುತ್ತಿರುವುದು ಕೂಡ ಈ ಕ್ಷೇತ್ರದ ವಿಸ್ತಾರಕ್ಕೆ ಪೂರಕವಾಗಿ ಪರಿಣಮಿಸಿದೆ ಎಂಬ ಅಭಿಪ್ರಾಯ ಮಾರುಕಟ್ಟೆ ತಜ್ಞರದ್ದು.

ಬೆಲೆಯೇರಿಕೆಯನ್ನು ಸೋಲಿಸುವ ಮತ್ತು ಸಂಪತ್ತು ಸೃಜಿಸುವ ಸುಲಭ ಮತ್ತು ಸುರಕ್ಷಿತ ಆಯ್ಕೆಯಾಗಿ ಮ್ಯೂಚುವಲ್ ಫಂಡ್ ಅನ್ನು ಪರಿಗಣಿಸಲಾಗುತ್ತಿದ್ದು. ಮಧ್ಯಮ ವರ್ಗ ಮತ್ತು ಮೇಲ್ಮಧ್ಯಮ ವರ್ಗದ ಜನರು ಹೆಚ್ಚಾಗಿ ಹೂಡಿಕೆಗಳಲ್ಲಿ ಆಸಕ್ತಿ ತೋರುತ್ತಿದ್ದಾರೆ. 2024ರ ಮಾರ್ಚ್ ಅಂತ್ಯದಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆದಾರರ ಸಂಖ್ಯೆ 17.78 ಕೋಟಿ ಇತ್ತು. ಶೇಕಡ 4.6ರಷ್ಟು ಏರಿಕೆಯೊಂದಿಗೆ ಇದು ಈ ವರ್ಷದ ಮೇ ತಿಂಗಳಲ್ಲಿ 18.6 ಕೋಟಿಗೆ (81 ಲಕ್ಷ ಹೆಚ್ಚಳ) ತಲುಪಿದೆ ಎಂದು ಅಸೋಸಿಯೇಷನ್ ಆಫ್ ಮ್ಯೂಚುವಲ್ ಫಂಡ್ಸ್ ಇನ್ ಇಂಡಿಯಾ (ಎಎಂಎಫ್​ಐ) ತಿಳಿಸಿದೆ.

ಎಸಿಗಳಿಗೆ ಡಿಮ್ಯಾಂಡೋ ಡಿಮ್ಯಾಂಡು

ಈ ವರ್ಷ ಬೇಸಿಗೆ ಭೀಕರವಾಗಿದ್ದು, ಉತ್ತರ ಭಾರತದ ರಾಜ್ಯಗಳಲ್ಲಂತೂ ತಾಪಮಾನ 48ರಿಂದ 50 ಡಿಗ್ರಿ ಸೆಲ್ಸಿಯಸ್​ಗೆ ತಲುಪಿದೆ. ಉಷ್ಣಾಘಾತಕ್ಕೆ ಜನರು ತತ್ತರಿಸಿ ಹೋಗಿದ್ದು, ಅನಿವಾರ್ಯವಾಗಿ ಏರ್ ಕಂಡಿಷನರ್ (ಎಸಿ)ಗಳ ಮೊರೆ ಹೋಗುತ್ತಿದ್ದಾರೆ. ಈ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ದಾಖಲೆ ಪ್ರಮಾಣದಲ್ಲಿ ಎಸಿಗಳು ಮಾರಾಟವಾಗಿವೆ.

ರೂಮ್ ಏರ್ ಕಂಡಿಷನರ್ಸ್​ಗೆ (ಆರ್​ಎಸಿ) ಬೇಡಿಕೆ ಮುಂದಿನ ದಿನಗಳಲ್ಲಿಯೂ ಹೆಚ್ಚಲಿದ್ದು, 2029ರ ಆರ್ಥಿಕ ವರ್ಷದ ಹೊತ್ತಿಗೆ ಆರ್​ಎಸಿ ಮಾರುಕಟ್ಟೆ 50 ಸಾವಿರ ಕೋಟಿ ರೂ.ಗೆ ತಲುಪಲಿದೆ ಎಂದು ಟಾಟಾ ಗ್ರೂಪ್​ನ ವೋಲ್ಟಾಸ್ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ವೋಲ್ಟಾಸ್ 2023-24ರಲ್ಲಿ 20 ಲಕ್ಷ ಎಸಿಗಳನ್ನು ಮಾರಾಟ ಮಾಡಿದೆ. ಅದರಲ್ಲೂ, 2024ರ ಜನವರಿ 1ರಿಂದ ಏಪ್ರಿಲ್ 20ರವರೆಗೆ 110 ದಿನಗಳಲ್ಲೇ 10 ಲಕ್ಷ ಎಸಿ ಯೂನಿಟ್ ಮಾರಾಟ ಮಾಡಿದೆ.

ವರ್ಲ್ಡ್ ಎನಿರ್ಜಿ ಔಟ್​ಲುಕ್ ವರದಿ ಪ್ರಕಾರ, ಭಾರತದ ಪ್ರತಿ 100ರಲ್ಲಿ 24 ಕುಟುಂಬಗಳು ಈಗ ಆರ್​ಎಸಿ ಹೊಂದಿವೆ. ಎಸಿ ಬಳಸುವವರ ಸಂಖ್ಯೆ ಕಳೆದ 13 ವರ್ಷಗಳಲ್ಲಿ ಮೂರು ಪಟ್ಟು ಏರಿಕೆಯಾಗಿದೆ. ಆದರೆ, ಮಾರುಕಟ್ಟೆಯಲ್ಲಿ 3 ಸ್ಟಾರ್ ಮತ್ತು 5 ಸ್ಟಾರ್​ನಂಥ ಎನರ್ಜಿ ಸೇವಿಂಗ್ ಎಸಿಗಳ ಕೊರತೆ ಕಂಡುಬರುತ್ತಿದೆ ಎಂದು ವರದಿಯಲ್ಲಿ ವಿವರಿಸಿದೆ. ಮುಂದಿನ ದಿನಗಳಲ್ಲಿ ಎಸಿಯ ಬೆಲೆ ಇನ್ನಷ್ಟು ಹೆಚ್ಚಿದರೂ ಅಚ್ಚರಿ ಇಲ್ಲ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಪಾಕ್​ನಲ್ಲಿ ಪೆಟ್ರೋಲ್ ಬೆಲೆ ಕಡಿತ

ಇಸ್ಲಾಮಾಬಾದ್: ನಗದು ಕೊರತೆಯಿರುವ ಪಾಕಿಸ್ತಾನದಲ್ಲಿ ಹಣದುಬ್ಬರದಿಂದ ಬಳಲುತ್ತಿರುವ ಜನಸಾಮಾನ್ಯರಿಗೆ ಒಂದು ಪ್ರಮುಖ ಪರಿಹಾರವಾಗಿ, ಸರ್ಕಾರವು ಪೆಟ್ರೋಲ್ ಮತ್ತು ಹೈ-ಸ್ಪೀಡ್ ಡೀಸೆಲ್ (ಎಚ್​ಎಸ್​ಡಿ) ಬೆಲೆಗಳನ್ನು ಕ್ರಮವಾಗಿ ಲೀಟರ್​ಗೆ 10.20 ರೂ. ಮತ್ತು 2.33 ರೂ. ಕಡಿತಗೊಳಿಸಿದೆ. ಶನಿವಾರದಿಂದ ಜಾರಿಗೆ ಬಂದಿರುವ ಈ ದರ ಕಡಿತವು ಪೆಟ್ರೋಲ್ ಬೆಲೆಯನ್ನು ಲೀಟರ್​ಗೆ 258.16 ರೂ.ಗೆ ತಂದಿದ್ದರೆ, ಎಚ್​ಎಸ್​ಡಿ ಬೆಲೆಯು ಲೀಟರ್​ಗೆ 267.89 ರೂ. ಆಗಲಿದೆ ಎಂದು ಪ್ರಧಾನಮಂತ್ರಿ ಕಚೇರಿ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಸಾಮಾನ್ಯವಾಗಿ ಪ್ರತಿ 15 ದಿನಗಳಿಗೊಮ್ಮೆ ಇಂಧನ ಬೆಲೆಗಳನ್ನು ಪರಿಶೀಲಿಸುವ ಹಣಕಾಸು ವಿಭಾಗವು ಇತ್ತೀಚಿನ ಬೆಲೆ ಕಡಿತಕ್ಕೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಹೊಸ ಬೆಲೆಗಳು ಮುಂದಿನ ಹದಿನೈದು ದಿನಗಳವರೆಗೆ ಅನ್ವಯಿಸುತ್ತವೆ ಎಂದು ಹೇಳಿದೆ.

ಆಕಸ್ಮಿಕ ಲಾಭದ ಮೇಲಿನ ತೆರಿಗೆ ಇಳಿಕೆ

ನವದೆಹಲಿ: ಕೇಂದ್ರ ಸರ್ಕಾರವು ದೇಶದಲ್ಲಿ ಉತ್ಪಾದನೆಯಾಗುವ ಕಚ್ಚಾ ತೈಲದ ಮೇಲಿನ ಆಕಸ್ಮಿಕ ಲಾಭ ತೆರಿಗೆಯನ್ನು (ವಿಂಡ್ ಫಾಲ್) ಪ್ರತಿ ಟನ್​ಗೆ 5,200 ರೂ.ನಿಂದ 3,250 ರೂ.ಗೆ ಇಳಿಸಿದೆ. ಆದರೆ ರಫ್ತು ಮಾಡುವ ಡೀಸೆಲ್, ಪೆಟ್ರೋಲ್ ಮತ್ತು ವಿಮಾನ ಇಂಧನದ (ಎಟಿಎಫ್) ಮೇಲೆ ಈ ಸುಂಕ ಏರಿಕೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಹೊಸ ದರಗಳು ಶನಿವಾರದಿಂದ ಜಾರಿಗೆ ಬಂದಿವೆ. ಇದಕ್ಕೂ ಮುನ್ನ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ ಜೂನ್ 1ರಂದು ಆಕಸ್ಮಿಕ ಲಾಭ ತೆರಿಗೆಯನ್ನು ಕಡಿತಗೊಳಿಸಿತ್ತು. ಈ ಅವಧಿಯಲ್ಲಿ ಕಚ್ಚಾ ತೈಲದ ಮೇಲಿನ ಪರೋಕ್ಷ ತೆರಿಗೆಯನ್ನು 5,700 ರೂ.ನಿಂದ 5,200 ರೂ.ಗೆ ಇಳಿಸಲಾಗಿತ್ತು.

ಟಿಸಿಎಸ್​ಗೆ 1,622 ಕೋಟಿ ರೂ. ದಂಡ

ಟಾಟಾ ಗ್ರೂಪ್​ನ ಮಾಹಿತಿ-ತಂತ್ರಜ್ಞಾನ (ಐಟಿ) ಕಂಪನಿ ಟಾಟಾ ಕನ್ಸಲ್ಟಿನ್ಸಿ ಸರ್ವಿಸಸ್ (ಟಿಸಿಎಸ್) ಮೇಲೆ ಅಮೆರಿಕದ ಜಿಲ್ಲಾ ನ್ಯಾಯಾಲಯ 194.2 ಮಿಲಿಯನ್ ಡಾಲರ್ (ಸುಮಾರು 1,622 ಕೋಟಿ ರೂ.) ದಂಡ ವಿಧಿಸಿದೆ. ವ್ಯಾಪಾರ ಹಕ್ಕುಗಳನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಟೆಕ್ಸಾಸ್​ನ ಉತ್ತರ ಜಿಲ್ಲೆಯ ಯುನೈಟೆಡ್ ಸ್ಟೇಟ್ಸ್ ಡಿಸ್ಟ್ರಿಕ್ಟ್ ಕೋರ್ಟ್ ಈ ದಂಡವನ್ನು ವಿಧಿಸಿದೆ ಎಂದು ಟಿಸಿಎಸ್ ಕಂಪನಿ ಸೆಬಿಗೆ ಮಾಹಿತಿ ನೀಡಿದ್ದು, ನ್ಯಾಯಾಲಯದ ಆದೇಶವನ್ನು ಲಗತ್ತಿಸಿದೆ. ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ. ಈ ಬೆಳವಣಿಗೆಯು ತನ್ನ ಹಣಕಾಸು ಮತ್ತು ಕಾರ್ಯಾಚರಣೆ ಮೇಲೆ ಯಾವುದೇ ಮಹತ್ವದ ಪರಿಣಾಮ ಬೀರುವುದಿಲ್ಲ ಎಂದೂ ಟಿಸಿಎಸ್ ಹೇಳಿದೆ. ಮಾರುಕಟ್ಟೆ ಬಂಡವಾಳದಲ್ಲಿ ಟಿಸಿಎಸ್ ಭಾರತದ ಎರಡನೇ ಅತಿದೊಡ್ಡ ಕಂಪನಿಯಾಗಿದ್ದು (13.86 ಲಕ್ಷ ಕೋಟಿ ರೂಪಾಯಿ), ರಿಲಯನ್ಸ್ ಇಂಡಸ್ಟೀಸ್ ಮೊದಲ ಸ್ಥಾನದಲ್ಲಿದೆ (19.98 ಲಕ್ಷ ಕೋಟಿ ರೂ.).

ಆರ್​ಬಿಐಗೆ ರಿಸ್ಕ್ ಮ್ಯಾನೇಜರ್ ಪ್ರಶಸ್ತಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2024ನೇ ಸಾಲಿನ ‘ರಿಸ್ಕ್ ಮ್ಯಾನೇಜರ್’ ಪ್ರಶಸ್ತಿಗೆ ಭಾಜನವಾಗಿದೆ. ಕಾರ್ಯಾಚರಣೆಯಲ್ಲಿ ಅಪಾಯದ ನಿರ್ವಹಣೆ ಮತ್ತು ಜಾಗೃತಿಯಲ್ಲಿ ಕೈಗೊಂಡ ಉಪಕ್ರಮಗಳನ್ನು ಪರಿಗಣಿಸಿ ಲಂಡನ್ ಮೂಲದ ಪ್ರಕಾಶನ ಸಂಸ್ಥೆ ಸೆಂಟ್ರಲ್ ಬ್ಯಾಂಕಿಂಗ್ ಈ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಆರ್​ಬಿಐ ಭಾನುವಾರ ‘ಎಕ್ಸ್’ ಪೋಸ್ಟ್​ನಲ್ಲಿ ತಿಳಿಸಿದೆ.