ನ್ಯೂಸ್

ಯುವಜನರಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಳ: ದೇಶಾದ್ಯಂತ ಮಾರ್ಗಸೂಚಿ ಹೊರಡಿಸಿದ Supreme Court

Supreme Court : ದೇಶದಲ್ಲಿ ಯುವಜನರು ವಿವಿಧ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ''ವ್ಯವಸ್ಥಿತ ವೈಫಲ್ಯ" ಎಂದು ಸುಪ್ರೀಂಕೋರ್ಟ್​ ಹೇಳಿದೆ. ಇದನ್ನು ''ನಿರ್ಲಕ್ಷಿಸಲಾಗುವುದಿಲ್ಲ'' ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಹೇಳಿದೆ. ಈ ಹಿನ್ನೆಲೆ ದೇಶದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಮಾನಸಿಕ ಸುರಕ್ಷತೆ ಮತ್ತು ನಿಯಂತ್ರಕ ಮೇಲ್ವಿಚಾರಣೆಯನ್ನು ಕಡ್ಡಾಯಗೊಳಿಸುವ ವ್ಯಾಪಕ ರಾಷ್ಟ್ರೀಯ ಮಾರ್ಗಸೂಚಿಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಹೊರಡಿಸಿದೆ.

ಶಾಲೆ- ಕಾಲೇಜುಗಳು, ವಿಶ್ವವಿದ್ಯಾಲಯಗಳು, ಖಾಸಗಿ ತರಬೇತಿ ಕೇಂದ್ರಗಳು, ತರಬೇತಿ ಅಕಾಡೆಮಿಗಳು ಮತ್ತು ಹಾಸ್ಟೆಲ್‌ಗಳಿಗೆ ಈ ಮಾರ್ಗಸೂಚಿ ಅನ್ವಯಿಸುತ್ತದೆ. ಸಂವಿಧಾನದ 32 ಮತ್ತು 141 ನೇ ವಿಧಿಗಳಿಂದ ಅಧಿಕಾರವನ್ನು ಪಡೆದು, ನ್ಯಾಯಾಲಯದ ಮಾರ್ಗಸೂಚಿಗಳನ್ನು ಔಪಚಾರಿಕ ಶಾಸನ ಜಾರಿಗೆ ಬರುವವರೆಗೆ ನೆಲದ ಕಾನೂನೆಂದು ಪರಿಗಣಿಸಬೇಕು ಎಂದು ಕೋರ್ಟ್​ ಹೇಳಿದೆ.

ಎಲ್ಲಾ ಶಿಕ್ಷಣ ಸಂಸ್ಥೆಗಳು ಮಾನಸಿಕ ಆರೋಗ್ಯ ಸೇವೆಗಳು, ಸ್ಥಳೀಯ ಆಸ್ಪತ್ರೆಗಳು ಮತ್ತು ಆತ್ಮಹತ್ಯೆ ತಡೆಗಟ್ಟುವ ಸಹಾಯವಾಣಿಗಳಿಗೆ ತಕ್ಷಣದ ಉಲ್ಲೇಖಕ್ಕಾಗಿ ಲಿಖಿತ ಶಿಷ್ಟಾಚಾರಗಳನ್ನು ಸ್ಥಾಪಿಸಬೇಕು ಎಂದು ಪೀಠ ಹೇಳಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ದತ್ತಾಂಶದ ಪ್ರಕಾರ, 2022ರಲ್ಲಿ ಭಾರತದಲ್ಲಿ 170,924 ಆತ್ಮಹತ್ಯೆಗಳು ದಾಖಲಾಗಿವೆ ಎಂದು ಕೋರ್ಟ್​ ಉಲ್ಲೇಖಿಸಿದೆ. ಅದರಲ್ಲಿ 7.6% ಅಂದರೆ ಸರಿಸುಮಾರು 13,044 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇವುಗಳಲ್ಲಿ, 2,200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ವಿಫಲವಾದ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೋರ್ಟ್​ ಕಳವಳ ವ್ಯಕ್ತಪಡಿಸಿದೆ.

ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಗೆ (NEET) ತಯಾರಿ ನಡೆಸುತ್ತಿದ್ದಾಗ 2023ರ ಜುಲೈನಲ್ಲಿ ವಿಶಾಖಪಟ್ಟಣಂನ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣ ವಿಚಾರಣೆ ಮಾಡುವಾಗ ಮಾರ್ಗಸೂಚಿಗಳನ್ನು ಕೋರ್ಟ್​ ಹೊರಡಿಸಿದೆ.(ಏಜೆನ್ಸೀಸ್​)