ನ್ಯೂಸ್

ಸಣ್ಣ ನೀರಾವರಿ ಕೊಡುಗೆ ಏರಿಕೆ, ಸಾಮರ್ಥ್ಯ ಇಳಿಕೆ: ಕರ್ನಾಟಕದ ಸ್ಥಿತಿಗತಿ ಬಹಿರಂಗಪಡಿಸಿದ 6ನೇ ಗಣತಿ ವರದಿ; ಖಾಸಗಿ ಒಡೆತನದ್ದೇ ಪಾರಮ್ಯ

Webdesk - Ravikanth

| ಮೃತ್ಯುಂಜಯ ಕಪಗಲ್ ಬೆಂಗಳೂರು

ಜಮೀನಿಗೆ ನೀರುಣಿಸುವ ಜತೆಗೆ ಶುದ್ಧ ಕುಡಿಯುವ ನೀರು, ಅಂತರ್ಜಲ ವೃದ್ಧಿಯಲ್ಲಿ ಸಣ್ಣ ನೀರಾವರಿ ಯೋಜನೆಗಳ ಕೊಡುಗೆ ಗಮನಾರ್ಹವಾಗಿದೆ. ರಾಜ್ಯದಲ್ಲಿ ಈ ಯೋಜನೆಗಳು ಏರಿಕೆ ಕಂಡರೂ ಸಹಜ ಸಾಮರ್ಥ್ಯ ಇಳಿಕೆಯಾಗಿದೆ ಎಂಬ ಅಂಶ ‘ವರಿ’ಗೆ ಕಾರಣವಾಗಿದೆ.

ಸಣ್ಣ ನೀರಾವರಿ ಯೋಜನೆಗಳ 6ನೇ ಗಣತಿ ವರದಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಕರ್ನಾಟಕದ ಸಣ್ಣ ನೀರಾವರಿ ಯೋಜನೆಗಳ ಸ್ಥಿತಿಗತಿ ಬಹಿರಂಗಪಡಿಸಿದೆ. ಹಿಂದಿನ ಗಣತಿ ವರದಿಗೆ ತುಲನೆ ಮಾಡಿದರೆ ರಾಜ್ಯದಲ್ಲಿ ಒಟ್ಟಾರೆ ಸಣ್ಣ ನೀರಾವರಿ ಯೋಜನೆಗಳ ಸಂಖ್ಯೆ ಶೇ.5 ಹೆಚ್ಚಳವಾಗಿವೆ. ಆದರೆ ನೀರಾವರಿ ಸಾಮರ್ಥ್ಯ 31.53 ಲಕ್ಷ ಹೆಕ್ಟೇರ್​ಗಳಿಂದ 26.81 ಲಕ್ಷ ಹೆಕ್ಟೇರ್​ಗೆ ಇಳಿಕೆಯಾಗಿದೆ ಎಂಬ ಅಂಶ ಕಳವಳಕಾರಿಯಾಗಿದೆ.

ದೇಶದಲ್ಲಿ ಒಟ್ಟಾರೆ 23.14 ದಶಲಕ್ಷ ಸಣ್ಣ ನೀರಾವರಿ ಯೋಜನೆಗಳಿವೆ. ಈ ಪೈಕಿ 21.93 ದಶಲಕ್ಷ ಅಂತರ್ಜಲ, 1.21 ಲಕ್ಷ ಮೇಲ್ಮೈ ಸಣ್ಣ ನೀರಾವರಿ ಯೋಜನೆಗಳಾಗಿವೆ.

5ನೇ ಗಣತಿ (2013-14) ವರದಿಗೆ ತುಲನೆ ಮಾಡಿದರೆ, 6ನೇ ಗಣತಿ ವರದಿ (2017-18) ಪ್ರಕಾರ 1.42 ದಶಲಕ್ಷ ಯೋಜನೆಗಳು ಹೆಚ್ಚಳವಾಗಿವೆ. ಅಂತರ್ಜಲ ಶೇ.6.9 ಹಾಗೂ ಮೇಲ್ಮೈ ನೀರಾವರಿ ಶೇ.1.2 ವೃದ್ಧಿಯಾಗಿದೆ ಎಂದು ಉಲ್ಲೇಖಿಸಲಾಗಿದೆ.

ಖಾಸಗಿ ಒಡೆತನದ್ದೇ ಪಾರಮ್ಯ: ಹಿಂದಿನ ಗಣತಿ ವರದಿ ಪ್ರಕಾರ ರಾಜ್ಯದ 13.53 ಲಕ್ಷ ಸಣ್ಣ ನೀರಾವರಿ ಯೋಜನೆಗಳಿಗೆ ಹೋಲಿಸಿದ್ರೆ 6ನೇ ವರದಿಯಂತೆ 14.05 ಲಕ್ಷಕ್ಕೆ ಏರಿಕೆ (ಶೇ.5)ಯಾಗಿದೆ. ಈ ಪೈಕಿ 12.77 ಲಕ್ಷ ಅಂತರ್ಜಲ, 1.27 ಲಕ್ಷ ಮೇಲ್ಮೈ ನೀರಾವರಿ ಯೋಜನೆಗಳಾಗಿವೆ. ಒಟ್ಟಾರೆ ಯೋಜನೆಗಳಲ್ಲಿ 6.96 ಮಧ್ಯಮ ಕೊಳವೆ ಬಾವಿ, 3.30 ಲಕ್ಷ ಆಳ ಕೊಳವೆ ಬಾವಿ, 1.34 ಲಕ್ಷ ತೆರೆದ ಕೊಳವೆ ಬಾವಿ ಯೋಜನೆಗಳಿವೆ. ಅಲ್ಲದೆ, ಸಣ್ಣ ನೀರಾವರಿ ಯೋಜನೆಗಳಲ್ಲಿ ಖಾಸಗಿ ಒಡೆತನವೇ ಪಾರಮ್ಯ ಮೆರೆದಿದೆ. 13.44 ಲಕ್ಷ ಖಾಸಗಿ ಮಾಲೀಕತ್ವ, 48,705 ರಾಜ್ಯ ಸರ್ಕಾರದ ಯೋಜನೆಗಳಾಗಿವೆ. 11,695 ಯೋಜನೆಗಳ ರೈತರ ಗುಂಪಿನ ಒಡೆತನವಿದೆ.

ರಾಜ್ಯಕ್ಕೆ 2ನೇ ಸ್ಥಾನ: ಕೇಂದ್ರದ ಜಲಶಕ್ತಿ ಸಚಿವಾಲಯ, ಜಲಸಂಪನ್ಮೂಲಗಳ ಇಲಾಖೆ, ನದಿ ಅಭಿವೃದ್ಧಿ, ಗಂಗಾ ಪುನರುಜ್ಜೀವನ ಮತ್ತು ಸಣ್ಣ ನೀರಾವರಿ (ಸಾಂಖ್ಯಿಕ) ವಿಭಾಗವು 6ನೇ ಗಣತಿಯ 2ನೇ ಆವೃತ್ತಿ ವರದಿ ಪ್ರಕಾರ ರಾಜ್ಯ ಸಮಾಧಾನಪಡುವ ಅಂಶವೂ ಇದೆ. ಭೂಮೇಲ್ಮೈ ಆಧಾರಿತ ಸಣ್ಣ ನೀರಾವರಿ ಯೋಜನೆಗಳ ಸಂಖ್ಯೆ ಪ್ರಕಾರ ಮಹಾರಾಷ್ಟ್ರ ಮೊದಲ, ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ನಂತರದಲ್ಲಿ ತೆಲಂಗಾಣ, ಒಡಿಶಾ, ಜಾರ್ಖಂಡ್ ರಾಜ್ಯಗಳಿವೆ. ಉತ್ತರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಅಂತರ್ಜಲ ಆಧಾರಿತ ಯೋಜನೆಗಳು ಗರಿಷ್ಠ ಪ್ರಮಾಣದಲ್ಲಿವೆ. ಅಂತರ್ಜಲ ಹಾಗೂ ಭೂಮೇಲ್ಮೈ ಸಣ್ಣ ನೀರಾವರಿ ಯೋಜನೆಗಳ ಒಟ್ಟು ಸಂಖ್ಯೆ ಪ್ರಕಾರ ಉತ್ತರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ತಮಿಳುನಾಡು ಹಾಗೂ ತೆಲಂಗಾಣ ಮುಂದಿವೆ.
ಪುರಾತನ ಕೆರೆಗಳು, ನದಿಮೂಲವಿಲ್ಲದ ಜಿಲ್ಲೆಗಳಲ್ಲಿ ಕೆರೆಗಳ ಭರ್ತಿ, ನದಿಗಳು ಅವಲಂಬಿತ ಜಿಲ್ಲೆಗಳಿಗೆ ಭೂಮೇಲ್ಮೈ ಏತ ನೀರಾವರಿಗೆ ಆದ್ಯತೆ ನೀಡಲಾಗುವುದು. ಆ ಮೂಲಕ ಅಂತರ್ಜಲ ವೃದ್ಧಿ ಹಾಗೂ ನೀರಾವರಿ ಸಾಮರ್ಥ್ಯ ಪುನಶ್ಚೇತನಗೊಳಿಸಲು ಸರ್ಕಾರ ಯೋಚಿಸಿದೆ. | ಎನ್.ಎಸ್.ಬೋಸರಾಜು ಸಣ್ಣ ನೀರಾವರಿ ಸಚಿವ