| ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಈ ಬಾರಿ ಅತಿವೃಷ್ಟಿಯಿಂದ ಬೆಳೆಹಾನಿಯಾಗಿ ಸಂಕಷ್ಟಕ್ಕೆ ಒಳಗಾಗಿದ್ದ ರೈತರು, ಹಿಂಗಾರು ಬಿತ್ತನೆ ಬೀಜ ದರ, ಕಾರ್ವಿುಕರು, ಯಂತ್ರೋಪಕರಣಗಳ ಬಾಡಿಗೆ ಹೆಚ್ಚಳದಿಂದ ಮತ್ತಷ್ಟು ತತ್ತರಿಸಿದ್ದಾರೆ. ಅಲ್ಲದೆ ಕೃಷಿ ಚಟುವಟಿಕೆ, ಗೊಬ್ಬರ, ಕಾರ್ವಿುಕರ ಕೂಲಿಗಾಗಿ ಸಾಲದ ಮೊರೆ ಹೋಗಿದ್ದಾರೆ.
ಮುಂಗಾರು ಹಂಗಾಮಿನಲ್ಲಿ (ಆಗಸ್ಟ್ನಿಂದ ಅಕ್ಟೋಬರ್ವರೆಗೆ) ಸುರಿದ ಧಾರಾಕಾರ ಮಳೆಯಿಂದ ರಾಜ್ಯದಲ್ಲಿ ಗೋವಿನಜೋಳ, ಶೇಂಗಾ, ಹೆಸರು, ಸಜ್ಜೆ, ಉದ್ದು, ಸೂರ್ಯಕಾಂತಿ, ಹತ್ತಿ, ಕಬ್ಬು, ದ್ರಾಕ್ಷಿ, ಬಾಳೆ, ತರಕಾರಿ, ಭತ್ತ, ಈರುಳ್ಳಿ ಸೇರಿ ಒಟ್ಟು 9,90,957 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದೆ. ಇದರಿಂದಾಗಿ ಆದಾಯ ಇಲ್ಲದೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಈಗಾಗಲೇ ಹಿಂಗಾರಿನಲ್ಲಿ ಬಿತ್ತನೆಗೆ ಸಜ್ಜಾಗುತ್ತಿರುವ ರೈತರಿಗೆ ಜೋಳ, ಕಡಲೆ, ಗೋಧಿ ಇನ್ನಿತರ ಬಿತ್ತನೆ ಬೀಜಗಳ ದರದಲ್ಲಿ ಶೇ. 22 ಹೆಚ್ಚಳವಾಗಿದೆ. ಕಾರ್ವಿುಕರ ಕೂಲಿ 250 ರೂ.ಗಳಿಂದ 350-400 ರೂ.ವರೆಗೆ ಏರಿಕೆಯಾಗಿದೆ. ಬಿತ್ತನೆ ಮಾಡಲು ಯಂತ್ರೋಪಕರಣಗಳ ಬಾಡಿಗೆ ಗಂಟೆಗೆ 750 ರಿಂದ 1,000 ರೂ.ಗೆ ಏರಿಕೆಯಾಗಿರುವುದರಿಂದ ಇನ್ನಷ್ಟು ಹೊರೆಯಾಗಿ ಪರಿಣಮಿಸಿದೆ.
ಅತಿವೃಷ್ಟಿಯಿಂದಾಗಿ ಮುಂಗಾರಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ನಾಶವಾಗಿವೆ. ಪರಿಣಾಮ ಬಿತ್ತನೆಗಾಗಿ ಮಾಡಿದ ಸಾವಿರಾರು ರೂಪಾಯಿ ಸಾಲ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಇದೀಗ ಹಿಂಗಾರು ಹಂಗಾಮಿನ ಬಿತ್ತನೆಗೆ ಮತ್ತೆ ಸಾಲ ಮಾಡುವ ಪರಿಸ್ಥಿತಿ ಎದುರಾಗಿದೆ. ಸರ್ಕಾರವು ಉಚಿತವಾಗಿ ಬೀಜ, ಗೊಬ್ಬರ ನೀಡಲಿಲ್ಲ. ಮತ್ತೊಂದೆಡೆ ಕಾರ್ವಿುಕರ ಕೂಲಿ ಏರಿಕೆಯಾಗಿದೆ. ಒಂದು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಬೇಕಾದರೆ ಕನಿಷ್ಠ 12ರಿಂದ 20 ಸಾವಿರ ರೂ.ವರೆಗೆ ಖರ್ಚು ಮಾಡಬೇಕು. ಧಾರಾಕಾರ ಮಳೆಯಿಂದ ಬಿತ್ತನೆ ಪ್ರದೇಶ ಕಳೆಯಿಂದ ತುಂಬಿದ್ದು ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಹಿಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೆ ಬಿತ್ತನೆ ಬೀಜ, ರಸಗೊಬ್ಬರ ವಿತರಣೆ ಮಾಡಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ ಬೀಜದ ಕೊರತೆ ಇಲ್ಲ. | ಶಿವನಗೌಡ ಪಾಟೀಲ ಕೃಷಿ ಇಲಾಖೆ ಜಂಟಿ ನಿರ್ದೇಶಕ