ಹೂವಿನಹಡಗಲಿಯಲ್ಲಿ ಮಳೆಯ ನಡುವೆಯೇ ಶವಸಂಸ್ಕಾರಕ್ಕೆ ಸಂಬಂಧಿಕರು ಶುಕ್ರವಾರ ತೆರಳುತ್ತಿರುವುದು. 
ನ್ಯೂಸ್

ಮಳೆಯಲ್ಲಿಯೇ ಶವಸಂಸ್ಕಾರಕ್ಕೆ ತೆರಳಿದ ಸಂಬಂಧಿಕರು

ಹೂವಿನಹಡಗಲಿ: ತಾಲೂಕಿನಾದ್ಯಂತ ಗುರುವಾರ ಸಂಜೆ ಶುರುವಾದ ಮಳೆ ಶುಕ್ರವಾರ ಸಂಜೆಯವರೆಗೂ ಬಿಡುವು ಬಿಡದೆ ಸುರಿಯಿತು.
ಪಟ್ಟಣದ ರಿಂಗ್‌ರೋಡ್ ಪ್ರದೇಶದಲ್ಲಿ ವಾಸವಾಗಿದ್ದ ವೃದ್ಧರೊಬ್ಬರು ನಿಧನರಾದ ಕಾರಣ ಮಳೆಯಲ್ಲಿಯೇ ಅವರ ಪಾರ್ಥಿವ ಶವದೊಂದಿಗೆ ಸಂಬಂಧಿಕರು ಸ್ಮ್ಮಶಾನಕ್ಕೆ ತೆರಳುತ್ತಿರುವ ದೃಶ್ಯ ಕಂಡು ಬಂತು.

ತಾಲೂಕಿನ ಬಹುತೇಕ ಗ್ರಾಮಗಳಿಂದ ವಿದ್ಯಾಭ್ಯಾಸಕ್ಕೆಂದು ತಾಲೂಕು ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳು ಪಟ್ಟಣದ ಬಸ್‌ನಿಲ್ದಾಣದಿಂದ ಶಾಲಾ ಕಾಲೇಜುಗಳಿಗೆ ತೆರಳಲು ಪರದಾಡಿದರು.

ಪಟ್ಟಣದ ಪ್ರಮುಖ ವೃತ್ತಗಳ ರಸ್ತೆಯ ತಗ್ಗು ಪ್ರದೇಶದಲ್ಲಿ ನೀರು ತುಂಬಿಕೊಂಡ ಕಾರಣ ವಾಹನ ಸವಾರರು ಸಂಚರಿಸಲು ಪರದಾಡಿದರು. ಕಳೆದ ವಾರ ಮಳೆಯಾಗದ ಕಾರಣ ತಾಲೂಕಿನಲ್ಲಿ ಬಿತ್ತನೆ ಮಾಡಿದ್ದ ರೈತರು ಬೆಳೆಗಳಿಗೆ ನೀರಿಲ್ಲದೆ ಕಂಗಾಲಾಗಿದ್ದರು. ಎರಡು ದಿನಗಳ ಕಾಲ ನಿರಂತರವಾಗಿ ಸುರಿದ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಮಳೆಯಿಂದ ಇಟ್ಟಿಗಿ, ಹಿರೇಹಡಗಲಿ ಮತ್ತು ಹೂವಿನಹಡಗಲಿ ಹೋಬಳಿ ವ್ಯಾಪ್ತಿಯ ರೈತರಿಗೆ ಸಂತಸ ತಂದಿದೆ. ರಸ್ತೆ ಬದಿಯಲ್ಲಿ ಅಂಗಡಿಗಳನ್ನಿರಿಸಿದ್ದ ಮಾರಾಟಗಾರರು ತಾವು ಮಾರಾಟ ಮಾಡಲು ತಂದ ವಸ್ತುಗಳನ್ನು ಮಳೆಯಿಂದ ರಕ್ಷಿಸಿಕೊಳ್ಳಲು ತಡಪಾಲಗಳನ್ನು ಹಾಕಿದ ದೃಶ್ಯಗಳು ಕಂಡು ಬಂತು.