ನ್ಯೂಸ್

ಮುಂಬೈ ಆಸ್ಪತ್ರೆಯಲ್ಲಿ ಶವಗಳ ಪಕ್ಕದಲ್ಲೇ ಕರೊನಾ ಸೋಂಕಿತರಿಗೆ ಚಿಕಿತ್ಸೆ

ಮುಂಬೈ: ಇಲ್ಲಿನ ಸಿಯಾನ್​ ಆಸ್ಪತ್ರೆಯಲ್ಲಿ ಕರೊನಾ ಸೋಂಕಿನಿಂದ ಮೃತಪಟ್ಟವರ ದೇಹಗಳ ಪಕ್ಕದಲ್ಲೇ ಇತರ ಸೋಂಕಿತರಿಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದ ಆಘಾತಕಾರಿ ವಿಡಿಯೋ ಇದೀಗ ಬಹಿರಂಗವಾಗಿದೆ.

ಬೃಹನ್ಮುಂಬೈ ಮಹಾನಗರ ಪಾಲಿಕೆ ನಿರ್ವಹಣೆಯ ಸಿಯಾನ್​ ಆಸ್ಪತ್ರೆಯಲ್ಲಿ ಈ ದೃಶ್ಯ ಕಂಡುಬಂದಿದೆ. ಈ ದೃಶ್ಯವನ್ನು ಮೊಬೈಲ್​ಫೋನ್​ನಲ್ಲಿ ಚಿತ್ರೀಕರಿಸಿರುವವರ ಪ್ರಕಾರ, ಒಟ್ಟು 7 ಶವಗಳನ್ನು ಬಾಡಿಬ್ಯಾಗ್​ನಲ್ಲಿ ಕಟ್ಟಿ, ಅಂತ್ಯಸಂಸ್ಕಾರಕ್ಕಾಗಿ ಸಜ್ಜುಗೊಳಿಸಿ, ಹಾಸಿಗೆ ಮೇಲೆಯೇ ಬಿಡಲಾಗಿತ್ತು. ಇವುಗಳ ನಡುವೆಯೇ ಪಕ್ಕದ ಹಾಸಿಗೆಯಲ್ಲಿದ್ದ ಇತರ ಸೋಂಕಿತರಿಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದರು ಎನ್ನಲಾಗಿದೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿನ ಪ್ರತಿಪಕ್ಷ ಬಿಜೆಪಿಯ ಶಾಸಕ ನಿತೀಶ್​ ರಾಣೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು, ಇದೆಂಥ ಆಡಳಿತ... ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಯಾನ್​ ಆಸ್ಪತ್ರೆಯ ಡೀನ್​ ಪ್ರಮೋದ್​ ಇಂಗಾಳೆ, ಕರೊನಾ ಚಿಕಿತ್ಸೆ ಪಡೆಯುತ್ತಿದ್ದವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲು ಸಜ್ಜುಗೊಳಿಸಲಾಗಿತ್ತು. ಆದರೆ, ಶವಗಳನ್ನು ಕೊಂಡೊಯ್ಯಲು ಸಂಬಂಧಿಕರು ನಿರಾಕರಿಸಿದ್ದರಿಂದ ಅವುಗಳನ್ನು ಹಾಸಿಗೆ ಮೇಲೆ ಬಿಡಲಾಗಿತ್ತು. ಇದೀಗ ಶವಗಳನ್ನು ತೆರವುಗೊಳಿಸಲಾಗಿದೆ. ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಶವಗಳನ್ನು ಶವಾಗಾರಕ್ಕೆ ಸ್ಥಳಾಂತರಿಸಲು ವಿಳಂಬವಾದ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಆಸ್ಪತ್ರೆಯ ಶವಗಾರದಲ್ಲಿ 15 ಶವಗಳನ್ನು ಇರಿಸಲು ಸ್ಥಳಾವಕಾಶವಿದೆ. ಇವುಗಳಲ್ಲಿ 11 ಸ್ಥಾನಗಳು ಭರ್ತಿಯಾಗಿದ್ದವು. ಕೋವಿಡ್​ 19 ಬಿಟ್ಟು ಅನ್ಯಕಾರಣಗಳಿಗೆ ಸತ್ತವರ ಶವಗಳು ಅವಾಗಿದ್ದವು. ಅವುಗಳ ನಡುವೆ ಕರೊನಾ ಸೋಂಕಿತರ ಶವಗಳನ್ನು ಇರಿಸಿದರೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಶವಗಳನ್ನು ತೆರವುಗೊಳಿಸಲು ವಿಳಂಬವಾಯಿತು ಎಂದು ಹೇಳಿದ್ದಾರೆ.

ಶವಗಳನ್ನು ತೆರವುಗೊಳಿಸಲು ಮೃತರ ಸಂಬಂಧಿಕರ ಅನುಮತಿಯ ನಿರೀಕ್ಷೆಯಲ್ಲಿದ್ದಾಗ ಈ ವಿಡಿಯೋವನ್ನು ಚಿತ್ರೀಕರಿಸಿರುವ ಸಾಧ್ಯತೆ ಇದೆ ಎಂದು ಆಸ್ಪತ್ರೆಯ ಸಿಬ್ಬಂದಿ ಅಭಿಪ್ರಾಯಪಟ್ಟಿದ್ದಾರೆ.

ಶವವನ್ನು ಬಾಡಿಪ್ಯಾಕ್​ನಲ್ಲಿ ಪ್ಯಾಕ್​ ಮಾಡಿದ ಬಳಿಕ ಸೋಂಕು ಹರಡುವ ಸಾಧ್ಯತೆಗಳು ಇರುವುದಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಈ ಸ್ಪಷ್ಟನೆಯ ಬಳಿಕವೂ ಶವಗಳಿದ್ದ ಅಕ್ಕಪಕ್ಕದ ಹಾಸಿಗೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಆತಂಕ ದೂರವಾಗಿರಲಿಲ್ಲ ಎನ್ನಲಾಗಿದೆ.