ಟಾಟಾ 
ನ್ಯೂಸ್

ಒಂದು ತಿಂಗಳಲ್ಲಿ ಟಾಟಾ ಕಂಪನಿ ಷೇರು ಬೆಲೆ ರೂ. 497 ಕುಸಿತ: ದಿಗ್ಗಜ ಹೂಡಿಕೆದಾರ ಜುಂಜುನ್‌ವಾಲಾಗೆ ರೂ. 2300 ಕೋಟಿ ನಷ್ಟ

ಮುಂಬೈ: ಅನುಭವಿ ಷೇರು ಮಾರುಕಟ್ಟೆ ಹೂಡಿಕೆದಾರರಾದ ರೇಖಾ ಜುಂಜುನ್‌ವಾಲಾ ಅವರ ಪೋರ್ಟ್‌ಫೋಲಿಯೊದಲ್ಲಿ ಕಳೆದ ಕೆಲವು ದಿನಗಳಿಂದ ಮಾರಾಟದ ಒತ್ತಡಕ್ಕೆ ಸಿಲುಕಿರುವ ಹಲವು ಷೇರುಗಳಿವೆ. ಇಂತಹ ಒಂದು ಷೇರು ಟೈಟನ್ ಕಂಪನಿಯದ್ದಾಗಿದೆ.

ಟಾಟಾ ಗ್ರೂಪ್​ನ ಈ ಸ್ಟಾಕ್ ಬೆಲೆ ಕೇವಲ ಒಂದು ತಿಂಗಳಲ್ಲಿ ಅಂದಾಜು ರೂ. 497 ರಷ್ಟು ಕುಸಿದಿದೆ. ಒಂದು ತಿಂಗಳ ಅವಧಿಯಲ್ಲಿ, ಟೈಟಾನ್ ಕಂಪನಿಯ ಷೇರಿನ ಬೆಲೆಯು ಪ್ರತಿ ಷೇರಿಗೆ ಅಂದಾಜು ರೂ. 3749 ರಿಂದ ರೂ. 3252 ಕ್ಕೆ ಕುಸಿತ ಕಂಡಿದೆ.

ಜನವರಿ 2024 ರಂದು ಈ ಷೇರಿನ ಬೆಲೆ 3885 ರೂ. ತಲುಪಿತ್ತು. ಇದು ಈ ಷೇರಿನ 52 ವಾರಗಳ ಗರಿಷ್ಠ ಬೆಲೆಯಾಗಿದೆ.

ಈ ಷೇರು ಬೆಲೆ ಕುಸಿತದಿಂದಾಗಿ, ರೇಖಾ ಜುಂಜುನ್‌ವಾಲಾ ಅವರು ಒಂದು ತಿಂಗಳಲ್ಲಿ ರೂ. 2300 ಕೋಟಿಗೂ ಹೆಚ್ಚು ನಷ್ಟವನ್ನು ಅನುಭವಿಸಿದ್ದಾರೆ. ರೇಖಾ ಜುಂಜುನ್ವಾಲಾ ಅವರು ಟೈಟಾನ್ ಕಂಪನಿಯ 4,74,83,470 ಷೇರುಗಳನ್ನು ಹೊಂದಿದ್ದಾರೆ. ಟೈಟಾನ್‌ನಲ್ಲಿ ಜುಂಜುನ್‌ವಾಲಾ ಅವರ ಪಾಲು ಶೇಕಡಾ 5 ಕ್ಕಿಂತ ಹೆಚ್ಚು ಇದೆ.

ಮಾರ್ಚ್ 2024 ರ ತ್ರೈಮಾಸಿಕದಲ್ಲಿ ಷೇರುದಾರರ ಮಾದರಿಯ ಪ್ರಕಾರ ಎಲ್​ಐಟಿ ರೂ. 784 ಕೋಟಿ ನಷ್ಟವನ್ನು ಅನುಭವಿಸುತ್ತದೆ, 1,57,73,161 ಟೈಟಾನ್ ಷೇರುಗಳನ್ನು ಎಲ್​ಐಸಿ ಹೊಂದಿದೆ, ಇದು ಟಾಟಾ ಗ್ರೂಪ್ ಕಂಪನಿಯ ಒಟ್ಟು ಪಾವತಿಸಿದ ಬಂಡವಾಳದ ಶೇಕಡಾ 1.78 ಆಗಿದೆ. ಒಂದು ತಿಂಗಳಿನಲ್ಲಿ ಟೈಟಾನ್ ಷೇರಿನ ಬೆಲೆಯಲ್ಲಿ ಪ್ರತಿ ಷೇರಿಗೆ ರೂ. 497 ಕುಸಿದಿರುವುದರಿಂದ ಎಲ್‌ಐಸಿಯ ಒಟ್ಟು ಆಸ್ತಿಯಲ್ಲಿ ಅಂದಾಜು ರೂ. 784 ಕೋಟಿ ಇಳಿಕೆಯಾಗಿದೆ.

ಕಳೆದ ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಟೈಟಾನ್ ಕಂಪನಿಯ ಲಾಭವು ಶೇಕಡಾ 5 ರಷ್ಟು ಏರಿಕೆಯಾಗಿ 771 ಕೋಟಿ ರೂ. ಆಗಿತ್ತು. 2022-23ನೇ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯ ಲಾಭ 736 ಕೋಟಿ ರೂ. ಇತ್ತು. ಕಳೆದ ಹಣಕಾಸು ವರ್ಷದ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ಆದಾಯ 11,472 ಕೋಟಿ ರೂ.ಗೆ ಏರಿಕೆಯಾಗಿದ್ದು, ಇದರ ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಆದಾಯವು 9,419 ಕೋಟಿ ರೂ. ಇತ್ತು.

2023-24ರ ಸಂಪೂರ್ಣ ಹಣಕಾಸು ವರ್ಷದಲ್ಲಿ ಕಂಪನಿಯ ಲಾಭವು 3,496 ಕೋಟಿ ರೂ.ಗಳಷ್ಟಿದೆ, ಇದು 2022-23ರ ಹಣಕಾಸು ವರ್ಷದಲ್ಲಿ 3,274 ಕೋಟಿ ರೂ. ಇತ್ತು. ಕಳೆದ ಹಣಕಾಸು ವರ್ಷದಲ್ಲಿ ಕಂಪನಿಯ ಒಟ್ಟು ಆದಾಯ 47,501 ಕೋಟಿ ರೂ.ಗಳಾಗಿದ್ದು, 2022-23ರ ಆರ್ಥಿಕ ವರ್ಷದಲ್ಲಿ ಇದು 38,675 ಕೋಟಿ ರೂ. ಇತ್ತು.