ನವದೆಹಲಿ: ರಾಜಕೀಯ ಕಾರಣಕ್ಕೆ ಪಕ್ಷದ ಮುಖಂಡರೊಬ್ಬರು ದೇಶದ್ರೋಹಿ ಹೇಳಿಕೆ ನೀಡಿದ್ದು, ಭಾರತದೊಳಗೆ ಶತ್ರುರಾಷ್ಟ್ರವನ್ನು ನಿರ್ಮಿಸುವ ಘೋಷಣೆ ಹೊರಡಿಸಿದ್ದಾರೆ. ಚುನಾವಣಾ ಪ್ರಚಾರವೊಂದರಲ್ಲಿ ಸಮುದಾಯವೊಂದನ್ನು ಓಲೈಸುವ ಸಲುವಾಗಿ ಅವರು ನೀಡಿರುವ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿದೆ.
ಪಶ್ಚಿಮ ಬಂಗಾಳದಲ್ಲಿನ ಚುನಾವಣಾ ಹಿನ್ನೆಲೆಯಲ್ಲಿ ಟಿಎಂಸಿ ನಡೆಸಿದ್ದ ಭಾಷಣದಲ್ಲಿ ಇಂಥದ್ದೊಂದು ದೇಶದ್ರೋಹಿ ಹೇಳಿಕೆ ಹೊರಬಿದ್ದಿದೆ. ಇಲ್ಲಿನ ಬಿರ್ಭುಮ್ ಪ್ರದೇಶದ ನನೂರ್‌ನ ಬಸಪರ ಎಂಬಲ್ಲಿ ಟಿಎಂಸಿ ಕಾರ್ಯಕರ್ತರು-ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟಿಎಂಸಿ ಮುಖಂಡ ಶೇಖ್ ಅಲಂ ದೇಶದ್ರೋಹಿ ಹೇಳಿಕೆ ನೀಡಿದ್ದಾರೆ.
ಬಿರ್ಭುಮ್‌ನ ನನೂರ್ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಬಿಧನ್ ಚಂದ್ರ ಮಝಿ ಪರವಾಗಿ ಮಾತನಾಡಿದ ಶೇಖ್ ಅಲಂ, ನಾವು (ಮುಸ್ಲಿಮರು) ಶೇ. 30 ಇದ್ದೇವೆ, ಅವರು ಶೇ. 70 ಇದ್ದಾರೆ. ಆ ಶೇ. 70 ಮಂದಿ ಬೆಂಬಲದಿಂದ ಅವರು ಅಧಿಕಾರಕ್ಕೆ ಬರುತ್ತಿದ್ದಾರೆ. ಅದೇ ನಾವು ಶೇ. 30 ಮುಸ್ಲಿಮರು ಒಂದುಗೂಡಿದರೆ ನಾಲ್ಕು ಪಾಕಿಸ್ತಾನವನ್ನು ಸೃಷ್ಟಿಸಬಹುದು. ಆ ಶೇ. 70 ಮಂದಿ ಎಲ್ಲಿಗೆ ಹೋಗುತ್ತಾರೆ? ಎಂದು ಅವರು ಪ್ರಶ್ನಿಸಿದ್ದಾರೆ. ಈ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷ ಓಲೈಕೆ ರಾಜಕಾರಣಕ್ಕೆ ಇಳಿದಿದೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ದಿಲೀಪ್ ಘೋಷ್ ಹಾಗೂ ಬಿಜೆಪಿ ಮುಖಂಡ ಅಮಿತ್ ಮಾಳವೀಯ ವಿರೋಧ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)