ನ್ಯೂಸ್

ಇಂದು ಡಬ್ಲ್ಯುಪಿಎಲ್​ ಫೈನಲ್;​ ಚೊಚ್ಚಲ ಕಪ್​ ಗೆಲುವಿಗಾಗಿ ಆರ್​ಸಿಬಿ-ಡೆಲ್ಲಿ ಕ್ಯಾಪಿಟಲ್ಸ್​​ ಫೈಟ್​

ನವದೆಹಲಿ: ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡವನ್ನು ಸತತ 2 ಬಾರಿ ಮಣಿಸಿ ದಿಟ್ಟವಾಗಿ ಪ್ರಶಸ್ತಿ ಸುತ್ತಿಗೇರಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಕಳೆದ ವರ್ಷ ಕೈತಪ್ಪಿದ ಪ್ರಶಸ್ತಿಯನ್ನು ಈ ಬಾರಿ ಒಲಿಸಿಕೊಳ್ಳುವ ಹಂಬಲದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ವುಮೆನ್ಸ್​ ಪ್ರೀಮಿಯರ್​ ಲೀಗ್​ 2ನೇ ಆವೃತ್ತಿಯ ಫೈನಲ್​ ಪಂದ್ಯದಲ್ಲಿ ಭಾನುವಾರ ಮುಖಾಮುಖಿ ಆಗಲಿವೆ. ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ಕಾದಾಟದಲ್ಲಿ ಸ್ಮೃತಿ ಮಂದನಾ ಮತ್ತು ಮೆಗ್​ ಲ್ಯಾನಿಂಗ್​ ಸಾರಥ್ಯದ ತಂಡಗಳಲ್ಲಿ ಯಾವುದೇ ಗೆದ್ದರೂ ಚೊಚ್ಚಲ ಬಾರಿ ಚಾಂಪಿಯನ್​ ಪಟ್ಟಕ್ಕೇರಿದ ಸಾಧನೆ ಮಾಡಲಿದೆ. ಜತೆಗೆ ಐಪಿಎಲ್​ನಲ್ಲಿ ಆಡುವ ತನ್ನ ಫ್ರಾಂಚೈಸಿಯ ಪುರುಷರ ತಂಡಕ್ಕಿಂತ ಮುನ್ನ ಪ್ರಶಸ್ತಿ ಒಲಿಸಿಕೊಂಡ ವಿಶೇಷ ಮೈಲಿಗಲ್ಲು ನೆಡಲಿದೆ.

ಫೈನಲ್​ನಲ್ಲಿ ತವರು ಪ್ರೇಕ್ಷಕರ ಬೆಂಬಲದ ಬಲವನ್ನು ಪಡೆಯಲಿರುವ ಡೆಲ್ಲಿ ತಂಡ, ಲೀಗ್​ ಹಂತದಲ್ಲಿ ಆಡಿದ 8 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, 2 ಸೋಲಿನ ನಡುವೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿತ್ತು. ಈ ಮೂಲಕ ಡೆಲ್ಲಿ ಸತತ 2ನೇ ಬಾರಿ ನೇರವಾಗಿ ಫೈನಲ್​ಗೇರಿದ್ದರೆ, ಆರ್​ಸಿಬಿ ತಂಡ ಎಲಿಮಿನೇಟರ್​ನಲ್ಲಿ ಹರ್ಮಾನ್​ಪ್ರೀತ್​ ಕೌರ್​ ಸಾರಥ್ಯದ ಮುಂಬೈ ಇಂಡಿಯನ್ಸ್​ ವಿರುದ್ಧ 5 ರನ್​ಗಳಿಂದ ರೋಚಕವಾಗಿ ಗೆಲುವು ದಾಖಲಿಸಿ ಚೊಚ್ಚಲ ಫೈನಲ್​ ಪ್ರವೇಶಿಸಿದೆ.

ಉಭಯ ತಂಡಗಳು ಟೂರ್ನಿಯ 2 ಆವೃತ್ತಿಗಳಲ್ಲಿ ಇದುವರೆಗೆ ಒಟ್ಟು 4 ಬಾರಿ ಮುಖಾಮುಖಿ ಆಗಿದ್ದು, ಎಲ್ಲ ಪಂದ್ಯದಲ್ಲೂ ಡೆಲ್ಲಿ ಗೆಲುವು ದಾಖಲಿಸಿದೆ. ಆದರೆ ಈ ಬಾರಿ ಲೀಗ್​ ಹಂತದ ಕೊನೇ ಮುಖಾಮುಖಿಯಲ್ಲಿ ಆರ್​ಸಿಬಿ ಕೇವಲ 1 ರನ್​ನಿಂದ ಡೆಲ್ಲಿ ಎದುರು ಸೋತಿತ್ತು. ಹೀಗಾಗಿ ಫೈನಲ್​ನಲ್ಲಿ ಸ್ಮೃತಿ ಮಂದನಾ ಬಳಗ ಅದಕ್ಕೆ ಸೇಡು ತೀರಿಸಿಕೊಂಡು ಪ್ರಶಸ್ತಿಗೆ ಮುತ್ತಿಕ್ಕುವ ನಿರೀಕ್ಷೆ ಆರ್​ಸಿಬಿ ಅಭಿಮಾನಿಗಳದ್ದಾಗಿದೆ.

ಆರ್​ಸಿಬಿಗೆ ಪೆರ್ರಿ ಬಲ

ಆಸೀಸ್​ ಆಲ್ರೌಂಡರ್​ ಎಲ್ಲಿಸ್​ ಪೆರ್ರಿ ತೋರುತ್ತಿರುವ ಅಮೋ ನಿರ್ವಹಣೆಯಿಂದ ಆರ್​ಸಿಬಿ ಯಶಸ್ಸು ಕಂಡಿದೆ. ಒಂದೇ ಪಂದ್ಯದಲ್ಲಿ 6 ವಿಕೆಟ್​ ಕಬಳಿಸಿ ಬೀಗಿದ್ದ ಪೆರ್ರಿ ಒಟ್ಟು 312 ರನ್​ ಗಳಿಸಿ ಟೂರ್ನಿಯ ಗರಿಷ್ಠ ರನ್​ ಸ್ಕೋರರ್​ ಎನಿಸಿದ್ದಾರೆ. ಅವರಿಗೆ ಸ್ಮೃತಿ, ರಿಚಾ ಘೋಷ್​, ಸೋಫಿ ಡಿವೈನ್​, ಮೊಲಿನೆಕ್ಸ್​ರಿಂದ ಬ್ಯಾಟಿಂಗ್​ನಲ್ಲಿ ಹೆಚ್ಚಿನ ಬೆಂಬಲ ಸಿಗಬೇಕಿದೆ. ಬೌಲಿಂಗ್​ನಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್​, ಆಶಾ ಶೋಭನಾ, ಜಾರ್ಜಿಯಾ ವಾರೆಹ್ಯಾ, ರೇಣುಕಾ ಸಿಂಗ್​ ಎಲಿಮಿನೇಟರ್​ ನಿರ್ವಹಣೆ ಮುಂದುರಿಸಬೇಕಿದೆ.

ಭರ್ಜರಿ ಲಯದಲ್ಲಿ ಡೆಲ್ಲಿ

ಬಿರುಸಿನ ಬ್ಯಾಟಿಂಗ್​ ಪ್ರದರ್ಶಿಸಬಲ್ಲ ಬ್ಯಾಟರ್​ಗಳೇ ಡೆಲ್ಲಿ ತಂಡದ ಶಕ್ತಿ. ನಾಯಕಿ ಮೆಗ್​ ಲ್ಯಾನಿಂಗ್​ ಜತೆಗೆ ಜೆಮೀಮಾ ರೋಡ್ರಿಗಸ್​, ಶೆಾಲಿ ವರ್ಮ ಬ್ಯಾಟಿಂಗ್​ನಲ್ಲಿ ಉತ್ತಮ ಲಯದಲ್ಲಿದ್ದರೆ, ಅಲಿಸ್​ ಕ್ಯಾಪ್ಸಿ ಮತ್ತು ಮಾರಿಜಾನ್​ ಕಾಪ್​ ಆಲ್ರೌಂಡ್​ ಬಲ ತುಂಬಿದ್ದಾರೆ. ಬೌಲಿಂಗ್​ನಲ್ಲಿ ಜೆಸ್​ ಜೊನಾಸೆನ್​, ಶಿಖಾ ಪಾಂಡೆ ಮತ್ತು ಎಡಗೈ ಸ್ಪಿನ್ನರ್​ ರಾಧಾ ಯಾದವ್​ ಡೆಲ್ಲಿಗೆ ಯಶ ತಂದಿದ್ದಾರೆ.

*ಮುಖಾಮುಖಿ: 4

ಆರ್​ಸಿಬಿ: 0, ಡೆಲ್ಲಿ: 4

*ಫೈನಲ್​ ಆರಂಭ: ರಾತ್ರಿ 7.30

*ನೇರಪ್ರಸಾರ: ಸ್ಪೋರ್ಟ್ಸ್​18, ಜಿಯೋಸಿನಿಮಾ.

ಪುರುಷರನ್ನು ಮೀರಿಸುವ ಹಂಬಲ

ಆರ್​ಸಿಬಿ-ಡೆಲ್ಲಿ ತಂಡಗಳಲ್ಲಿ ಯಾರೇ ಗೆದ್ದರೂ, ಐಪಿಎಲ್​ನಲ್ಲಿ ಆಡುವ ಪುರುಷರ ತಂಡಗಳಿಗಿಂತ ಮುನ್ನ ಪ್ರಶಸ್ತಿಯೊಂದನ್ನು ಗೆದ್ದ ಇತಿಹಾಸ ನಿರ್ಮಾಣವಾಗಲಿದೆ. ಆರ್​ಸಿಬಿ ಪುರುಷರ ತಂಡ ಐಪಿಎಲ್​ನಲ್ಲಿ ಇದುವರೆಗೆ 3 ಬಾರಿ (2009, 2011, 2016) ಫೈನಲ್​ಗೇರಿದ್ದರೂ, ರನ್ನರ್​ಅಪ್​ಗೆ ನಿರಾಸೆ ಅನುಭವಿಸಿದೆ. ಡೆಲ್ಲಿ ಕ್ಯಾಪಿಟಲ್ಸ್​ ಪುರುಷರ ತಂಡವೂ 2020ರ ಐಪಿಎಲ್​ನಲ್ಲಿ ಫೈನಲ್​ಗೇರಿ ರನ್ನರ್​ಅಪ್​ಗೆ ತೃಪ್ತಿಪಟ್ಟಿತ್ತು. ಹೀಗಾಗಿ ಆರ್​ಸಿಬಿ-ಡೆಲ್ಲಿ ತಂಡಗಳಲ್ಲಿ ಯಾರೇ ಡಬ್ಲ್ಯುಪಿಎಲ್​ ಪ್ರಶಸ್ತಿ ಗೆದ್ದರೂ, ಪುರುಷರ ತಂಡಕ್ಕೆ ಕಳೆದ 16 ವರ್ಷಗಳಿಂದ ಸಾಧ್ಯವಾಗದ ಸಾಧನೆಯನ್ನು ಮಾಡಿದಂತಾಗುತ್ತದೆ.

ನನಸಾಗುವುದೇ ಆರ್​ಸಿಬಿ ಅಭಿಮಾನಿಗಳ ಕಪ್​ ಕನಸು?

ಆರ್​ಸಿಬಿ ತಂಡ ಐಪಿಎಲ್​ನಲ್ಲಿ ಕಪ್​ ಗೆಲ್ಲದ ಹೊರತಾಗಿಯೂ ಅಭಿಮಾನಿಗಳ ಅಪಾರ ಪ್ರೀತಿ ಸಂಪಾದಿಸಿದೆ. ಡಬ್ಲ್ಯುಪಿಎಲ್​ ಶುರುವಾದ ಬಳಿಕ ಆರ್​ಸಿಬಿ ಮಹಿಳಾ ತಂಡಕ್ಕೂ ಅಂಥದ್ದೇ ಪ್ರೀತಿ ಲಭಿಸಿದೆ. ಈ ಬಾರಿ ಬೆಂಗಳೂರಿನಲ್ಲಿ ನಡೆದ ಡಬ್ಲ್ಯುಪಿಎಲ್​ ಪಂದ್ಯಗಳಿಗೆ ಭಾರಿ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದು ಇದಕ್ಕೆ ಸಾಕ್ಷಿ. ಇದೀಗ ಮಹಿಳೆಯರ ಫೈನಲ್​ ಪ್ರವೇಶದೊಂದಿಗೆ ಪುರುಷರಿಗಿಂತ ಮುನ್ನ ಮಹಿಳೆಯರೇ ಅಭಿಮಾನಿಗಳ ಕಪ್​ ಕನಸು ನನಸಾಗಿಸುವ ನಿರೀಕ್ಷೆ ಹರಡಿದೆ. "ಈ ಸಲ ಕಪ್​ ನಮ್ದೆ' ಎಂದು ಪ್ರತಿ ಐಪಿಎಲ್​ ಸಮಯದಲ್ಲೂ ಹೇಳುತ್ತ ಕೊನೆಗೆ ನಿರಾಸೆ ಅನುಭವಿಸುವ ಅಭಿಮಾನಿಗಳು ಈಗ, "ಪುರುಷರು ಅಥವಾ ಮಹಿಳೆಯರೇ ಗೆಲ್ಲಲಿ. ಕಪ್​ ಯಾವತ್ತಿದ್ದರೂ ಕಪ್​' ಎಂಬ ಹೊಸ ಡೈಲಾಗ್​ ಹೊಡೆಯುತ್ತಿದ್ದಾರೆ.

ಆರ್​ಸಿಬಿ ಫೈನಲ್​ ಹಾದಿ...

*ಯುಪಿ ವಾರಿಯರ್ಸ್​ ವಿರುದ್ಧ 2 ರನ್​ ಜಯ

*ಗುಜರಾತ್​ ಜೈಂಟ್ಸ್​ ವಿರುದ್ಧ 8 ವಿಕೆಟ್​ ಜಯ

*ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ 25 ರನ್​ ಸೋಲು

*ಮುಂಬೈ ಇಂಡಿಯನ್ಸ್​ ವಿರುದ್ಧ 7 ವಿಕೆಟ್​ ಸೋಲು

*ಯುಪಿ ವಾರಿಯರ್ಸ್​ ವಿರುದ್ಧ 23 ರನ್​ ಗೆಲುವು

*ಗುಜರಾತ್​ ಜೈಂಟ್ಸ್​ ವಿರುದ್ಧ 19 ರನ್​ ಸೋಲು

*ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ 1 ರನ್​ ಸೋಲು

*ಮುಂಬೈ ಇಂಡಿಯನ್ಸ್​ ವಿರುದ್ಧ 7 ವಿಕೆಟ್​ ಜಯ

*ಎಲಿಮಿನೇಟರ್​: ಮುಂಬೈ ವಿರುದ್ಧ 5 ರನ್​ ಜಯ