ನ್ಯೂಸ್

ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿ ಜನತೆಗೆ 400 ಎಲೆಕ್ಟ್ರಿಕ್ ಬಸ್ ಹಸ್ತಾಂತರಿಸಿರುವ ಕುರಿತು ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದರು. ಈ ಪತ್ರಿಕಾಗೋಷ್ಠಿಯಲ್ಲಿ, ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದರು.

ಸರ್ಕಾರಕ್ಕೆ ಧನ್ಯವಾದ ಹೇಳಿದ ಕೇಜ್ರಿವಾಲ್
ಇಂದು ಕೇಜ್ರಿವಾಲ್ ಅವರು ಸಾರ್ವಜನಿಕರಿಗೆ ಹಸ್ತಾಂತರಿಸಿದ 400 ಎಲೆಕ್ಟ್ರಿಕ್ ಬಸ್‌ಗಳಿಗೆ ನೀಡಿದ ಸಬ್ಸಿಡಿಗಾಗಿ ಮೋದಿ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು. ಸಬ್ಸಿಡಿ ಯೋಜನೆಯ 921 ಬಸ್‌ಗಳಲ್ಲಿ ಈ ಬಸ್‌ಗಳನ್ನು ಸೇರಿಸಲಾಗಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರದಿಂದ 417 ಕೋಟಿ ರೂಪಾಯಿ ಸಹಾಯಧನ ನೀಡಲಾಗಿದೆ. ದೆಹಲಿ ಸರ್ಕಾರ 3674 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಿದೆ ಎಂದು ಹೇಳಿದರು.

ಇದಕ್ಕಾಗಿ ನಾವು ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಕೇಂದ್ರವು ಎಲ್ಲ ಬಸ್‌ಗಳಿಗೆ ಸಬ್ಸಿಡಿ ನೀಡಬೇಕೆಂದು ನಾವು ಬಯಸುತ್ತೇವೆ. ಮುಂದೆಯೂ ಸರ್ಕಾರ ಈ ರೀತಿಯ ಸಹಾಯವನ್ನು ಮಾಡಬೇಕು ಎಂದು ಕೋರಿದರು.

ದೆಹಲಿಯಲ್ಲಿ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳಿವೆ!
ದೆಹಲಿಯ ರಸ್ತೆಗಳಲ್ಲಿ ಈಗ ಒಟ್ಟು 800 ಎಲೆಕ್ಟ್ರಿಕ್ ಬಸ್‌ಗಳು ಓಢಾಡುತ್ತಿವೆ. ಇದು ಇಡೀ ದೇಶದಲ್ಲೇ ಅತಿ ಹೆಚ್ಚು. 2025 ರ ಅಂತ್ಯದ ವೇಳೆಗೆ ದೆಹಲಿಯ ರಸ್ತೆಗಳಲ್ಲಿ ಒಟ್ಟು 8 ಸಾವಿರ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸುವುದು ನಮ್ಮ ಗುರಿಯಾಗಿದೆ. ಆ ಸಮಯದಲ್ಲಿ ದೆಹಲಿಯಲ್ಲಿ 10 ಸಾವಿರಕ್ಕೂ ಹೆಚ್ಚು ಬಸ್‌ಗಳು ಇರುತ್ತವೆ, ಅದರಲ್ಲಿ 80% ಎಲೆಕ್ಟ್ರಿಕ್ ಆಗಿರುತ್ತದೆ. ಶೀಘ್ರದಲ್ಲೇ ದೆಹಲಿಯು ತನ್ನ ಅತ್ಯುತ್ತಮ ಎಲೆಕ್ಟ್ರಿಕ್ ಬಸ್‌ಗಳಿಗಾಗಿ ಪ್ರಪಂಚದಾದ್ಯಂತ ಹೆಸರುವಾಸಿಯಾಗಲಿದೆ ಎಂದು ಕೇಜ್ರಿವಾಲ್ ತಿಳಿಸಿದರು.

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜಿ 20 ಶೃಂಗಸಭೆಗೆ ಮುನ್ನ ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ 400 ಎಲೆಕ್ಟ್ರಿಕ್ ಬಸ್‌ಗಳಿಗೆ ಹಸಿರು ನಿಶಾನೆ ತೋರಿದರು. ಒಂದು ದಿನ ಮುಂಚಿತವಾಗಿ, ದೆಹಲಿ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಅವರು ಐಪಿ ಡಿಪೋದಲ್ಲಿ ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಿದರು. ಸೆಪ್ಟೆಂಬರ್ 9 ಮತ್ತು 10 ರಂದು ರಾಷ್ಟ್ರ ರಾಜಧಾನಿಯಲ್ಲಿ ಜಿ 20 ಶೃಂಗಸಭೆ ನಡೆಯಲಿದೆ.