ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರಿಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ (70) ಮೇಲೆ ಗುರುವಾರ ಗುಂಡಿನ ದಾಳಿ ನಡೆದಿದೆ. ಗುಂಡೇಟಿನಿಂದ ಖಾನ್ ಕಾಲಿಗೆ ಗಾಯವಾಗಿದ್ದು, ಲಾಹೋರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಕ್ಷದ ಒಬ್ಬ ಕಾರ್ಯಕರ್ತ ಘಟನೆಯಲ್ಲಿ ಮೃತಪಟ್ಟಿದ್ದು, ಮೂವರು ನಾಯಕರು ಸೇರಿ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಪಿಟಿಐ ಪಕ್ಷದ ನಾಯಕ ಫಾವದ್ ಚೌಧರಿ ದೃಢಪಡಿಸಿದ್ದಾರೆ. ಕೆಲವು ತಿಂಗಳ ಹಿಂದೆ ಪ್ರಧಾನಿ ಪಟ್ಟದಿಂದ ಪದಚ್ಯುತರಾದ ಖಾನ್, ಸರ್ಕಾರದ ವಿರುದ್ಧ ದೀರ್ಘ ಯಾತ್ರೆ (ಲಾಂಗ್ ಮಾರ್ಚ್) ನಡೆಸುತ್ತಿದ್ದ ಖಾನ್ಗೆ ಪ್ರಾಣ ಬೆದರಿಕೆ ಇತ್ತು. ಇದು ಖಾನ್ರನ್ನು ಹತ್ಯೆ ಮಾಡುವ ಯತ್ನವಾಗಿದೆ ಎಂದು ಅವರ ನೇತೃತ್ವದ ಪಿಟಿಐ ಪಕ್ಷ ಆರೋಪಿಸಿದೆ.
ಲಾಂಗ್ ಮಾರ್ಚ್ ಭಾಗವಾಗಿ ಪಂಜಾಬ್ ಪ್ರಾಂತ್ಯದ ಗುಜ್ರನ್ವಾಲಾದ ಅಲ್ಲಾವಾಲಾ ಚೌಕದಲ್ಲಿ ರ‍್ಯಾಲಿ ನಡೆಯುತ್ತಿದ್ದಾಗ ಖಾನ್ ಕಂಟೇನರ್ ಮೇಲಿದ್ದಾಗ ಅಪರಿಚಿತ ಬಂದೂಕುಧಾರಿ ಗುಂಡು ಹಾರಿಸಿದ ಎಂದು ಪಾಕ್ನ ಜಿಯೋ ಟಿವಿ ವರದಿ ಮಾಡಿದೆ. ಗುಂಡೇಟಿನಿಂದ ಗಾಯಗೊಂಡ ಖಾನ್ರನ್ನು ಆಸ್ಪತ್ರೆಗೆ ಸಾಗಿಸುವಾಗ ಅವರು ಬೆಂಬಲಿಗರತ್ತ ಕೈ ಬೀಸಿದರು ಎಂದು ವರದಿಯಾಗಿದೆ. ದಾಳಿ ನಡೆದ ತಕ್ಷಣವೇ ಗಾಯಾಳು ಖಾನ್ರನ್ನು ಬುಲೆಟ್ಪ್ರೂಫ್ ಕಾರಿನತ್ತ ಒಯ್ಯುತ್ತಿರುವ ವಿಡಿಯೋ ದೃಶ್ಯಗಳು ವೈರಲ್ ಆಗಿವೆ.
ಪ್ರಧಾನಿ ಷರೀಫ್ ಖಂಡನೆ
ಖಾನ್ ಮೇಲೆ ನಡೆದಿರುವ ಗುಂಡಿನ ದಾಳಿಯನ್ನು ಪಾಕ್ ಪ್ರಧಾನಿ ಷೆಹಬಾಜ್ ಷರೀಫ್ ಖಂಡಿಸಿದ್ದು ತಕ್ಷಣವೇ ಈ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಪಂಜಾಬ್ ಪೊಲೀಸ್ನ ಇನ್ಸ್ಪೆಕ್ಟರ್ ಜನರಲ್ ಮತ್ತು ಮುಖ್ಯ ಕಾರ್ಯದರ್ಶಿಯಿಂದ ತಕ್ಷಣವೇ ವರದಿ ತರಿಸಿಕೊಳ್ಳುವಂತೆ ಆಂತರಿಕ ಖಾತೆ ಸಚಿವ ರಾಣಾ ಸನಾವುಲ್ಲಾರಿಗೆ ಷರೀಫ್ ನಿರ್ದೇಶಿಸಿದ್ದಾರೆ. ಭದ್ರತೆ ಮತ್ತು ತನಿಖೆ ನಡೆಸಲು ಪಂಜಾಬ್ ಸರ್ಕಾರಕ್ಕೆ ಎಲ್ಲ ಬೆಂಬಲ ನೀಡಲಾಗುವುದೆಂದು ತಿಳಿಸಿದ್ದಾರೆ. ಖಾನ್ ಮೇಲಿನ ದಾಳಿ‘ಹೇಯ ಹತ್ಯಾ ಪ್ರಯತ್ನವಾಗಿದೆ ಎಂದು ಪಾಕ್ ಅಧ್ಯಕ್ಷ ಅರಿಫ್ ಅಲ್ವಿ ಹೇಳಿದ್ದಾರೆ. ದಾಳಿಯನ್ನು ಸೇನೆ ಕೂಡ ಖಂಡಿಸಿದೆ.
ಕೊಲೆ ಯತ್ನ ಒಪ್ಪಿಕೊಂಡ ಆರೋಪಿ
ದಾಳಿಕೋರನನ್ನು ಪೊಲೀಸರು ತಕ್ಷಣವೇ ಬಂಧಿಸಿದ್ದಾರೆ. ‘ಖಾನ್ ಜನರನ್ನು ಹಾದಿ ತಪ್ಪಿಸುತ್ತಿದ್ದಾರೆ ಮತ್ತು ಧರ್ಮನಿಂದನೆ ಮಾಡುತ್ತಿದ್ದಾರೆ. ಆದ್ದರಿಂದ ಕೊಲ್ಲಲು ಪ್ರಯತ್ನಿಸಿದೆ’ ಎಂದು ಆರೋಪಿ ವಿಡಿಯೋ ಹೇಳಿಕೆಯಲ್ಲಿ ಆಕ್ರೋಶ ಹೊರಹಾಕಿದ್ದಾನೆ.
ಅನುಮಾನ ಹುಟ್ಟುಹಾಕಿದ ದಾಳಿ
ಸಂಸತ್ತಿಗೆ ಅವಧಿಗೆ ಮುನ್ನವೇ ಚುನಾವಣೆ ನಡೆಯಬೇಕು ಎಂಬ ಬೇಡಿಕೆ ಯೊಂದಿಗೆ ಇಮ್ರಾನ್ ಖಾನ್ ನೇತೃತ್ವದಲ್ಲಿ ನಡೆಯುತ್ತಿರುವ ಯಾತ್ರೆ ರಾಜಕೀಯ ಸಂಚಲನ ಮೂಡಿಸಿದ್ದು ಆಡಳಿತಗಾರರ ಕಣ್ಣುರಿಗೆ ಕಾರಣವಾಗಿದೆ. ಅದರ ಮಧ್ಯೆಯೇ ಖಾನ್, ಸೇನೆ ಮತ್ತು ಐಎಸ್ಐ ವಿರುದ್ಧ ಕಿಡಿಕಾರಿದ್ದಾರೆ. ಇವೆಲ್ಲದರ ಹಿನ್ನೆಲೆಯಲ್ಲಿ ಅವರ ಮೇಲೆ ಗುಂಡಿನ ದಾಳಿ ನಡೆದಿರುವುದು ಅನೇಕ ಅನುಮಾನ ಹುಟ್ಟಿಹಾಕಿದೆ. 6 ತಿಂಗಳ ಹಿಂದೆಯೇ ತನ್ನ ಹತ್ಯೆಗೆ ಸಂಚು ನಡೆಯುತ್ತಿದೆ ಎಂದು ಖಾನ್ ಹೇಳಿದ್ದರು.
ಪಾಕಿಸ್ತಾನದ ರಕ್ತಸಿಕ್ತ ಇತಿಹಾಸ
ರಾಜಕೀಯ ಸೇಡು ಹಾಗೂ ಹತ್ಯೆ ಪಾಕ್ ರಾಜಕೀಯದಲ್ಲಿ ಹಾಸುಹೊಕ್ಕಾಗಿದೆ. 1947ರಲ್ಲಿ ಸ್ಥಾಪನೆಯಾದಾಗಿನಿಂದ ಇದುವರೆಗೆ ಹಲವು ರಾಜಕೀಯ ಮುಖಂಡರ ಹತ್ಯೆ ನಡೆದಿದ್ದು ಕೆಲವರನ್ನು ಗಲ್ಲಿಗೇರಿಸಲಾಗಿದೆ. ಪಾಕ್ ಪ್ರಥಮ ಪ್ರಧಾನಿ ಲಿಯಾಖತ್ ಅಲಿ ಖಾನ್ರನ್ನು ರಾವಲ್ಪಿಂಡಿಯಲ್ಲಿ ಹತ್ಯೆ ನಡೆಸಲಾಗಿತ್ತು. ಪ್ರಧಾನಿಯಾಗಿದ್ದ ಜುಲ್ಪಿಕರ್ ಅಲಿ ಭುಟ್ಟೋರನ್ನು ಮಿಲಿಟರಿ ಆಡಳಿತಗಾರ ಜನರಲ್ ಜಿಯಾ ಉಲ್ ಹಕ್ ನೇಣಿಗೇರಿಸಿದ್ದರು. ಅದಾದ ಒಂಬತ್ತು ವರ್ಷಗಳ ನಂತರ ಹಕ್ ವಿಮಾನ ಅಪಘಾತವೊಂದರಲ್ಲಿ ಮೃತಪಟ್ಟರು. ಎರಡು ಬಾರಿ ಪ್ರಧಾನಿಯಾಗಿದ್ದ ಬೆನಜೀರ್ ಭುಟ್ಟೋರನ್ನು 2007 ಡಿಸೆಂಬರ್ 27ರಂದು ರಾವಲ್ಪಿಂಡಿಯಲ್ಲಿ ಚುನಾವಣಾ ರ್ಯಾಲಿಯೊಂದರಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.
ಭಾರತದ ಪ್ರತಿಕ್ರಿಯೆ
ಇಮ್ರಾನ್ ಖಾನ್ ಮೇಲೆ ನಡೆದ ಗುಂಡಿನ ದಾಳಿ ಹಿನ್ನೆಲೆಯಲ್ಲಿ ಪಾಕ್ನಲ್ಲಿನ ವಿದ್ಯಮಾನಗಳನ್ನು ನಿಕಟವಾಗಿ ಗಮನಿಸುತ್ತಿರುವುದಾಗಿ ಭಾರತ ಹೇಳಿದೆ. ‘ಪಾಕ್ನಲ್ಲಿನ ಬೆಳವಣಿಗೆಯ ಮೇಲೆ ನಿಕಟವಾದ ಕಣ್ಣಿಟ್ಟಿದ್ದು ಮುಂದೆಯೂ ಸೂಕ್ಷ್ಮವಾಗಿ ಅವಲೋಕಿಸಲಾಗುತ್ತದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರವಿಂದ ಬಾಗ್ಚಿ ಹೇಳಿದ್ದಾರೆ.