ನ್ಯೂಸ್

ದಂಡ ವಿಧಿಸಿದ್ದಕ್ಕೆ ಕುಡಿದು ಬಂದು ಕೋರ್ಟ್​ ಆವರಣದಲ್ಲಿ ಅನುಚಿತ ವರ್ತನೆ; ಆರೋಪಿ ಬಂಧನ

ಚಿಕ್ಕಮಗಳೂರು: ನ್ಯಾಯಾಲಯದಲ್ಲಿ ಫೈನ್ ಹಾಕಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿರುವ ಘಟನೆ ಜಿಲ್ಲೆಯ 1ನೇ ಹೆಚ್ಚುವರಿ ಕಿರಿಯ ಶ್ರೇಣಿಯ ನ್ಯಾಯಾಲಯದಲ್ಲಿ ನಡೆದಿದೆ.

ಆರೋಪಿ ಲೋಕೇಶ್ ತಿಂಗಳ ಹಿಂದೆ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ ಸಂಚಾರ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ. ಈ ವೇಳೆ ಡ್ರಿಂಕ್ ಅಂಡ್ ಡ್ರೈವ್ ಕೇಸ್​ ದಾಖಲಾಗಿತ್ತು. ನಂತರ ಕೋರ್ಟ್​ಗೆ ಬಂದು 5 ಸಾವಿರ ದಂಡ ಕಟ್ಟಿ ಹೋಗಿದ್ದ. ಇದೀಗ ಆರೋಪಿ ಮತ್ತೆ ಕೋರ್ಟ್​ ಆವರಣಕ್ಕೆ ಬಂದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿದ್ದಾನೆ.

ಜಡ್ಜ್​ ದಂಡ ವಿಧಿಸಿರುವುದಕ್ಕೆ ಕೋಪಗೊಂಡ ಆರೋಪಿ ಕುಡಿದು ನ್ಯಾಯಾಲಯದ ಆವರಣಕ್ಕೆ ಬಂದಿದ್ದಾನೆ. ನಾನು ಏನು ತಪ್ಪು ಮಾಡಿದ್ದೇನೆಂದು ದಂಡ ವಿಧಿಸಿದ್ದೀರಾ ಎಂದು ಕೂಗಾಡಿದ್ದಾನೆ. ನಂತರ ಜಡ್ಜ್​ ಮೇಲೆ ಚಪ್ಪಲಿ ಎಸೆದು ಆಕ್ರೋಶ ಮೆರೆದಿದ್ದಾನೆ.

ಕೂಡಲೇ ಎಚ್ಚೆತ್ತ ಪೊಲೀಸರು ಆರೋಪಿ ಲೋಕೇಶ್​​ನನ್ನು ಬಂಧಿಸಿದ್ದಾರೆ. ಈ ಬಗ್ಗೆ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.