ದೇಶದಾದ್ಯಂತ ಇರುವ ಲಕ್ಷಾಂತರ ನಿರುದ್ಯೋಗಿಗಳ ಮಾಹಿತಿಯನ್ನು ಕದ್ದಿರುವ ಸೈಬರ್ ವಂಚಕರು ಅವರೆಲ್ಲರಿಗೆ ಸೇರಬೇಕಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ನಿರುದ್ಯೋಗ ಭತ್ಯೆಯನ್ನು ದೋಚಿದ್ದಾರೆ. ಸರ್ಕಾರ ಈ ಬಗ್ಗೆ ತನಿಖೆಗೆ ಆದೇಶಿಸಿದೆ.
ಅಮೆರಿಕದ ವಾಷಿಂಗ್ಟನ್ನಲ್ಲಿರುವ ಲಕ್ಷಾಂತರ ನಿರುದ್ಯೋಗಿಗಳು ಈಗ ಕೆಲಸವೂ ಇಲ್ಲದೆ, ಇತ್ತ ಭತ್ಯೆಯೂ ಇಲ್ಲದೆ ಉಪವಾಸ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಈ ವಂಚನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಮೆರಿಕದ ಉದ್ಯೋಗ ಭದ್ರತಾ ಇಲಾಖೆ ತನಿಖೆಗೆ ಆದೇಶಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅಮೆರಿಕದ ಉದ್ಯೋಗ ಭದ್ರತಾ ಇಲಾಖೆಯ ಕಮಿಷನರ್ ಸುಜಿ ಲೆವೀನ್, ಫೆಡರಲ್ ಪೊಲೀಸರು ಈಗಾಗಲೆ ತನಿಖೆ ಆರಂಭಿಸಿದ್ದಾರೆ. ಹಣಕಾಸು ಸಂಸ್ಥೆಗಳು ಮತ್ತು ಅಮೆರಿಕದ ಕಾರ್ಮಿಕ ಇಲಾಖೆಯ ಸಹಕಾರದೊಂದಿಗೆ ತನಿಖೆ ನಡೆಯುತ್ತಿದೆ. ವಂಚಕರ ಬ್ಯಾಂಕ್ ಖಾತೆಗೆ ಸಂದಾಯವಾಗಿರುವ ಹಣವನ್ನು ವಾಪಸು ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಎಷ್ಟು ನಿರುದ್ಯೋಗಿಗಳಿಗೆ ವಂಚನೆಯಾಗಿದೆ, ವಂಚನೆಯ ಮೊತ್ತ ಎಷ್ಟು ಎಂಬ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿರುವ ಸುಜಿ ಲೆವೀನ್, ಸರ್ಕಾರ ತಕ್ಷಣವೇ ನಿರುದ್ಯೋಗ ಭತ್ಯೆ ವಿತರಣೆಯನ್ನು ಸ್ಥಗಿತಗೊಳಿಸಿದೆ. ತನ್ಮೂಲಕ ಕೋಟ್ಯಂತರ ಡಾಲರ್ ಮೊತ್ತದ ಹಣದ ಉಳಿತಾಯವಾಗಿದೆ ಎಂದು ಹೇಳಿದ್ದಾರೆ.
ಸದ್ಯಕ್ಕೆ ನಿರುದ್ಯೋಗ ಭತ್ಯೆಗೆ ಸಲ್ಲಿಸಿರುವ ಎಲ್ಲ ಮನವಿಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಈ ಹಿಂದೆ ನಿರುದ್ಯೋಗಿಗಳು ಅರ್ಜಿ ಸಲ್ಲಿಸಿದ 24ರಿಂದ 48 ಗಂಟೆಯೊಳಗೆ ಭತ್ಯೆಯನ್ನು ಅವರವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಸಂದಾಯ ಮಾಡಲಾಗುತ್ತಿತ್ತು. ಆದರೆ, ಈಗ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿರುವುದರಿಂದ, ಭತ್ಯೆ ಹಂಚಿಕೆಯಲ್ಲಿ ಎರಡು ದಿನ ವಿಳಂಬವಾಗುತ್ತಿದೆ ಎಂದು ವಿವರಿಸಿದ್ದಾರೆ.
ನೈಜೀರಿಯಾದವರ ಕೈವಾಡ: ನಿರುದ್ಯೋಗ ಭತ್ಯೆ ವಂಚನೆ ಪ್ರಕರಣದ ಹಿಂದೆ ನೈಜೀರಿಯಾದವರ ಕೈವಾಡ ಇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕೆಲ ವಾರಗಳ ಹಿಂದಷ್ಟೇ ಅಮೆರಿಕ ಬೇಹುಗಾರಿಕಾ ಪಡೆ ಸಿಬ್ಬಂದಿ ವಾಷಿಂಗ್ಟನ್ನಲ್ಲಿ ಬೃಹತ್ ವಂಚನೆ ಎಸಗಲು ನೈಜೀರಿಯಾದ ವಂಚಕರ ಜಾಲ ಸಕ್ರಿಯವಾಗಿರುವುದಾಗಿ ಎಚ್ಚರಿಕೆ ನೀಡಿತ್ತು. ನ್ಯೂಯಾರ್ಕ್ ಟೈಮ್ಸ್ ಮತ್ತು ಸಿಯಾಟಲ್ ಟೈಮ್ಸ್ ಪತ್ರಿಕೆಗಳು ಈ ಬಗ್ಗೆ ವರದಿ ಮಾಡಿದ್ದವು. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಲು ಸುಜಿ ಲೆವೀನ್ ನಿರಾಕರಿಸಿದ್ದಾರೆ.